ಕಾಡಾನೆ ಹಾವಳಿಯಿಂದ ಕೃಷಿಕರಿಗೆ ಆತಂಕ

elephant
Published on

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬೊಳಿಯಾರು ಸಮೀಪ ಕಾಡಾನೆ ಹಾವಳಿ ಮುಂದುವರಿದಿದ್ದು, ಕೃಷಿಕರು ಆತಂಕದಲ್ಲಿದ್ದಾರೆ.

ಇಲ್ಲಿ ಕಳೆದ ಮೂರು ದಿನಗಳಿಂದ ಕಾಡಾನೆಗಳು ಓಡಾಟ ನಡೆಸುತ್ತಿದೆ. ಹಲವರ ತೋಟಗಳಿಗೆ ಆನೆ ನುಗ್ಗಿದೆ. ಬಾಳೆ, ಅಡಕೆ ಗಿಡಗಳನ್ನು ನಾಶಗೊಳಿಸಿವೆ. ಕೊಕ್ಕಡದಲ್ಲಿ ಆನೆ ದಾಳಿಗೆ ವ್ಯಕ್ತಿ ಬಲಿಯಾದ ಘಟನೆ ಬಳಿಕ ಆನೆಯನ್ನು ಓಡಿಸಲು ಜನರು ಭಯಪಡುವ ವಾತಾವರಣ ನಿರ್ಮಾಣವಾಗಿದೆ.

ಧರ್ಮಸ್ಥಳ ಪೆರಿಯಶಾಂತಿ ರಸ್ತೆ ಬದಿಯಲ್ಲಿ ಈ ಆನೆ ಓಡಾಟ ನಡೆಸುತ್ತಿದೆ. ಬುಧವಾರ ಬೆಳಗ್ಗೆ 9ಕ್ಕೆ ಒಂಟಿ ಸಲಗವೊಂದು ಬೊಳಿಯಾರಿನಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಅರಣ್ಯದತ್ತ ಸಾಗಿದೆ. ಈ ವೇಳೆ ವಾಹನ ಇಲ್ಲದಿದ್ದುದರಿಂದ ಅಪಾಯ ಸಂಭವಿಸಿಲ್ಲ. ಗುರುವಾರ ಕಾಡಾನೆ ಬೊಳಿಯಾರು ಪರಿಸರಕ್ಕೆ ಬಂದಿದ್ದು, ಕೃಷಿಗೆ ಹಾನಿ ಉಂಟುಮಾಡಿದೆ. ಕಾಡಾನೆ ನಿರಂತರ ಕೃಷಿ ಹಾನಿ ಮಾಡುತ್ತಿದ್ದರೂ ಅವುಗಳನ್ನು ಓಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಸ್ಥಳೀಯ ಕೃಷಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net