ತುಂಬಿದ ಅಣೆಕಟ್ಟು, ಕೃಷಿಕರಿಗೆ ಬಿಕ್ಕಟ್ಟು :ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ : ಪ್ರಯೋಜನವಿಲ್ಲದ ಇಂದಬೆಟ್ಟು ಸೇತುವೆ

New Project (12)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಇಂದಬೆಟ್ಟು ಹಾಗೂ ಕಡೀರುದ್ಯಾವರ ಸಂಪರ್ಕಕ್ಕಾಗಿ ಸುಮಾರು 5.80 ಕೋಟಿ ರೂ. ಮೊತ್ತ ವೆಚ್ಚದಲ್ಲಿ ಸೇತುವೆ, ಅಣೆಕಟ್ಟು ನಿರ್ಮಾಣವಾಗಿದ್ದರೂ ಪ್ರಯೋಜನವಿಲ್ಲದಾಗಿದೆ.

ಜೋರಾಗಿ ಮಳೆ ಸುರಿದ ಸಂದರ್ಭ ಇಂದಬೆಟ್ಟು ಹಾಗೂ ಕಡೀರುದ್ಯಾವರ ಭಾಗದಲ್ಲಿ ನೆರೆ ಉಂಟಾಗುತ್ತಿದ್ದು, ಸ್ಥಳೀಯ ಮನೆಗಳೆಲ್ಲವೂ ಮುಳುಗಡೆಯಾಗುತ್ತಿದ್ದವು. ತೆಪ್ಪದ ಮೂಲಕ ಜನರು ಸಂಚಾರ ನಡೆಸುತ್ತಿದ್ದು, ಈ ಸಂಕಷ್ಟ ಮನಗಂಡಿದ್ದ ಅಂದಿನ ಶಾಸಕ ವಸಂತ ಬಂಗೇರ ಅವರು ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರುಗೊಳಿಸಿದ್ದರು. ಸೂಕ್ತ ನಿರ್ವಹಣೆಯಲ್ಲದಿರುವುದರಿಂದ ಸೇತುವೆ ಹಾಗೂ ಅಣೆಕಟ್ಟು ನಿರ್ಮಿಸಿದ್ದರೂ ಸ್ಥಳೀಯ ತೋಟಗಳಿಗೆ ಈಗಲೂ ನೆರೆ ನೀರು ನುಗ್ಗುತ್ತಿದೆ ಎಂದು ಸ್ಥಳೀಯರು ಬೇಸರ ಹೊರಹಾಕಿದ್ದಾರೆ.

ಸೂಕ್ತ ರಸ್ತೆಯೂ ಇಲ್ಲ: ಸೇತುವೆಯ ಇನ್ನೊಂದು ಕೊನೆಯಲ್ಲಿ ಕೇವಲ ಕಾಲುದಾರಿಯಷ್ಟೇ ಇದ್ದು, ಇದೇ ಕಾಲುದಾರಿಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ನಿತ್ಯವೂ ಸಾಹಸದಿಂದ ಸಂಚರಿಸಬೇಕಾದ ಸಂಕಷ್ಟದ ಪರಿಸ್ಥಿತಿ ಇದೆ.

