ಪ್ರಾಕೃತಿಕ ವಿಕೋಪ ಹಾನಿಗೆ ಪರಿಹಾರ : ಗುರ್ಮೆ ಸುರೇಶ್ ಶೆಟ್ಟಿ ನಿರ್ದೇಶನ ; ಮಳೆ ವಿಪತ್ತು ನಿರ್ವಹಣಾ ಸಭೆ

gurme
ಕಾಪು ಆಡಳಿತ ಸೌಧದಲ್ಲಿ ಮಳೆ ವಿಪತ್ತು ನಿರ್ವಹಣಾ ಸಭೆಯಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಪ್ರಾಕೃತಿಕ ವಿಕೋಪದಿಂದ ಆಸ್ತಿಪಾಸ್ತಿ ಮನೆಗಳಿಗೆ ಹಾನಿಯುಂಟಾದ ಸಂದರ್ಭ ಕಂದಾಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಸ್ಥಳ ಪರಿಶೀಲನೆ ನಡೆಸಿ ಗರಿಷ್ಠ ಪರಿಹಾರ ನೀಡಬೇಕು ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.
ಮಳೆ ವಿಪತ್ತು ನಿರ್ವಹಣೆ ಕುರಿತು ಕಾಪು ವಿಧಾನಸಭಾ ವ್ಯಾಪ್ತಿಯ ಇಲಾಖಾಧಿಕಾರಿಗಳು ಹಾಗೂ ಗ್ರಾಪಂ ಅಧ್ಯಕ್ಷರೊಂದಿಗೆ ಕಾಪು ತಾಲೂಕು ಆಡಳಿತ ಸೌಧದಲ್ಲಿ ಗುರುವಾರ ಸಭೆಯಲ್ಲಿ ಮಾತನಾಡಿದರು.

ರಸ್ತೆ ಬದಿಗಳಲ್ಲಿರುವ ವಿದ್ಯುತ್ ತಂತಿ ಮತ್ತು ಅಪಾಯಕಾರಿ ಮರ ತೆರವುಗೊಳಿಸುವಂತೆ ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಇಲಾಖಾಧಿಕಾರಿಗಳಿಗೆ ಸೂಚಿಸಲಾಯಿತು. ಮಳೆ ಕಡಿಮೆಯಾಗುತ್ತಿದ್ದಂತೆ ಲೋಕೋಪಯೋಗಿ ರಸ್ತೆ ಮತ್ತು ಜಿಪಂ ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳುವಂತೆ ತಿಳಿಸಲಾಯಿತು. ಜಲಜೀವನ್ ಮಿಷನ್ ಯೋಜನೆಯಡಿ ಕಾಪು ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದು, ಪೈಪ್‌ಲೈನ್ ಅಳವಡಿಸಲು ತೆಗೆದ ಹೊಂಡ ಗುಂಡಿಗಳನ್ನು ಸರಿಯಾಗಿ ಮಚ್ಚದ ಕಾರಣ ಸ್ಥಳೀಯರಿಂದ ದೂರುಗಳು ಬರುತ್ತಿದ್ದು ಗುಣಮಟ್ಟ ಕಾಯ್ದುಕೊಂಡು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಒತ್ತಡದಿಂದ ಮುಕ್ತಗೊಳಿಸಿ

ಆರೇಳು ತಿಂಗಳಿನಿಂದ ಗ್ರಾಮಾಡಳಿತಾಧಿಕಾರಿಗಳು ಒಂದು ಹೊತ್ತು ರಜೆಯಿಲ್ಲದೆ ಒತ್ತಡದಿಂದ ಕರ್ತವ್ಯ ನಿರ್ವಹಿಸುವಂತಾಗಿದೆ. ಸರ್ಕಾರಿ ಜಮೀನು ಸಂರಕ್ಷಿಸುವ ಸಲುವಾಗಿನ ಲ್ಯಾಂಡ್ ಬೀಟ್ ಆ್ಯಪ್ ನಿರ್ವಹಣೆಯನ್ನೂ ನಾವೇ ನಿಭಾಯಿಸಬೇಕಾಗಿದ್ದು ನುರಿತ ಸರ್ವೇಯರ್‌ಗಳು ನಾವಲ್ಲದ ಕಾರಣ ಅದೂ ನಮಗೆ ಸಮಸ್ಯೆಯಾಗುತ್ತಿದೆ. ದಯವಿಟ್ಟು ಇದನ್ನು ಸರ್ವೇ ವಿಭಾಗಕ್ಕೆ ನೀಡಬೇಕು. ದಿನವೊಂದಕ್ಕೆ 300 ಆಧಾರ್ ಸೀಡಿಂಗ್ ಮಾಡಬೇಕಾದ ನಿರ್ದೇಶನದಿಂದ ಆರ್‌ಟಿಸಿ ಆಧಾರ್ ಸೀಡಿಂಗ್ ಕಾರ್ಯವನ್ನು ದಿನದ 16 ಗಂಟೆ ಕರ್ತವ್ಯ ಮಾಡಿಬೇಕಾದ ಪರಿಸ್ಥಿತಿಯಿದೆ. ಅದರ ನಡುವೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಗತ್ಯವಿರುವ ಜಾತಿ ಆದಾಯ ಪ್ರಮಾಣಪತ್ರ ದೃಢೀಕರಣವನ್ನೂ ನಾವಿದ್ದ ಸ್ಥಳದಲ್ಲಿಯೇ ಮಾಡುವಂತಾಗಿದೆ. ಈ ಕರ್ತವ್ಯದ ಒತ್ತಡದಿಂದ ರಾಜ್ಯದಲ್ಲಿ 10ರಿಂದ 14 ಮಂದಿಯ ಜೀವಹಾನಿಯಾಗಿದೆ. ಕಂದಾಯ ಸಚಿವರ ಪದೇಪದೆ ನೀಡುವ ಗೊತ್ತುಗುರಿಯಿಲ್ಲದ ಆದೇಶದಿಂದ ಗ್ರಾಮಾಡಳಿತಾಧಿಕಾರಿಗಳು ಹೀನಾಯವಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಬಂದಿದೆ ಈ ಬಗ್ಗೆ ಪರಿಹಾರ ನೀಡುವಂತೆ ಗ್ರಾಮಾಡಳಿತಾಧಿಕಾರಿಗಳು ಶಾಸಕರಲ್ಲಿ ಅಲವತ್ತುಕೊಂಡರು. ತಹಸೀಲ್ದಾರ್ ಪ್ರತಿಭಾ ಆರ್., ಕಾಪು ಪುರಸಭೆ ಮುಖ್ಯಾಧಿಕಾರಿ ನಾಗರಾಜ್, ಕಾಪು, ಉಡುಪಿ ತಾಪಂ ಪ್ರಭಾರ ಕಾರ್ಯನಿರ್ವಹಣಾಧಿಕಾರಿಗಳಾದ ಜೇಮ್ಸ್ ಡಿಸಿಲ್ವ, ಫರ್ಜಾನ ಉಪಸ್ಥಿತರಿದ್ದರು.

