

ನವದೆಹಲಿ: ಮನೆಯೊಳಗೊಬ್ಬಳು, ಮನೆ ಹೊರಗೊಬ್ಬಳು ಎಂಬಂತೆ ಇಬ್ಬರು ಹೆಂಡಿರನ್ನು ಹೊಂದಿರುವವರು ಅನೇಕರಿದ್ದಾರೆ. ಇನ್ನು ಕೆಲವರು ಮೂವರು, ನಾಲ್ವರು, ಐವರನ್ನು ಮದುವೆಯಾದ ಅಪರೂಪದ ಪ್ರಕರಣಗಳು ಕೂಡ ಇವೆ. ಆದರೆ ಇಲ್ಲೊಬ್ಬನದ್ದು ಊಹಿಸಲಾಗದಂಥ ಸಂಸಾರ. ಏಕೆಂದರೆ ಈತನಿಗೆ ಜಗತ್ತಿನಾದ್ಯಂತ ಹೆಂಡತಿಯರು. ಅಂದರೆ ಈತ ಬರೋಬ್ಬರಿ 104 ಮದುವೆ ಆಗಿದ್ದಾನೆ!
ಜಿಯೊವನ್ನಿ ವಿಗ್ಲಿಯೊಟೊ (Giovanni Vigliotto) ಎಂಬ ಹೆಸರಿನ ಈತ 33 ವರ್ಷಗಳಲ್ಲಿ ಯಾರಿಗೂ ವಿಚ್ಛೇದನ ಕೊಡದೆ ಒಟ್ಟು 104 ಮದುವೆಯಾಗಿದ್ದ. ಯುಎಸ್ನ 27 ರಾಜ್ಯಗಳಲ್ಲಿ ಮಾತ್ರವಲ್ಲದೆ, ಜಗತ್ತಿನ ಇತರ 14 ದೇಶಗಳಲ್ಲಿನ ಮಹಿಳೆಯರನ್ನು ಈತ ಮದುವೆಯಾಗಿದ್ದ. ವಿಶೇಷವೆಂದರೆ ಅತಿಹೆಚ್ಚು ಮದುವೆ ಆಗಿರುವ ವಿಚಾರದಲ್ಲಿ ವಿಶ್ವದಾಖಲೆಗೂ ಪಾತ್ರನಾಗಿರುವ ಈತನ ಅಸಲಿ ಹೆಸರು ಬಹಳ ಕಾಲ ಯಾರಿಗೂ ಗೊತ್ತಿರಲಿಲ್ಲ ಎನ್ನಲಾಗಿದೆ.
ತನ್ನ ಗುರುತು ಮರೆಮಾಚಿ ಮಹಿಳೆಯರನ್ನು ಮರುಳು ಮಾಡಿ ಮದುವೆಯಾಗುವ ಈತ 'ನಾನು ದೂರದಲ್ಲಿ ನೆಲೆಸಿರುವುದರಿಂದ ನೀನು ಎಲ್ಲ ಗಂಟುಮೂಟೆ ಕಟ್ಟಿಕೊಂಡು ಬಾ' ಎಂದು ಹೇಳುತ್ತಿದ್ದ. ಆಕೆ ತಂದ ವಸ್ತುಗಳನ್ನು ಪ್ಯಾಕೇಜ್ ಲಾರಿಗೆ ಹಾಕಿಸಿ ಪರಾರಿಯಾಗುವ ಈತ ನಂತರ ಸಿಗುತ್ತಿರಲಿಲ್ಲ. ಬಳಿಕ ಈತ ಆ ವಸ್ತುಗಳನ್ನು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಮಾರುತ್ತಿದ್ದ. ಅಮೆರಿಕದಲ್ಲಿನ ಇತರ ಸಾಮಾನ್ಯ ಪುರುಷರಿಗಿಂತ ಭಿನ್ನವಾಗಿ ಈತ ಮಹಿಳೆಯರೊಂದಿಗೆ ವರ್ತಿಸುತ್ತಿದ್ದುದರಿಂದ ಅವರು ಈತನಿಗೆ ಮರುಳಾಗುತ್ತಿದ್ದರು ಎನ್ನಲಾಗಿದೆ. ಅಲ್ಲದೆ ತನಗೆ ಶಿಕ್ಷೆ ಆದಾಗಲೂ ಇವನು ತನ್ನ ತಪ್ಪಿನ ಬಗ್ಗೆ ಪಶ್ಚಾತ್ತಾಪ ಪಟ್ಟಿಲ್ಲ ಎಂದೂ ವರದಿಯಾಗಿದೆ.
ಮದುವೆಯಾಗಿ ವಂಚಿಸಿದ್ದ ಪ್ರಕರಣಗಳಲ್ಲಿ ಈತನಿಗೆ ಒಟ್ಟು 34 ವರ್ಷದ ವರೆಗೆ ಶಿಕ್ಷೆಯಾಗಿತ್ತು ಮತ್ತು 3,36,000 ಡಾಲರ್ ದಂಡ ವಿಧಿಸಲಾಗಿತ್ತು. ಅರಿಜೋನಾ ಸ್ಟೇಟ್ ಪ್ರಿಸನ್ನಲ್ಲಿ 8 ವರ್ಷದ ಶಿಕ್ಷೆ ಮುಗಿಯುವಷ್ಟರಲ್ಲಿ ಈತ ಬ್ರೇನ್ ಹ್ಯಾಮರೇಜ್ನಿಂದ ಮೃತಪಟ್ಟಿದ್ದ. 1991ರಲ್ಲಿ ಸಾವಿಗೀಡಾಗಿದ್ದ ಈತನ ಕುರಿತು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಇತ್ತೀಚೆಗೆ ಟ್ವೀಟ್ ಮಾಡಿದ್ದರಿಂದ ಮತ್ತೆ ಈತನ ವಿಚಾರ ಮುನ್ನೆಲೆಗೆ ಬಂದಿದ್ದು, ಎಲ್ಲೆಡೆ ಸುದ್ದಿ ಆಗಲಾರಂಭಿಸಿದೆ. -ಏಜೆನ್ಸೀಸ್