

ವಿಜಯವಾಣಿ ಸುದ್ದಿಜಾಲ ಬೈಂದೂರು
ನಾವು ಕಲಿತ ಶಾಲೆ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಹಳೇ ವಿದ್ಯಾರ್ಥಿಗಳು ತಮ್ಮ ಕೈಲಾದಷ್ಟು ಸಹಕಾರ ನೀಡಬೇಕು. ಶಾಲೆಯನ್ನು ಇನ್ನಷ್ಟು ಅಭಿವೃದ್ಧಿ ಮಾಡುವಲ್ಲಿ ಸದಾ ಶ್ರಮಿಸಬೇಕು ಎಂದು ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ಪ್ರವರ್ತಕ ಗೋವಿಂದ ಬಾಬು ಪೂಜಾರಿ ಹೇಳಿದರು.
ಟ್ರಸ್ಟ್ ವತಿಯಿಂದ ದತ್ತು ಸ್ವೀಕರಿಸಿರುವ ಬಿಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬುಧವಾರ ನೋಟ್‌ಬುಕ್ ವಿತರಿಸಿ ಮಾತನಾಡಿದರು.
ಎಸ್‌ಡಿಎಂಸಿ ಅಧ್ಯಕ್ಷೆ ಶಾರದಾ ಅಧ್ಯಕ್ಷತೆ ವಹಿಸಿದ್ದರು. ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಅಗತ್ಯ ಇರುವ ಆಂಗ್ಲ ಮಾಧ್ಯಮ ಪಠ್ಯ ಪುಸ್ತಕ ನೀಡಲಾಯಿತು. ಗ್ರಾಪಂ ಸದಸ್ಯ, ಶಾಲಾ ನಾಮನಿರ್ದೇಶಿತ ಸದಸ್ಯ ಗಂಗಾಧರ, ಟ್ರಸ್ಟ್ ಸಂಯೋಜಕ ನಾಗರಾಜ್ ಪಿ.ಯಡ್ತರೆ, ಪಾಲಕರ ಸಮಿತಿ ಅಧ್ಯಕ್ಷೆ ನಾಗರತ್ನ, ಉಪಾಧ್ಯಕ್ಷೆ ಶ್ರೀದೇವಿ, ಪಾಲಕರು, ಎಸ್‌ಡಿಎಂಸಿ ಸದಸ್ಯರು, ಹಳೇ ವಿದ್ಯಾರ್ಥಿಗಳು ಇದ್ದರು. ಮುಖ್ಯ ಶಿಕ್ಷಕ ಮಂಜುನಾಥ ಎಸ್.ಬಿಜೂರು ಸ್ವಾಗತಿಸಿದರು. ಸಹ ಶಿಕ್ಷಕಿಯರಾದ ಸುಮತಿ ವಂದಿಸಿದರು. ಮನೋರಮಾ ಹಾಗೂ ಮಮತಾ ನಿರೂಪಿಸಿದರು.
ಈ ಶಾಲೆಯಲ್ಲಿ ಹಿಂದೆ ಕಲಿತ ಸಾವಿರಾರು ವಿದ್ಯಾರ್ಥಿಗಳು ಶಾಲಾ ಅಭಿವೃದ್ಧಿಗೆ ಸ್ಪಂದಿಸಬೇಕು. ತನ್ಮೂಲಕ ಈಗಿನ ವಿದ್ಯಾರ್ಥಿಗಳಿಗೆ ಸುಲಭವಾಗಿ ವ್ಯವಸ್ಥಿತ ಗುಣಮಟ್ಟದ ಶಿಕ್ಷಣ ದೊರಕುತ್ತದೆ. ಈ ಶಾಲೆಗಾಗಿ ಟ್ರಸ್ಟ್‌ನಿಂದ ಎಲ್ಲ ಸವಲತ್ತುಗಳನ್ನು ನೀಡಲು ಬದ್ಧನಾಗಿದ್ದು, ಹಳೇ ವಿದ್ಯಾರ್ಥಿಗಳು, ಪಾಲಕರು, ಎಸ್‌ಡಿಎಂಸಿ ಹಾಗೂ ಶಿಕ್ಷಣಾಭಿಮಾನಿಗಳ ಸಹಕಾರ ಸದಾ ನಮ್ಮೊಂದಿಗಿದ್ದರೆ ಈ ಶಾಲೆಯನ್ನು ತಾಲೂಕಿನಲ್ಲಿ ಮಾದರಿ ಶಾಲೆಯಾಗಿ ಮಾಡುವಲ್ಲಿ ಸದಾ ಪ್ರಯತ್ನಿಸುತ್ತೇನೆ. ಗೋವಿಂದ ಬಾಬು ಪೂಜಾರಿ ಶ್ರೀ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ಪ್ರವರ್ತಕ