ಮಹತ್ವಾಕಾಂಕ್ಷೆಯ ಮುನ್ನೋಟ: ನೂತನ ಬಾಹ್ಯಾಕಾಶ ನೀತಿ ಅನಾವರಣ

Rocket
Published on

ಭಾರತೀಯ ಬಾಹ್ಯಾಕಾಶ ನೀತಿ-2023ಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ದೇಶದ ಬಾಹ್ಯಾಕಾಶ ಇಲಾಖೆಯ ಪಾತ್ರ ಸಂವರ್ಧನೆ; ಸಂಶೋಧನೆ, ಶೈಕ್ಷಣಿಕ ಕಲಿಕೆಗೆ ಒತ್ತು ಹಾಗೂ ಖಾಸಗಿ ಸಹಭಾಗಿತ್ವಕ್ಕೆ ಅದರಲ್ಲೂ ಸ್ಟಾರ್ಟಪ್​ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸುವ ಮೂಲಕ ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವನ್ನು ಉತ್ತುಂಗ ಸ್ಥಾನಕ್ಕೇರಿಸುವ ಮಹತ್ವಾಕಾಂಕ್ಷೆಯ ಗುರಿ ಹಾಗೂ ಉದ್ದೇಶಗಳಿರುವ ವ್ಯಾಪಕ ಮುನ್ನೋಟದ ವಿವರಗಳನ್ನು ಒಳಗೊಂಡ ಮಹತ್ವದ ಕ್ರಮ ಇದಾಗಿದೆ. ಈ ನೀತಿಯ ಅನುಷ್ಠಾನವು ದೇಶದ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಉತ್ತೇಜನ ನೀಡಲಿದೆ ಮತ್ತು ಬಾಹ್ಯಾಕಾಶ ಇಲಾಖೆಯ ಪಾತ್ರವನ್ನು ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಮುಂದಿನ ಒಂದು ದಶಕದವರೆಗೆ ದೇಶದ ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗಳಿಗೆ ಬೇಕಾದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ಚೌಕಟ್ಟು ಇದಾಗಿದೆ. ಬಾಹ್ಯಾಕಾಶ ಕ್ಷೇತ್ರದ ಎಲ್ಲ ರೀತಿಯ ಚಟುವಟಿಕೆಗಳಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಈ ನೀತಿಯಲ್ಲಿ ಒತ್ತು ನೀಡಲಾಗಿದೆ. ಇದಕ್ಕೆ ಅನುವಾಗುವಂತೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಖಾಸಗಿ ವಲಯದ ಸಂಸ್ಥೆಗಳ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಈ ನೀತಿಯಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ. ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರೋತ್ಸಾಹ ಮತ್ತು ಪ್ರಾಧಿಕಾರ ಕೇಂದ್ರ ಎಂಬ ಬಾಹ್ಯಾಕಾಶ ಮಂಡಳಿ ಸ್ಥಾಪಿಸುವ ಕುರಿತ ಪ್ರಸ್ತಾವವನ್ನು ಕೂಡ ಈ ನೀತಿ ಒಳಗೊಂಡಿದೆ. ಆದರೆ, ಬಾಹ್ಯಾಕಾಶ ಚಟುವಟಿಕೆಗಳು, ಯೋಜನೆಗಳು ಮತ್ತು ಕಾರ್ಯಾಚರಣೆಗಳ ಕುರಿತು ಇಸ್ರೋ ಎಲ್ಲಾ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಲಿದೆ ಎಂದು ಸ್ಪಷ್ಟಪಡಿಸಲಾಗಿದೆ. ಎನ್​ಎಸ್​ಐಎಲ್ (ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್), ಬಾಹ್ಯಾಕಾಶ ಮಂಡಳಿಗಳು ಇಸ್ರೋದ ಚಟುವಟಿಕೆಗಳನ್ನು ಸುಗಮಗೊಳಿಸಲು ಮತ್ತು ಖಾಸಗಿ ವಲಯದ ಬೇಡಿಕೆಗಳನ್ನು ಪೂರೈಸಲು ಪೂರಕವಾಗಿ ಕಾರ್ಯನಿರ್ವಹಿಸಲಿವೆ.

