ಗ್ರಾಮೀಣ ಪ್ರದೇಶದಲ್ಲಿ ಇತಿಹಾಸ ಸೃಷ್ಟಿ :ಸ್ಪೀಕರ್ ಯು.ಟಿ.ಖಾದರ್ ಸಂತಸ

New Project (5)
Published on

ಉಪ್ಪಿನಂಗಡಿ: ಗ್ರಾಮೀಣ ಪ್ರದೇಶವಾಗಿರುವ ಉಪ್ಪಿನಂಗಡಿಯ ಸರ್ಕಾರಿ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟವೊಂದು ಯಶಸ್ವಿಯಾಗಿ ನಡೆದಿರುವುದು ಇತಿಹಾಸದ ಪುಟದಲ್ಲಿ ಮೊತ್ತ ಮೊದಲಾಗಿ ದಾಖಲಾಗುವಂತಹದ್ದು ಎಂದು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಸಂತಸ ವ್ಯಕ್ತಪಡಿಸಿದರು.

ಉಪ್ಪಿನಂಗಡಿಯಲ್ಲಿ ಮಂಗಳವಾರ ರಾಷ್ಟ್ರಮಟ್ಟದ ಅಂತರ್ ವಿವಿ ಹುಡುಗರ ಕ್ರಾಸ್ ಕಂಟ್ರಿ ಓಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಪಿ.ಎಲ್.ಧರ್ಮ ಮಾತನಾಡಿ, ಸರ್ಕಾರಿ ಕಾಲೇಜಿನ ಕ್ರೀಡಾ ಕಾರ್ಯಕ್ರಮವನ್ನು ಇಡೀ ಊರೇ ಒಂದುಗೂಡಿ ಯಶಸಿಯಾಗಿ ನಡೆಸಿರುವುದು ಹೆಮ್ಮೆಯ ವಿಚಾರ ಎಂದರು.

ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮೊಹಾಪಾತ್ರ, ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ, ದ.ಕ. ಜಿಲ್ಲಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಕ್ರೀಡಾಕೂಟ ಸಮಿತಿಯ ಡಾ.ರಾಜಾರಾಮ್ ಮಾತನಾಡಿದರು.

ಉಪ್ಪಿನಂಗಡಿ ಗ್ರಾಪಂ ಅಧ್ಯಕ್ಷೆ ಲಲಿತ, ಮಂಗಳೂರು ವಿವಿ ಉಪ ನಿರ್ದೇಶಕ ಪ್ರದೀಪ್ ಡಿಸೋಜ, ಕಿಶೋರ್ ಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎ.ಕೃಷ್ಣರಾವ್ ಅರ್ತಿಲ, ಅಶ್ರಫ್ ಬಸ್ತಿಕ್ಕಾರ್, ವಿನ್ಸೆಂಟ್ ಫರ್ನಾಂಡಿಸ್, ಮಹಾಬಲೇಶ್ವರ ಭಟ್, ಇಸ್ಮಾಯಿಲ್ ಇಕ್ಬಾಲ್, ಯು.ಟಿ.ತೌಸೀಫ್, ಶಬ್ಬೀರ್ ಕೆಂಪಿ ಉಪಸ್ಥಿತರಿದ್ದರು.

ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಜೆರಾಲ್ಡ್ ಸಂತೋಷ್ ಡಿಸೋಜ ಸ್ವಾಗತಿಸಿದರು. ಉಪ್ಪಿನಂಗಡಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್ ವಂದಿಸಿದರು.

