ಕಾಂಡೋಮ್​ ಖರೀದಿ ಮಾಡಿದವರ ಮಾಹಿತಿ ಲೀಕ್​! ಸಂಶೋಧನೆಯಲ್ಲಿ ಆಘಾತಕಾರಿ ಸಂಗತಿ ಬಯಲು

Condoms causing drug
Published on

ನವದೆಹಲಿ: ಯುನೈಟೆಡ್​ ಕಿಂಗ್​ಡಮ್​ (ಯುಕೆ) ಮೂಲದ ಕಾಂಡೋಮ್ ಮತ್ತು ಪರ್ಸನಲ್ ಲೂಬ್ರಿಕೆಂಟ್ಸ್ ಬ್ರ್ಯಾಂಡ್ ಡ್ಯುರೆಕ್ಸ್ ಇಂಡಿಯಾದ ಸ್ಥಳೀಯ ವಿಭಾಗವು ತನ್ನ ಗ್ರಾಹಕರ ಖಾಸಗಿ ಮಾಹಿತಿಯನ್ನು ಸೋರಿಕೆ ಮಾಡುತ್ತಿರುವ ಗಂಭೀರ ಆರೋಪಕ್ಕೆ ಗುರಿಯಾಗಿದೆ.

ಡ್ಯುರೆಕ್ಸ್‌ನ ಭಾರತೀಯ ವಿಭಾಗವು ಭದ್ರತಾ ಉಲ್ಲಂಘನೆ ಮಾಡಿದೆ. ಇದು ಗ್ರಾಹಕರ ಸೂಕ್ಷ್ಮ ಡೇಟಾ ಕಳ್ಳತನ ಮಾಡುತ್ತಿದೆ ಎಂದು ಭದ್ರತಾ ಸಂಶೋಧಕ ಸೌರಜೀತ್ ಮಜುಂದಾರ್​ ಅವರು ಟ್ರೆಕ್​ಕ್ರಂಚ್​ಗೆ ವರದಿ ಮಾಡಿದ್ದಾರೆ. ಈ ಸುದ್ದಿಯಿಂದ ಇದೀಗ ಗ್ರಾಹಕರು ಕಂಗಾಲಾಗಿದ್ದಾರೆ.

ಡ್ಯುರೆಕ್ಸ್ ಇಂಡಿಯಾ ವೆಬ್‌ಸೈಟ್‌ನ ಆರ್ಡರ್ ದೃಢೀಕರಣ ಪುಟದಲ್ಲಿ ಸರಿಯಾದ ದೃಢೀಕರಣದ ಕೊರತೆಯಿಂದಾಗಿ, ಅಪರಿಚಿತ ವ್ಯಕ್ತಿಗಳು ವೆಬ್‌ಸೈಟ್‌ಗೆ ನುಸುಳಿ ಖಾಸಗಿ ಗ್ರಾಹಕರ ಡೇಟಾವನ್ನು ಕದ್ದಿದ್ದಾರೆ. ಡೇಟಾವು ಗ್ರಾಹಕರ ಹೆಸರುಗಳು, ಫೋನ್ ಸಂಖ್ಯೆಗಳು, ಇಮೇಲ್ ವಿಳಾಸಗಳು, ಶಿಪ್ಪಿಂಗ್ ವಿಳಾಸ, ಆರ್ಡರ್ ಮಾಡಿದ ಉತ್ಪನ್ನಗಳು ಹಾಗೂ ಪಾವತಿಸಿದ ಮೊತ್ತದ ವಿವರಗಳನ್ನು ಒಳಗೊಂಡಿರುತ್ತದೆ ಎಂದು ಸೌರಜೀತ್ ಮಜುಂದಾರ್​ ತಮ್ಮ ವರದಿಯಲ್ಲಿ ಉಲ್ಲೇಖಸಿದ್ದಾರೆ.