ಭಾರತವು ಇತ್ತೀಚಿನ ವರ್ಷಗಳಲ್ಲಿ ಬಾಹ್ಯಾಕಾಶ ಪರಿಶೋಧನೆ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದೆ. ಚಂದ್ರಯಾನ-2 ಮಿಷನ್​ನ ಯಶಸ್ವಿ ಉಡಾವಣೆ ಕೈಗೊಳ್ಳಲಾಗಿದೆ. ಭಾರತ ಮತ್ತು ನೆರೆಹೊರೆಯ ಪ್ರದೇಶಗಳಲ್ಲಿ ನಿಖರವಾದ ಸ್ಥಳ ಗುರುತಿಸುವಿಕೆ ಸೇವೆಗಳನ್ನು ಒದಗಿಸಲು ತನ್ನದೇ ಆದ ಉಪಗ್ರಹ ನ್ಯಾವಿಗೇಷನ್ ವ್ಯವಸ್ಥೆ ಅಭಿವೃದ್ಧಿಪಡಿಸುವುದರತ್ತ ಗಮನ ನೀಡಲಾಗಿದೆ. ಪಿಎಸ್​ಎಲ್​ವಿ, ಜಿಎಸ್​ಎಲ್​ವಿ ರಾಕೆಟ್ ಮೂಲಕ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ತಂತ್ರಜ್ಞಾನವನ್ನು ಇಸ್ರೋ ಯಶಸ್ವಿಯಾಗಿ ಮೈಗೂಡಿಸಿಕೊಂಡಿದೆ. ಎಲ್​ವಿಎಂ3-ಎಂ2 ರಾಕೆಟ್ ಮೂಲಕ ಇಂಗ್ಲೆಂಡ್ ಮೂಲದ ಕಂಪನಿಯ 36 ಬ್ರಾಡ್​ಬ್ಯಾಂಡ್ ಸಂವಹನ ಉಪಗ್ರಹಗಳನ್ನು ಏಕಕಾಲಕ್ಕೆ ಯಶಸ್ವಿಯಾಗಿ ಉದ್ದೇಶಿತ ಕಕ್ಷೆಗೆ ಸೇರಿಸುವ ಐತಿಹಾಸಿಕ ಸಾಧನೆಯನ್ನು ಎರಡು ಬಾರಿ ಮಾಡಿದೆ. ವಿದೇಶಿ ಹಾಗೂ ವಾಣಿಜ್ಯ ಉಪಗ್ರಹಗಳನ್ನು ಉಡಾಯಿಸುವ ಮೂಲಕ ವಾಣಿಜ್ಯಿಕವಾಗಿಯೂ ದಾಪುಗಾಲು ಇಡುತ್ತಿದೆ. ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ, ಸಾಕಷ್ಟು ಬಾಹ್ಯಾಕಾಶ ಆಸ್ತಿಯನ್ನು ನಿರ್ವಿುಸಿದೆ. ಈ ಸ್ವತ್ತುಗಳನ್ನು ಮುಕ್ತಗೊಳಿಸಿ, ಅತ್ಯುತ್ತಮವಾಗಿ ಬಳಸಿಕೊಳ್ಳುವ ಮೂಲಕ ಇನ್ನಷ್ಟು ಪ್ರಗತಿ ಸಾಧಿಸುವ ಉದ್ದೇಶವನ್ನು ನೀತಿ ಹೊಂದಿದೆ. ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಭಾರತದ ಉದ್ಯಮವು ಪ್ರಮುಖ ಸ್ಥಾನ ಗಳಿಸುವ ಹಾಗೂ ಆ ಮೂಲಕ ಸಾಕಷ್ಟು ಉದ್ಯೋಗಾವಕಾಶ ಸೃಷ್ಟಿಸುವ ಆಶಯ ಈ ನೀತಿಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net