ಕಾಲೇಜು ಮೈದಾನದಲ್ಲಿ ಸಮಾಪನ

ಕಾಲೇಜಿನಿಂದ ಹೊರಟ ಕ್ರೀಡಾಪಟುಗಳು ಹೆದ್ದಾರಿಯಲ್ಲಿ ಬಲಕ್ಕೆ ತಿರುಗಿ ಗಾಂಧಿಪಾರ್ಕ್ ಮೂಲಕ ಬಸ್ ನಿಲ್ದಾಣದಲ್ಲಿ ತಿರುವು ಪಡೆದು, ಬೈಪಾಸ್ ಮೂಲಕ ಮತ್ತೆ ಹೆದ್ದಾರಿ ಪ್ರವೇಶಿಸಿ ಉಪ್ಪಿನಂಗಡಿ-ಹಿರೇಬಂಡಾಡಿ-ಕೊಯಿಲ ಸಂಪರ್ಕ ರಸ್ತೆಯಲ್ಲಿ ಸಾಗಿ ಹಿರೇಬಂಡಾಡಿಯಲ್ಲಿ ನ್ಯಾಯ ಬೆಲೆ ಅಂಗಡಿ ಎದುರುಗಡೆ ತಿರುವು ಪಡೆದುಕೊಂಡು ಅದೇ ರಸ್ತೆಯಾಗಿ ಸಾಗಿ ಹೆದ್ದಾರಿಯನ್ನು ದಾಟಿ ಕಾಲೇಜು ಮೈದಾನದಲ್ಲಿ 10 ಕಿಲೋ ಮೀಟರ್ ಓಟವನ್ನು ಕೊನೆಗೊಳಿಸಲಾಯಿತು.

6 ವಿದ್ಯಾರ್ಥಿಗಳು ಅಸ್ವಸ್ಥ

ರಸ್ತೆಯ ಉದ್ದಕ್ಕೂ ಗ್ರಾಮದ ಮಂದಿ ಕಾತರದಿಂದ ಕಾಯುತ್ತಿದ್ದುದು ಕಂಡು ಬಂತು. ಕ್ರೀಡಾಕೂಟ ಸಮಿತಿ ವತಿಯಿಂದ ಅಲ್ಲಲ್ಲಿ ನೀರಿನ ಬಾಟಲಿ ವ್ಯವಸ್ಥೆ, ಸ್ಪಾಂಜ್, ಐಸ್ ನೀರು ವ್ಯವಸ್ಥೆ ಮಾಡಲಾಗಿತ್ತು. ಉಪ್ಪಿನಂಗಡಿಯಿಂದ ಹಿರೇಬಂಡಾಡಿ ತನಕವೂ ಅಲ್ಲಲ್ಲಿ ಇರುವ ತಿರುವು ರಸ್ತೆ ಬಳಿಯಲ್ಲಿ ರಸ್ತೆಗೆ ವಾಹನ, ಪ್ರಾಣಿಗಳು ಪ್ರವೇಶಿಸದಂತೆ ಸ್ವಯಂಸೇವಕರು ಮತ್ತು ಪೊಲೀಸರು ಕರ್ತವ್ಯ ನಿರತರಾಗಿದ್ದರು. ಕ್ರೀಡಾಕೂಟದಲ್ಲಿ ಭಾಗವಹಿಸಿದ 6 ವಿದ್ಯಾರ್ಥಿಗಳ ಆರೋಗ್ಯದಲ್ಲಿ ವ್ಯತ್ಯಾಸವುಂಟಾಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟರು.

ಗಮನಸೆಳೆದ ಆತಿಥ್ಯ

ಕ್ರೀಡಾಪಟುಗಳಿಗೆ ನ.18ರ ರಾತ್ರಿಯಿಂದ ಊಟೋಪಚಾರದ ಆತಿಥ್ಯವನ್ನು ಕ್ರೀಡಾಕೂಟದ ವತಿಯಿಂದ ಮಾಡಲಾಗಿತ್ತು. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಹಾಗೂ ಸದಸ್ಯ ಕೃಷ್ಣ ರಾವ್ ಅರ್ತಿಲ ನೇತೃತ್ವದಲ್ಲಿ ಊಟೋಪಚಾರದ ವ್ಯವಸ್ಥೆ ಅತ್ಯುತ್ತಮವಾಗಿ ನಿರ್ವಹಿಸಲ್ಪಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net