ರಾಷ್ಟ್ರದ ರಾಜಧಾನಿಗೂ ತಲುಪಿತು ಕೋಟದಲ್ಲಿನ ಮೆಹೆಂದಿ ವೇಳೆ ನಡೆದ ಅವಾಂತರ ವಿಚಾರ; ವಿವರಣೆ ಕೇಳಿ ಉಡುಪಿ ಎಸ್​ಪಿಗೆ ಪತ್ರ

Women commission
Published on

ಉಡುಪಿ: ಮೊನ್ನೆಮೊನ್ನೆಯಷ್ಟೇ ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ಕೋಟದ ಕೊರಗರ ಮನೆಯಲ್ಲಿ ಮೆಹೆಂದಿ ಸಂದರ್ಭದಲ್ಲಿ ನಡೆದ ಅವಾಂತರ ವಿಚಾರ ಇದೀಗ ರಾಷ್ಟ್ರ ರಾಜಧಾನಿ ದೆಹಲಿಗೂ ತಲುಪಿದೆ. ಮಾತ್ರವಲ್ಲ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರ ನೀಡುವಂತೆ ಉಡುಪಿ ಎಸ್​ಪಿಗೆ ದೆಹಲಿಯಿಂದ ಪತ್ರ ಕೂಡ ರವಾನೆಯಾಗಿದೆ.

ಸೋಮವಾರ ರಾತ್ರಿ ಕೋಟತಟ್ಟು ಗ್ರಾಮದಲ್ಲಿ ಕೊರಗ ಸಮುದಾಯದ ಮನೆಯಲ್ಲಿ ನಡೆದ ಮೆಹೆಂದಿ ಕಾರ್ಯಕ್ರಮದಲ್ಲಿ ಅವಧಿ ಮೀರಿ ಡಿಜೆ ಹಾಕಿದ್ದಾರೆ ಎಂಬ ದೂರಿನ ಅನ್ವಯ ತೆರಳಿದ್ದ ಪಿಎಸ್‌ಐ ಬಿ.ಪಿ. ಸಂತೋಷ್,​ ಮದುಮಗ ಸಹಿತ ಮನೆಯವರ ಮೇಲೆ ಲಾಠಿ ಪ್ರಹಾರ ನಡೆಸಿದ್ದರಿಂದ ಹಲವರು ಗಾಯಗೊಂಡಿದ್ದರು. ಈ ಬಗ್ಗೆ ರಾಜ್ಯದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಈ ಸಂಬಂಧ ಡಿವೈಎಸ್​ಪಿ ನೇತೃತ್ವದಲ್ಲಿ ತನಿಖೆ ನಡೆಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ್‌ ಅವರು ತನಿಖೆಗೆ ಆದೇಶ ನೀಡಿದ್ದರು. ಬಳಿಕ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಅವರು ಎಸ್​​ಐ ಸಂತೋಷ್​ ಅವರನ್ನು ಅಮಾನತುಗೊಳಿಸಿದ್ದಲ್ಲದೆ, ಐವರು ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದರು.

ಈ ಪ್ರಕರಣ ಇದೀಗ ರಾಷ್ಟ್ರೀಯ ಮಹಿಳಾ ಆಯೋಗದ ಗಮನ ಸೆಳೆದಿದ್ದು, ಆಯೋಗವು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಿವರಣೆ ಕೇಳಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶಾಮಲಾ ಕುಂದರ್, ಕೊರಗರ ಮೇಲಿನ ಪೊಲೀಸ್ ದೌರ್ಜನ್ಯ ಪೊಲೀಸರ ಮೇಲಿನ ವಿಶ್ವಾಸವನ್ನೇ ಕಳೆದುಕೊಳ್ಳುವಂತೆ ಮಾಡುತ್ತದೆ. ಜನಸಾಮಾನ್ಯರನ್ನು ರಕ್ಷಿಸಬೇಕಾದ ಪೊಲೀಸರೇ ಈ ರೀತಿ ವರ್ತಿಸಿರುವುದು ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತೆ. ಈ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದು ವಿವರಣೆ ಕೇಳಿದ್ದೇವೆ. ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಿ ನಂತರದ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net