

ಗಂಗೊಳ್ಳಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ, ಶಿಶು ಅಭಿವೃದ್ಧಿ ಯೋಜನೆ ಕುಂದಾಪುರ, ಗ್ರಾಪಂ ನಾಡ, ಮೂರ್ತೆದಾರರ ಸೇವಾ ಸಹಕಾರ ಸಂಘ ನಾಡ ಸಹಯೋಗದಲ್ಲಿ ನಾಡ ಗ್ರಾಪಂ ಸಭಾಂಗಣದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮದ ಭಾಗವಾಗಿ ಪೋಷಣ್ ಮಾಸಾಚರಣೆ ಮತ್ತು ಪೌಷ್ಟಿಕ ಆಹಾರ ಅರಿವು ಕಾರ್ಯಕ್ರಮ ಶುಕ್ರವಾರ ನಡೆಯಿತು.
ನಾಡ ಗ್ರಾಪಂ ಅಧ್ಯಕ್ಷೆ ಪಾರ್ವತಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಪ್ರತ್ವೀಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೇಷ್ಠ ವೈದ್ಯ ರಾಜ್ಯ ಪ್ರಶಸ್ತಿ ಪಡೆದ ನಾಡ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯ ಡಾ.ಚಿಕ್ಮರಿ ಅವರನ್ನು ಸನ್ಮಾನಿಸಲಾಯಿತು.
ಶಿಶು ಅಭಿವೃದ್ಧಿ ಯೋಜನೆ ಮರವಂತೆ ವಲಯ ಮೇಲ್ವಿಚಾರಕಿ ಬೇಬಿ ಆರೋಗ್ಯ ಮಾಹಿತಿ ನೀಡಿದರು. ಪೋಷಣ್ ಅಭಿಯಾನ ಕುಂದಾಪುರ ತಾಲೂಕಿನ ಸಂಯೋಜಕ ಮಂಜುನಾಥ ಅಭಿಯಾನದ ಆರಂಭ ಹಾಗೂ ಅದರ ಮಹತ್ವದ ಬಗ್ಗೆ ತಿಳಿಸಿದರು. ಗ್ರಾಮದ ಹಿರಿಯರಾದ ಲಚ್ಚು ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಪೋಷಕಾಂಶ ಆಹಾರ ಪದ್ಧತಿ ಮಾಹಿತಿ ನೀಡಿದರು. 9 ಗರ್ಭಿಣಿಯರಿಗೆ ಸೀಮಂತದ ಬಾಗಿನ ನೀಡಲಾಯಿತು.
ಗ್ರಾಪಂ ಸದಸ್ಯ ಉದಯ ಜೋಗಿ, ಮೂರ್ತೆದಾರರ ಸೇವಾ ಸಹಕಾರ ಸಂಘ ನಾಡ ಶಾಖೆ ಕಾರ್ಯದರ್ಶಿ ನಾಗರತ್ನ ಉಪಸ್ಥಿತರಿದ್ದರು. ಗ್ರಾಪಂ ವ್ಯಾಪ್ತಿಯ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಗ್ರಾಪಂ ಸಿಬ್ಬಂದಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ಅಂಗನವಾಡಿ ಕಾರ್ಯಕರ್ತೆ ಸುಶೀಲಾ ನಾಡ ಕಾರ್ಯಕ್ರಮ ನಿರೂಪಿಸಿದರು.