

ಬೆಂಗಳೂರು: ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಬೇಕು ಎಂದು ಯಾರು ಎಷ್ಟೇ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರೂ ಕೆಲವು ಮತದಾರರು ಮತಗಟ್ಟೆಯತ್ತ ಸುಳಿಯುವುದೇ ಇಲ್ಲ. ಬದಲಿಗೆ, ಮತದಾನದ ದಿನವೇ ಮೋಜು ಮಸ್ತಿ ಮಾಡಲು ಪಿಕ್‌ನಿಕ್ ಸ್ಪಾಟ್‌ಗಳಿಗೆ ಹೋಗುತ್ತಾರೆ! ಅಂತಹ ಮನೋಭಾವಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಮಂಡ್ಯ ಜಿಲ್ಲಾಧಿಕಾರಿ ಖಡಕ್ ಆದೇಶವೊಂದನ್ನು ಹೊರಡಿಸಿದ್ದಾರೆ.
ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡದೇ ಮಂಡ್ಯ ಜಿಲ್ಲೆಯ ಪ್ರವಾಸಿ ಸ್ಥಳಗಳಿಗೆ ಬರುವ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಜಿಲ್ಲೆಯ ಪ್ರವಾಸಿ ಸ್ಥಳಗಳಾದ ಕೃಷ್ಣರಾಜಸಾಗರ, ಬೃಂದಾವನ ಗಾರ್ಡನ್, ಮುತ್ತತ್ತಿ, ಶಿವನಸಮುದ್ರ, ರಂಗನತಿಟ್ಟು, ಬಲಮುರಿ, ದರಿಯಾ ದೌಲತ್ ಮುಂತಾದ ಪ್ರವಾಸಿ ತಾಣಗಳಿಗೆ ಈ ಆದೇಶ ಅನ್ವಯವಾಗಲಿದೆ. ಮತದಾನ ಮಾಡಿ ಪ್ರವಾಸಿ ತಾಣಗಳಿಗೆ ಆಗಮಿಸುವವರಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಮತದಾನದ ದಿನದಂದು ಸಾರ್ವತ್ರಿಕ ರಜೆ ಘೋಷಿಸಲಾಗಿದ್ದು, ಅರ್ಹ ಮತದಾರರೆಲ್ಲರೂ ಮತದಾನ ಮಾಡಬೇಕು ಎಂಬುದು ಈ ಕ್ರಮದ ಹಿಂದಿನ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.