ಅಸಮರ್ಪಕ ಅಣೆಕಟ್ಟು ನಿರ್ವಹಣೆ: ಸತತ ಬೇಡಿಕೆ ಬಳಿಕ ಅಂತೂ ಇಂತೂ ಸೇತುವೆ ಹಾಗೂ ಅಣೆಕಟ್ಟು ನಿರ್ಮಾಣವಾದರೂ ಅದರ ಅಸಮರ್ಪಕ ನಿರ್ವಹಣೆಯಿಂದ ಸ್ಥಳೀಯ ಕೃಷಿಕರ ಗೋಳು ಮುಂದುವರಿದಿದೆ. ಭಾರಿ ಮಳೆಯಾದ ಸಂದರ್ಭ ಅಣೆಕಟ್ಟಿನಲ್ಲಿ ನೀರು ತುಂಬುತ್ತಿದ್ದು, ಅದರ ತೆರವು ಕಾರ್ಯಕ್ಕೆ ಯಾವ ಇಲಾಖೆಯೂ ಮುಂದಾಗುತ್ತಿಲ್ಲ. ಸಂಬಂಧಿಸಿದ ಇಲಾಖೆಯ ಇಂಜಿನಿಯರ್‌ಗೆ ಸಾರ್ವಜನಿಕರು ಕರೆ ಮಾಡಿ ಮನವರಿಕೆ ಮಾಡಲು ಯತ್ನಿಸಿದರೂ ಪೂರಕ ಸ್ಪಂದನೆ ದೊರೆಯುವುದಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇತ್ತೀಚೆಗೆ ಭಾರಿ ಮಳೆಯ ಸಂದರ್ಭ ಮನೆಯವರೆಗೆ ನೀರು ಬಂದಿತ್ತು. ಅಣೆಕಟ್ಟು ತೆರೆಯುವ ವಿಚಾರದಲ್ಲಿ ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಾರೆ. ಯಾವೊಂದು ಇಲಾಖೆಯು ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ. ಈ ಸಲ ಭಾರಿ ಮಳೆಯಿಂದ ಅಣೆಕಟ್ಟಿನಲ್ಲಿ ತುಂಬಿದ್ದ ನೀರು ನನ್ನದು ಸಹಿತ ಸ್ಥಳೀಯ ತೋಟಗಳಿಗೆ ಹರಿದಿದೆ. ಚಂದ್ರಶೇಖರ್, ಇಂದಬೆಟ್ಟು ಗ್ರಾಮಸ್ಥ ಮಳೆಗಾಲದಲ್ಲಿ ಈ ಕಾಲುದಾರಿಯಲ್ಲಿ ಬಹಳ ಕಷ್ಟದಿಂದ ಸಂಚರಿಸಬೇಕು. ನಿತ್ಯವೂ ಈ ಭಾಗದಲ್ಲಿ ಒಂದಿಲ್ಲೊಂದು ಅಪಾಯಗಳು ಇದ್ದೇ ಇರುತ್ತವೆ. ಸ್ಥಳೀಯರಿಗೆ ಅವಘಡಗಳಾಗುವ ಮುನ್ನವೇ ಆಡಳಿತ ವರ್ಗ ಎಚ್ಚೆತ್ತುಕೊಂಡರೆ ಒಳ್ಳೆಯದು. ಮಹೇಂದ್ರ ಹೆಗ್ಡೆ, ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಅರ್ಚಕ ನನ್ನ ಅವಧಿಯಲ್ಲಿ ರಸ್ತೆ ಮಾಡಲು ಮಾತುಕತೆ ನಡೆಸಿದ್ದೆ. ತುಂಬಾ ಜನರು ರಸ್ತೆಗಾಗಿ ಜಮೀನು ನೀಡಲು ಹಿಂದೇಟು ಹಾಕಿದ್ದಾರೆ. ಇಲ್ಲಿ ರಸ್ತೆ ನಿರ್ಮಾಣವಾದರೆ ಇಂದಬೆಟ್ಟುವಿಗೆ ಬಹಳ ಬೇಗನೆ ತಲುಪಬಹುದು. ಜಮೀನಿನ ಪಕ್ಕವೇ ರಸ್ತೆ ನಿರ್ಮಾಣವಾದರೆ ಖಾಸಗಿ ಜಮೀನಿಗೂ ಒಳ್ಳೆಯ ಮೌಲ್ಯ ದೊರೆಯುತ್ತದೆ. ಜಮೀನು ಮಾಲೀಕರು ಸಾರ್ವಜನಿಕರಿಗೆ ಸಹಕರಿಸಬೇಕು. ಅಶೋಕ್, ಕಡೀರುದ್ಯಾವರ ಗ್ರಾಪಂ ಮಾಜಿ ಅಧ್ಯಕ್ಷ

  • ಇನ್ನೊಂದು ಬದಿಯಿರುವ ಕಿರುಮಾರ್ಗದಲ್ಲಿ ಸಂಚಾರವೇ ಕಷ್ಟ
  • ಹೆಚ್ಚುವರಿ ನೀರು ಹೊರಬಿಡದಿರುವುದರಿಂದ ಕೃಷಿಕರಿಗೆ ಸಂಕಷ್ಟ
  • ಸಾರ್ವಜನಿಕರ ದೂರಿಗೆ ಸಿಗದ ಪೂರಕ ಸ್ಪಂದನೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net