ಎಷ್ಟು ಜನರ ಡೇಟಾ ಸೋರಿಕೆಯಾಗಿದೆ ಎಂಬುದನ್ನು ಕಂಪನಿ ಬಹಿರಂಗಪಡಿಸಿಲ್ಲ. ಆದರೆ, ಆರ್ಡರ್ ದೃಢೀಕರಣ ಪುಟದಲ್ಲಿ ಸರಿಯಾದ ದೃಢೀಕರಣದ ಕೊರತೆಯಿಂದಾಗಿ ನೂರಾರು ಜನರು ಮಾಹಿತಿ ಈಗಾಗಲೇ ಬಹಿರಂಗವಾಗಿದೆ ಎಂಬುದಕ್ಕೆ ಸಂಶೋಧಕರು ಪುರಾವೆಗಳನ್ನು ಕಂಡುಕೊಂಡಿದ್ದಾರೆ.

ಇನ್ಟಿಮೇಟ್ ಉತ್ಪನ್ನಗಳೊಂದಿಗೆ ವ್ಯವಹರಿಸುವ ಬ್ರ್ಯಾಂಡ್‌ಗೆ ಗ್ರಾಹಕರ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳುವುದು ನಿರ್ಣಾಯಕವಾಗಿದೆ ಎಂದು ಮಜುಂದರ್ ಟೆಕ್​ಕ್ರಂಚ್​ಗೆ ತಿಳಿಸಿದರು. ಇನ್ನು ಟೆಕ್​ಕ್ರಂಚ್​, ಮಜುಂದಾರ್ ಅವರ ಸಂಶೋಧನೆಗಳನ್ನು ಒಮ್ಮೆ ಪರಿಶೀಲಿಸಿದ್ದು, ಗ್ರಾಹಕ ಆರ್ಡರ್ ವಿವರಗಳನ್ನು ಪಡೆಯುವ ಸಮಯದಲ್ಲಿ ಅಪರಿಚಿತರು ಸುಲಭವಾಗಿ ಆನ್‌ಲೈನ್‌ನಲ್ಲಿ ನುಸುಳಬಹುದು ಎಂದು ಕಂಡುಕೊಂಡಿದೆ.

ಅಂದಹಾಗೆ ಸೋರಿಕೆಯಾದ ಡೇಟಾದಿಂದ ಗುರುತಿನ ಕಳ್ಳತನ ಮತ್ತು ಅನಗತ್ಯ ಕಿರುಕುಳಕ್ಕೆ ಕಾರಣವಾಗಬಹುದು ಎಂದು ಮಜುಂದಾರ್ ಕಳವಳ ವ್ಯಕ್ತಪಡಿಸಿದರು. ಅವರು ತಮ್ಮ ವರದಿಯನ್ನು ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಆಫ್ ಇಂಡಿಯಾಕ್ಕೆ (CERT-In) ರವಾನಿಸಿದ್ದಾರೆ. ಸೋರಿಕೆಯಾದ ಗ್ರಾಹಕರ ಡೇಟಾದ ಬಗ್ಗೆ ಪ್ರಶ್ನಿಸಲು ಡ್ಯುರೆಕ್ಸ್‌ನ ಮೂಲ ಕಂಪನಿ ರೆಕಿಟ್‌ನ ವಕ್ತಾರ ರವಿ ಭಟ್ನಾಗರ್ ಅವರನ್ನು ಟೆಕ್​ಕ್ರಂಚ್​ ಸಂಪರ್ಕಿಸಿದಾಗ ಸೋರಿಕೆಯಾದ ಡೇಟಾದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಇನ್ನು ಡ್ಯುರೆಕ್ಸ್ ಇಂಡಿಯಾ ತನ್ನ ಸಮಸ್ಯೆಯನ್ನು ಪರಿಹರಿಸುವವರೆಗೆ ದೋಷದ ವಿವರಗಳನ್ನು ರಹಸ್ಯವಾಗಿ ಇಟ್ಟಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net