ತ್ವರಿತವಾಗಿ ಕಡತ ವಿಲೇಗೊಳಿಸಿ

ಕಾಪು ಕ್ಷೇತ್ರದಲ್ಲಿ 9/11 ಅರ್ಜಿದಾರರಿಗೆ 9/11ಗೆ ಬೇಕಾಗುವ ದಾಖಲೆಗಳ ಬಗ್ಗೆ ಮಾಹಿತಿ ನೀಡಿ ಕಡತ ವಿಲೇವಾರಿ ಮಾಡುವಂತೆ ಪಿಡಿಒಗಳು ಹಾಗೂ ಆದಾಯ ಪ್ರಮಾಣ ಪತ್ರ ನೀಡಲು ವಿಳಂಬ ಮಾಡದಂತೆ ಶಾಸಕರು ಕಂದಾಯ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮಳೆಗಾಲದಲ್ಲಿ ಮಲೇರಿಯಾ, ಡೆಂೆ, ಅತಿಸಾರ ಮುಂತಾದ ಸಾಂಕ್ರಾಮಿಕ ರೋಗಗಳ ಹರಡುವಿಕೆ ಉಲ್ಬಣವಾಗಲಿದ್ದು ಇದರ ತಡೆಗೆ ಮುಂಜಾಗ್ರತ ಕ್ರಮ ಹಾಗೂ ಸಾರ್ವಜನಿಕರಿಗೆ ಜಾಗೃತಿ ಉಂಟುಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಆರೋಗ್ಯ ಇಲಾಖೆಗೆ ತಿಳಿಸಿದರು.

ಮರ ತೆರವಿಗೆ ಅನುದಾನ ಕೊರತೆ

ಕಾಪು ಕ್ಷೇತ್ರದಲ್ಲಿನ ಅಪಾಯಕಾರಿ ಮರ ತೆರವಿಗೆ ಸಾಕಷ್ಟು ದೂರುಗಳು ಬಂದರೂ ಅರಣ್ಯ ಇಲಾಖೆ ಕ್ರಮವಹಿಸುತ್ತಿಲ್ಲ ಎಂಬ ಜನಪ್ರತಿನಿಧಗಳ ದೂರಿಗೆ ಉತ್ತರಿಸಿದ ಉಪವಲಯ ಅರಣ್ಯಾಧಿಕಾರಿ ಜೀವನ್‌ದಾಸ್ ಶೆಟ್ಟಿ, ಗ್ರಾಮಾಂತರ ಪ್ರದೇಶದಲ್ಲಿ ಅಪಾಯಕಾರಿ ಮರ ತೆರವು ಮಾಡಲು ಅನುದಾನ ಕೊರತೆಯಿದೆ. ಕೇವಲ ಕೊಂಬೆ ಕಡಿದರೆ ಅನುದಾನ ದೊರೆಯುವುದಿಲ್ಲ. ಕುಂದಾಪುರ ಡಿಸಿಎಫ್ ಅನುಮತಿ ಪಡೆದು ತೆರವು ಕಾರ್ಯ ಮಾಡಬೇಕಿದೆ. ನಗರ ಪ್ರದೇಶಗಳಲ್ಲಿ ಅಲ್ಲಿನ ನಗರಸಭೆ ಟೆಂಡರ್ ಕರೆದು ಅರಣ್ಯ ಇಲಾಖೆ ಆದೇಶ ಪಡೆದು ಅಪಾಯಕಾರಿ ಮರಗಳ ತೆರವಿಗೆ ಕ್ರಮವಹಿಸುತ್ತದೆ. ಈ ಬಗ್ಗೆ ಡಿಸಿಎಫ್ ಅವರಲ್ಲಿ ಮಾತುಕತೆ ನಡೆಸಲಾಗುವುದು ಎಂದು ಶಾಸಕರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net