ಬೆಂಗಳೂರಿನ ಪೆಟ್ರೋಲ್ ಬಂಕ್‌ಗಳಲ್ಲಿ ಖೋಟಾ ನೋಟುಗಳ ಚಲಾವಣೆ: ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿ

fake notes
Published on

ಬೆಂಗಳೂರು: ಪೆಟ್ರೋಲ್ ಬಂಕ್‌ಗಳಲ್ಲಿ ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಕೇರಳ ರಾಜ್ಯದ ಆರೋಪಿಯನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಅಖಿಲ್ ಜಾರ್ಜ್(26) ಬಂಧಿತ. ಆರೋಪಿಯಿಂದ 22,500 ರೂ. ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಹೆಚ್ಚು ಹಣ ಗಳಿಸುವ ಉದ್ದೇಶದಿಂದ ಬೆಂಗಳೂರಿಗೆ ಬಂದು ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಾಲ್‌ಬಾಗ್ ಮುಖ್ಯರಸ್ತೆಯಲ್ಲಿರುವ ಎಸ್.ಎಂ. ಕಣ್ಣಪ್ಪ ಆಟೋ ಮೊಬೈಲ್ಸ್ ಎಂಬ ಇಂಡಿಯನ್ ಪೆಟ್ರೋಲ್ ಬಂಕ್‌ಗೆ ಆರೋಪಿ ಅಖಿಲ್ ಜಾರ್ಜ್ ನ.1ರಂದು ಮಧ್ಯಾಹ್ನ ಸುಮಾರು 3 ಗಂಟೆ ಸುಮಾರಿನಲ್ಲಿ ಬಿಳಿ ಬಣ್ಣದ ಕಾರಿನಲ್ಲಿ ಬಂದು 900 ರೂ. ಗಳಿಗೆ ಪೆಟ್ರೋಲ್ ಹಾಕಿಸಿಕೊಂಡಿದ್ದಾನೆ.

ಬಂಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ 5೦೦ ರೂ. ಮುಖಬೆಲೆಯ ಒಂದು ನೋಟು ಹಾಗೂ 100 ರೂ. ಮುಖಬೆಲೆಯ ನಾಲ್ಕು ನೋಟುಗಳನ್ನು ನೀಡಿದ್ದಾನೆ. ಆತ ನೀಡಿದ್ದ ನೋಟುಗಳ ಪೈಕಿ 500 ರೂ. ಮುಖಬೆಲೆಯ ನೋಟು ತೆಳುವಾಗಿರುವಂತೆ ಕಂಡು ಸಿಬ್ಬಂದಿಗೆ ಅನುಮಾನ ಬಂದಿದೆ. ತಕ್ಷಣ ಅವರ ಬಳಿ ಇದ್ದ 500 ರೂ. ಮುಖಬೆಲೆಯ ಅಸಲಿ ನೋಟನ್ನು ತೆಗೆದು ಆ ನೋಟಿಗೆ ಹೋಲಿಕೆ ಮಾಡಿ ನೋಡಿದಾಗ ವ್ಯತ್ಯಾಸ ಕಂಡು ಬಂದಿದೆ. ತಕ್ಷಣ ಸಿಬ್ಬಂದಿ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಕಾರು ಸಮೇತ ನೋಟಿನೊಂದಿಗೆ ಠಾಣೆಗೆ ಕರೆದೊಯ್ದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 22,500 ರೂ. ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದು, ಈ ಹಣವನ್ನು ಯಾವ ವ್ಯಕ್ತಿಯಿಂದ ಪಡೆದಿದ್ದಾನೆ ಎಂದು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net