ಹಾಡಹಗಲೇ ಯುವಕನ ಕುತ್ತಿಗೆಗೆ ಬ್ಲೇಡ್​ ಹಾಕಿದ ಪುಂಡನಿಗೆ ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು!

ವಿಜಯವಾಣಿ (57)
Published on

ತುಮಕೂರು: ಮದ್ಯ ಸೇವಿಸಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಪುಂಡನೊಬ್ಬ ಬ್ಲೇಡ್​ನಿಂದ ವ್ಯಕ್ತಿಯ ಕುತ್ತಿಗೆ ಕುಯ್ದ ಘಟನೆ ತುಮಕೂರಿನ ಸದಾಶಿವನಗರದ 4ನೇ ಮುಖ್ಯರಸ್ತೆಯಲ್ಲಿ ಸಂಭವಿಸಿದೆ.ಹಾಡಹಗಲೇ ಬ್ಲೇಡ್​ನಿಂದ ಕುತ್ತಿಗೆ ಕುಯ್ದು ಪುಂಡಾಟ ಮೇರೆದ ಕುಡುಕನನ್ನು ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು ಆತ ಪರಾರಿಯಾಗದಂತೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಚಿತ್ರದುರ್ಗ ಮೂಲದ ಹನುಮಂತ ಎಂಬ ವ್ಯಕ್ತಿ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ದಿನಸಿ ಖರೀದಿಸಲು ಅಂಗಡಿಗೆ ಆಗಮಿಸಿದ್ದರು. ಈ ವೇಳೆ ಅಲ್ಲೇ ರಸ್ತೆಬದಿ ನಿಂತಿದ್ದ ಪುಂಡನೊಬ್ಬ ಹನುಮಂತನ ಬಳಿ ಬಂದು ತನಗೆ ಮದ್ಯ ಸೇವಿಸಲು ಹಣ ಕೊಡುವಂತೆ ಪೀಡಿಸಿದ್ದಾನೆ. ಇಬ್ಬರ ಮಧ್ಯೆ ಒಂದಷ್ಟು ಮಾತಿನ ಚಕಮಕಿ ನಡೆದಿದೆ. ಯಾವಾಗ ಹನುಮಂತು ದುಡ್ಡು ಕೊಡಲು ನಿರಾಕರಿಸಿದರೋ ತಕ್ಷಣವೇ ಬ್ಲೇಡ್​ನಿಂದ ಅವರ ಕುತ್ತಿಗೆ ಕುಯ್ದು ಪರಾರಿಯಾಗಲು ಪುಂಡ ಯತ್ನಿಸಿದ್ದಾನೆ.

ಕುಡುಕನ ವರ್ತನೆ ನೋಡಿ ಬೇಸತ್ತ ಸಾರ್ವಜನಿಕರು ಆತನನ್ನು ಹಿಡಿದು ಚಪ್ಪಲಿಯಲ್ಲಿ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಾಳು ಹನುಮಂತುಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ಸಂಬಂಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳೆದ ಎರಡು ದಿನಗಳ ಹಿಂದೆ ನಡೆದಿರುವ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net