ಮೆಟ್ರೋ ದರ ಏರಿಕೆ ವಿರುದ್ಧ ಜನಾಕ್ರೋಶ: BMRCLಗೆ ಮಹತ್ವದ ಸೂಚನೆ ಕೊಟ್ಟ ಸಿಎಂ ಸಿದ್ದರಾಮಯ್ಯ! Namma Metro

Namma Metro
Published on

Namma Metro : ದರ ಏರಿಕೆಯ ಬಿಸಿ ನೀಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್​ಸಿಎಲ್​) ವಿರುದ್ಧ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ. ಬೇರೆ ನಗರಗಳ ಮೆಟ್ರೋ ಸೇವೆಗಿಂತಲೂ ನಮ್ಮ ಮೆಟ್ರೋ ದುಬಾರಿಯಾಗಿದೆ. ಮೆಟ್ರೊ ಬದಲು ಆಟೋ, ಬೈಕ್​ ಮತ್ತು ಟ್ಯಾಕ್ಸಿಯಲ್ಲೇ ಸಂಚರಿಸಬಹುದು ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ದರ ಇಳಿಕೆ ಮಾಡುವಂತೆ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಸಿಎಂ ಸಿದ್ದರಾಮಯ್ಯ, ಬೆಂಗಳೂರು ಮೆಟ್ರೊ ರೈಲು ನಿಗಮ ಇತ್ತೀಚೆಗೆ ಪರಿಷ್ಕರಿಸಿರುವ ಪ್ರಯಾಣ ದರ ಏರಿಕೆ ಹಲವು ರೀತಿಯ ವೈಪರೀತ್ಯಗಳಿಂದ ಕೂಡಿದ್ದು, ಕೆಲವು ಕಡೆಗಳಲ್ಲಿ ಪ್ರಯಾಣ ದರ ದುಪ್ಪಟ್ಟಾಗಿರುವುದನ್ನು ಗಮನಿಸಿದ್ದೇನೆ. ಇದರ ವಿರುದ್ಧ ವ್ಯಕ್ತವಾದ ಸಾರ್ವಜನಿಕರ ವಿರೋಧವನ್ನು ಪರಿಗಣಿಸಿ ಎಲ್ಲೆಲ್ಲಿ ಅಸಹಜ ರೀತಿಯಲ್ಲಿ ದರ ಏರಿಕೆಯಾಗಿದೆಯೋ ಅಂತಹ ಕಡೆಗಳಲ್ಲಿ ಪ್ರಯಾಣ ದರ ಇಳಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದ್ದೇನೆ.

ಮೆಟ್ರೊ ರೈಲು ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಬೇಕಾಗಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವ ಕಾರಣ ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯವಾಗಿತ್ತು ಎನ್ನುವುದು ನಿಜವಾದರೂ ಅಂತಿಮವಾಗಿ ಪ್ರಯಾಣಿಕರ ಹಿತರಕ್ಷಣೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ ಎನ್ನುವುದನ್ನು ಬಿಎಂಆರ್‌ಸಿಎಲ್ ಗಮನಕ್ಕೆ ತಂದಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಆರೋಪ-ಪ್ರತ್ಯಾರೋಪ

ಮೆಟ್ರೋ ದರ ಏರಿಕೆ ವಿಚಾರವೂ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಗಿದೆ. ರಾಜ್ಯ ಸರ್ಕಾರ ಮೆಟ್ರೋ ದರ ಏರಿಕೆ ಮಾಡಿದೆ ಎಂದು ಬಿಜೆಪಿ ನಾಯಕರು ಕಾಂಗ್ರೆಸ್​ ನಾಯಕರ ವಿರುದ್ಧ ಟೀಕಾ ಪ್ರಹಾರ ನಡೆಸಿದರೆ, ಮೆಟ್ರೋ ದರ ಏರಿಕೆ ರಾಜ್ಯ ಸರ್ಕಾರದ ಅಡಿಯಲ್ಲಿ ಬರುವುದಿಲ್ಲ ಮತ್ತು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದು ಎಂದು ಕಾಂಗ್ರೆಸ್​ ನಾಯಕರು ತಿರುಗೇಟು ನೀಡುತ್ತಿದ್ದಾರೆ.

ಪರಿಷ್ಕೃತ ದರ ಹೀಗಿದೆ

0-2 ಕಿಲೋ ಮೀಟರ್​​ ಪ್ರಯಾಣಕ್ಕೆ 10 ರೂ. ಏರಿಕೆ

2-4 ಕಿಲೋ ಮೀಟರ್​ ಪ್ರಯಾಣಕ್ಕೆ 20 ರೂ. ಏರಿಕೆ

4-6 ಕಿಲೋ ಮೀಟರ್​ ಪ್ರಯಾಣಕ್ಕೆ 30 ರೂ. ಏರಿಕೆ

6-8 ಕಿಲೋ ಮೀಟರ್​ ಪ್ರಯಾಣಕ್ಕೆ 40 ರೂ. ಏರಿಕೆ

8-10 ಕಿಲೋ ಮೀಟರ್​ ಪ್ರಯಾಣಕ್ಕೆ 50 ರೂ. ಏರಿಕೆ

10-15 ಕಿಲೋ ಮೀಟರ್​ ಪ್ರಯಾಣಕ್ಕೆ 60 ರೂ. ಏರಿಕೆ

15-20 ಕಿಲೋ ಮೀಟರ್​ ಪ್ರಯಾಣಕ್ಕೆ 70 ರೂ. ಏರಿಕೆ

20-25 ಕಿಲೋ ಮೀಟರ್​ ಪ್ರಯಾಣಕ್ಕೆ 80 ರೂ. ಏರಿಕೆ

25-30 ಕಿಲೋ ಮೀಟರ್​ ಪ್ರಯಾಣಕ್ಕೆ 90 ರೂ. ಏರಿಕೆ

30 ಕಿ.ಮೀ.​​ಕ್ಕಿಂತ ಹೆಚ್ಚಿನ ಪ್ರಯಾಣಕ್ಕೆ ಟಿಕೆಟ್ ದರ 90 ರೂ.

ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಮಾತ್ರ ಅಸ್ತಿತ್ವದಲ್ಲಿರುವ ಶೇ. 5 ರಿಯಾಯಿತಿಯನ್ನು ಮುಂದುವರಿಸಿದೆ. ಎಲ್ಲಾ ಭಾನುವಾರ ಮತ್ತು ರಾಷ್ಟ್ರೀಯ ರಜಾದಿನಗಳಲ್ಲಿ (ಜನವರಿ 26, ಆಗಸ್ಟ್ 15, ಅಕ್ಟೋಬರ್ 02) ದಿನವಿಡೀ ಏಕರೂಪವಾಗಿ ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಶೇ 10% ರಿಯಾಯಿತಿ ನೀಡಲಾಗಿದೆ. ಪ್ರಯಾಣಕ್ಕೆ ಬಳಸುವ ಸ್ಮಾರ್ಟ್ ಕಾರ್ಡಿನಲ್ಲಿ ಕನಿಷ್ಠ ಮೊತ್ತ ರೂ 90 ಹೊಂದಿರಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net