

ನೆಲಮಂಗಲ: ಕೆಲ ದಿನಗಳ ಹಿಂದಷ್ಟೇ ಚಿರತೆಯೊಂದು ಮಲಗಿದ್ದ ಮಗುವನ್ನು ಹೊತ್ತೊಯ್ದು ಅರೆಬರೆ ತಿಂದು ಬೀಸಾಡಿ ಹೋಗಿತ್ತು. ಈ ಕರಾಳ ಘಟನೆ ಮಾಸುವ ಮುನ್ನವೇ ಅದೇ ರೀತಿಯಾದ ಮತ್ತೊಂದು ಘಟನೆ ಸಂಭವಿಸಿದೆ.
ಬೆಳಗಿನ ಜಾವ ಬಹಿರ್ದೆಸೆಗೆ ಹೋಗಿದ್ದ ವೃದ್ದೆ ಮೇಲೆ ಚಿರತೆಯೊಂದು ದಾಳಿ ಮಾಡಿ ಕೊಂದಿರುವ ಘಟನೆ ಕೊಟ್ಟುಗಾನಹಳ್ಳಿಯಲ್ಲಿ ನಡೆದಿದೆ. ಗಂಗಮ್ಮ(68) ಮೃತ ಮಹಿಳೆ.
ಗಂಗಮ್ಮಳ ಮೃತದೇಹವು ಕಲ್ಲಿನ ಪೊಟರೆಯೊಳಗೆ ಪತ್ತೆಯಾಗಿದ್ದು, ಆಕೆಯ ರುಂಡ-ಮುಂಡ ಬೇರೆ-ಬೇರೆಯಾಗಿದೆ. ಚಿರತೆ ಅರೆಬರೆ ತಿಂದು ಸ್ಥಳದಿಂದ ಪರಾರಿಯಾಗಿದ್ದು, ಸ್ಥಳೀಯ ಜನರಲ್ಲಿ ಆತಂಕ ಮನೆ ಮಾಡಿದೆ.
ಅಂದಹಾಗೆ ಕೊಟ್ಟುಗಾನಹಳ್ಳಿ ಬೆಂಗಳೂರು ದಕ್ಷಿಣ ತಾಲೂಕು ಮತ್ತು ಮಾಗಡಿ ತಾಲೂಕಿನ ಗಡಿಗ್ರಾಮವಾಗಿದೆ. ಕೊಟ್ಟಗಾನಹಳ್ಳಿಯು ಕೆಲ ದಿನದ ಹಿಂದೆ ಮೂರು ವರ್ಷದ ಮಗುವಿನ ಕೊಂದುತಿಂದ ಕದರಯ್ಯನಪಾಳ್ಯ ಸಮೀಪವಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಮಹಿಳೆಯ ಮೃತದೇಹವನ್ನು ನೆಲಮಂಗಲ ಆಸ್ಪತ್ರೆಗೆ ರವಾನಿಸಿದ್ದಾರೆ. ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)