ಭಕ್ತರ ನೆರವಿನಿಂದ ಮಹತ್ಕಾರ್ಯ : ಸತೀಶ ಜಿ.

guddali pooje
Published on

ಗಂಗೊಳ್ಳಿ: ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ಸುವರ್ಣ ಮಹೋತ್ಸವ-2024ರ ನೆನಪಿಗಾಗಿ ನಿರ್ಮಿಸಲಾಗುತ್ತಿರುವ ಶ್ರೀ ಶಾರದಾ ಮಂಟಪದ ಮುಖ್ಯದ್ವಾರ ಮಂಟಪ ಮತ್ತು ಮೇಲಂತಸ್ತಿನ ಕೊಠಡಿ ನಿರ್ಮಾಣ ಕಾರ್ಯಕ್ಕೆ ಸಮಿತಿ ಅಧ್ಯಕ್ಷ ಸತೀಶ ಜಿ.ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿ, ಶ್ರೀ ಶಾರದಾ ದೇವಿಗೆ ಬೆಳ್ಳಿಯ ವೀಣೆ, ಬೆಳ್ಳಿಯ ತ್ರಿಶೂಲ ಹಾಗೂ ಬೆಳ್ಳಿಯ ಕಿರೀಟ ನಿರ್ಮಾಣ ಮತ್ತು ಹತ್ತು ದಿನಗಳ ದಸರಾ ಆಚರಣೆ ಸಲುವಾಗಿ 40 ಲಕ್ಷ ರೂ. ನೀಲಿನಕ್ಷೆ ಸಿದ್ಧಪಡಿಸಲಾಗಿದೆ. ಶ್ರೀ ಶಾರದಾ ಮಂಟಪದ ಮುಖ್ಯದ್ವಾರ ಮಂಟಪ ಹಾಗೂ ಮೇಲಂಸ್ತಿನ ಕೊಠಡಿ ನಿರ್ಮಾಣಕ್ಕೆ 12 ಲಕ್ಷ ರೂ. ವೆಚ್ಚ ತಗುಲಲಿದ್ದು, ದಾನಿಗಳು ಹಾಗೂ ಭಕ್ತರ ನೆರವಿನ ನಿರೀಕ್ಷೆಯಿಂದ ಈ ಮಹತ್ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಪ್ರಧಾನ ಅರ್ಚಕ ಜಿ.ರಾಘವೇಂದ್ರ ನಾರಾಯಣ ಆಚಾರ್ಯ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಸಮಿತಿ ಗೌರವಾಧ್ಯಕ್ಷ ಬಿ.ಲಕ್ಷ್ಮೀಕಾಂತ ಮಡಿವಾಳ, ಪ್ರಧಾನ ಕಾರ್ಯದರ್ಶಿ ನಿತಿನ್ ಖಾರ್ವಿ, ಕಾರ್ಯದರ್ಶಿ ಶ್ರೀಧರ ಎನ್.ಸಕ್ಲಾತಿ, ಖಜಾಂಚಿ ಜಿ.ನಾರಾಯಣ ಪೂಜಾರಿ, ಮಹಿಳಾ ಮಂಡಳಿ ಕಾರ್ಯದರ್ಶಿ ಸುಜಾತಾ ಬಾಬು ಖಾರ್ವಿ, ಶ್ರೀ ಶಾರದೋತ್ಸವ ಸುವರ್ಣ ಮಹೋತ್ಸವ ಸಮಿತಿ ಹಾಗೂ ಮಹಿಳಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net