

ಗುರುಪುರ: ಉಳಾಯಿಬೆಟ್ಟು ಗ್ರಾಮ ಪಂಚಾಯಿತಿಯ ಪೆರ್ಮಂಕಿ ಕೈಗುರಿಯಲ್ಲಿ ಭೂಕುಸಿತ ಸಂಭವಿಸಿದ ಪ್ರದೇಶಕ್ಕೆ ಮಂಗಳವಾರ ಸಂಜೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಪರ ಜಿಲ್ಲಾಧಿಕಾರಿ(ಎಡಿಸಿ) ಸಂತೋಷ್ ಕುಮಾರ್, ಸಹಾಯಕ ಆಯುಕ್ತ(ಎಸಿ) ಹರ್ಷವರ್ಧನ, ಕಂದಾಯ ನಿರೀಕ್ಷಕ ಪೂರ್ಣಚಂದ್ರ, ಪಂಚಾಯಿತಿ ಅಧ್ಯಕ್ಷ ಹರಿಕೇಶ ಶೆಟ್ಟಿ ನಡಿಗುತ್ತು, ಉಪಾಧ್ಯಕ್ಷ ದಿನೇಶ್ ಕುಮಾರ್ ಬಜಿಲೊಟ್ಟು, ಪಿಡಿಒ ಅನಿತಾ ಕ್ಯಾಥರಿನ್ ಮತ್ತಿತರರು ಇದ್ದರು. ಭೂಕುಸಿತದ ಸಂತ್ರಸ್ತರು ಹಾಗೂ ಅಪಾಯ ಎದುರಿಸುತ್ತಿರುವ ಮಂದಿ ಅಧಿಕಾರಿಗಳಲ್ಲಿ ತಮ್ಮ ಅಳಲು ತೋಡಿಕೊಂಡರು.
ಪೆರ್ಮಂಕಿ-ಕೈಗುರಿ ಮತ್ತಿತರ ಪ್ರದೇಶಗಳ ರಸ್ತೆ ಸಂಚಾರ ಕಡಿದು ಹೋಗಿರುವ ಹಿನ್ನೆಲೆಯಲ್ಲಿ ಈ ಭಾಗದ ಜನರಿಗೆ ಅನುಕೂಲವಾಗುವಂತೆ ಪೆರ್ಮಂಕಿ ಶ್ರೀ ಸದಾಶಿವ ದೇವಸ್ಥಾನದಿಂದ ಅಂಗಡಿಪಡ್ಪು ಎಸ್‌ಟಿ ಕಾಲನಿಯವರೆಗೆ ತಾತ್ಕಾಲಿಕ ಮಣ್ಣಿನ ರಸ್ತೆ ದುರಸ್ತಿ ಮಾಡುವಂತೆ ಅಧಿಕಾರಿಗಳ ತಂಡಕ್ಕೆ ಪಂಚಾಯಿತಿ ಅಧ್ಯಕ್ಷರ ನೇತೃತ್ವದ ನಿಯೋಗ ಮನವಿ ಸಲ್ಲಿಸಿತು.