

ಧಾರವಾಡ: ವಿದ್ಯಾಕಾಶಿ ಧಾರವಾಡಕ್ಕೆ ಕಲಿಯಲು ಪರ ಊರು ಮತ್ತು ಪರಜಿಲ್ಲೆಗಳಿಂದ ಬರುವ ಸಾವಿರಾರು ವಿದ್ಯಾರ್ಥಿಗಳ ಕನಸಿಗೆ ಬೀಗ ಹಾಕಿದಂತಾದ ಘಟನೆ ಧಾರವಾಡದಲ್ಲಿ ನಡೆದಿದೆ.
ಇದೇ ಮೊದಲ ಬಾರಿಗೆ ದಾಖಲೆ ಸಂಖ್ಯೆಯಲ್ಲಿ ಧಾರವಾಡಕ್ಕೆ ಹೊರ ಜಿಲ್ಲೆಗಳಿಂದ ಪಿಯುಸಿ, ಪದವಿ ಶಿಕ್ಷಣಕ್ಕೆ ಬಂದಿರುವ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಸೀಟ್ ಸಿಕ್ಕರೂ ಹಾಸ್ಟೆಲ್ನಲ್ಲಿ ಮಾತ್ರ ಸೀಟ್ ಇಲ್ಲದಂತಾಗಿದೆ. ಇದರಿಂದ ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಅಡಿಯ ಹಾಸ್ಟೇಲ್‌ಗಳ ಮುಂದೆಯೇ ಪ್ರತಿನಿತ್ಯ ಕುಳಿತುಕೊಂಡು ತಮ್ಮ ಅಳಲನ್ನು ತೋರ್ಪಡಿಸುತ್ತಿದ್ದಾರೆ.
ಹಾಸ್ಟೆಲ್ ಸಿಕ್ಕದಿದ್ದರೆ ನಾವು ಉಳಿದುಕೊಳ್ಳುವುದಾದರೂ ಎಲ್ಲಿ? ನಮ್ಮ ಹೆತ್ತವರು ಕೂಲಿ ನಾಲಿ ಮಾಡಿ ನಮ್ಮನ್ನು ಓದಲು ಕಳಿಸುತ್ತಾರೆ. ಪ್ರತಿ ತಿಂಗಳು ಸಾವಿರಗಟ್ಟಲೇ ಬಾಡಿಗೆ ಕೊಟ್ಟು ಹೊರಗೆ ಮನೆ ಮಾಡಿಕೊಡಲು ಅವರ ಬಳಿ ಹಣವಿಲ್ಲ. ನಾವು ಬಡವರು ಎಲ್ಲಿ ಹೋಗುವುದು? ಎಂದು ವಿದ್ಯಾರ್ಥಿಗಳು ಕಣ್ಣೀರಿಟ್ಟಿದ್ದಾರೆ.
ಈಗಾಗಲೇ ಧಾರವಾಡದಲ್ಲಿರುವ ಬಹುತೇಕ ಎಲ್ಲಾ ಸರ್ಕಾರಿ ಹಾಸ್ಟೆಲ್ ಗಳೂ ಹೌಸ್ಫುಲ್ ಆಗಿವೆ. ಬಿಸಿಎಂ ಹಾಸ್ಟೇಲ್‌ಗೆ ಅವಕಾಶ ಇರೋದು 1200ರಷ್ಟು ಪ್ರವೇಶಕ್ಕೆ ಮಾತ್ರ. ಆದರೆ ಇದಕ್ಕಾಗಿ ಬಂದಿರುವ ಅರ್ಜಿಗಳು 7000ವನ್ನೂ ದಾಟಿವೆ. ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಹಾಸ್ಟೆಲ್ಗಳಿಗೆ ಎಸ್ಸಿ ಎಸ್ಟಿ ಸೇರಿ ಸುಮಾರು 650ರಷ್ಟು ಮಾತ್ರ ಪ್ರವೇಶವಿದ್ದು, 10 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಈ ಹಿನ್ನೆಲೆ ಈಗ ಇರುವ ಹಾಸ್ಟೇಲ್‌ನಲ್ಲೇ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಪ್ರವೇಶ ನೀಡಲು ಸರ್ಕಾರ ನಿರ್ದೇಶಿಸಿದೆ.