

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಿಕೃತ ಮನಸ್ಥಿತಿಯ ವೈದ್ಯನೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಚಿಕಿತ್ಸೆಗೆ ಬರುತ್ತಿದ್ದ ಮಹಿಳೆಯರ ಖಾಸಗಿ ವಿಡಿಯೋ ಚಿತ್ರೀಕರಿಸುತ್ತಿದ್ದ. ಅಷ್ಟೇ ಅಲ್ಲ, ಚಿಕಿತ್ಸೆ ಕೊಡುವ ನೆಪದಲ್ಲಿ ಬೇಕಂತಲೇ ಖಾಸಗಿ ಅಂಗಗಳಿಗೂ ಇಂಜೆಕ್ಷನ್ ಕೊಡಲು ಮುಂದಾಗುತ್ತಿದ್ದ...
ವೈದ್ಯ ಡಾ.ವೆಂಕಟರಮಣ ಬಂಧಿತ. ಯಶವಂತಪುರದ ಮತ್ತಿಕೆರೆಯಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಈತ, ನ್ಯಾಚುರೋಪಥಿ ಮತ್ತು ಅಕ್ಯೂಪಂಕ್ಚರ್ ಚಿಕಿತ್ಸೆ ನೀಡುತ್ತಿದ್ದ. ಚಿಕಿತ್ಸೆ ಕೊಡವ ನೆಪದಲ್ಲಿ ಮಹಿಳೆಯರ ಜತೆ ದುರ್ವತನೆ ತೋರುತ್ತಿದ್ದ. ಚಿಕಿತ್ಸೆ ಹೆಸರಲ್ಲಿ ರಹಸ್ಯವಾಗಿ ತನ್ನ ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ. ಇದನ್ನು ಗಮನಿಸಿದ ಮಹಿಳೆಯರು ಪ್ರಶ್ನೆ ಮಾಡಿದರೆ ಚಿಕಿತ್ಸೆ ಕೊಡುವಾಗ ಕಾಯಿಲೆಯ ಮೂಲವನ್ನ ಹುಡುಕಬೇಕು. ಹಾಗಾಗಿ ವಿಡಿಯೋ ಮಾಡುತ್ತಿರುವುದಾಗಿ ಸಮಜಾಯಿಷಿ ಕೊಡುತ್ತಿದ್ದ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದರೆ ಚಿಕಿತ್ಸೆ ಬೇಕಾದರೆ ಪಡೆಯಿರಿ, ಇಲ್ಲವಾದರೆ ಹೊರಡಿ ಎನ್ನುತ್ತಿದ್ದ. ಅಷ್ಟೇ ಅಲ್ಲ, ಮಹಿಳೆಯರ ಬಟ್ಟೆ ಬಿಚ್ಚಿಸಿ ಚಿಕಿತ್ಸೆ ಕೊಡುವ ನೆಪದಲ್ಲಿ ಖಾಸಗಿ ಅಂಗಗಳನ್ನು ಮುಟ್ಟಿ ಆ ವೇಳೆ ವಿಡಿಯೋ ಮಾಡಿಕೊಂಡು ಲೈಂಗಿಕಿ ಕಿರುಕುಳ ನೀಡುತ್ತಿದ್ದ!
ಇತ್ತೀಚಿಗೆ ಯುವತಿಯೊಬ್ಬರು ಕಾಲು ನೋವಿಗೆ ಚಿಕಿತ್ಸೆ ಪಡೆಯಲು ಕ್ಲಿನಿಕ್ಗೆ ತೆರಳಿದ್ದರು. ಆ ವೇಳೆ ಖಾಸಗಿ ಅಂಗಗಳಿಗೂ ಇಂಜೆಕ್ಷನ್ ನೀಡಲು ವೈದ್ಯ ಮುಂದಾಗಿದ್ದ. ಇದಾದ ಕೆಲ ದಿನಗಳ ಬಳಿಕ ಯುವತಿಯ ಮೊಬೈಲ್ಗೆ ತಾನು ಚಿಕಿತ್ಸೆ ಪಡೆದ ವಿಡಿಯೋ ಬಂದಿತ್ತು. ಈ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಯುವತಿಯ ಕಡೆಯವರು ದೂರು ದಾಖಲಿಸಿದ್ದರು.
ಯಶವಂತಪುರ ಪೊಲೀಸರಿಂದ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. ಸಿಸಿಬಿ ಪೊಲೀಸರು ಡಾ.ವೆಂಕಟರಮಣರನ್ನ ವಶಕ್ಕೆ ಪಡೆದ ಅವರ ಮೊಬೈಲ್ ಪರಿಶೀಲನೆ ನಡೆಸಿದಾಗ ಅದರಲ್ಲಿ ಇದೇ ರೀತಿಯ ಹತ್ತಾರು ವಿಡಿಯೋ ಪತ್ತೆಯಾಗಿದೆ. 14 ವಯಸ್ಸಿನಿಂದ ಹಿಡಿದು 45 ವಯಸ್ಸಿನ ಹೆಣ್ಣು ಮಕ್ಕಳ ವಿಡಿಯೋ ಅದರಲ್ಲಿತ್ತು. ಹಲವು ತಿಂಗಳಿಂದ ಇದೇ ರೀತಿಯ ಕೃತ್ಯ ಎಸಗಿರುವುದು ಗೊತ್ತಾಗಿದೆ. ಈ ಹಿನ್ನೆಲೆ ವೈದ್ಯನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.