

ಮಂಡ್ಯ: ಐಪಿಎಸ್ ಅಧಿಕಾರಿ ಡಿ.ರೂಪಾ ಜತೆಗಿನ ಸಂಘರ್ಷದಿಂದ ಸುದ್ದಿಯಾಗಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಇದೀಗ ವಿಶೇಷ ಆಶೀರ್ವಾದವೊಂದು ಸಿಕ್ಕಿದೆ. ಈ ಮೂಲಕ ಇಷ್ಟು ದಿನ ತೆರೆಮರೆಗೆ ಸರಿದಿದ್ದ ಇವರ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಂತಾಗಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆಯಲ್ಲಿ ರೋಹಿಣಿ ಸಿಂಧೂರಿ ಅವರಿಗೆ ಈ ವಿಶೇಷ ಆಶೀರ್ವಾದ ಲಭಿಸಿದೆ. ಚಿಕ್ಕರಸಿನಕೆರೆ ಕಾಲಭೈರವೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದ ರೋಹಿಣಿಗೆ ಅಲ್ಲಿನ ಪವಾಡ ಬಸಪ್ಪ ಆಶೀರ್ವಾದ ಮಾಡಿದ್ದಾನೆ.
ಕಾಲಭೈರವೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದ ಬಳಿಕ ರೋಹಿಣಿ ಇಷ್ಟಾರ್ಥ ಸಿದ್ಧಿಗೆ ಪವಾಡ ಬಸವಪ್ಪನ ಮೊರೆ ಹೋದರು. ಬಸಪ್ಪನ ಪಾದದ ಬಳಿ ಆಶೀರ್ವಾದ ಕೇಳಿದ ಸಿಂಧೂರಿಗೆ, ಬಲಗಾಲ ಪಾದ ನೀಡಿ ಹರಸಿದ್ದಾನೆ. ಒಳಿತಾದರೆ ದೇವಾಲಯಕ್ಕೆ ಏನಾದರೂ ನೀಡುವುದಾಗಿ ರೋಹಿಣಿ ಹರಕೆ ಹೇಳಿಕೊಂಡರು.