

Raichur Accident : ಕೆಲ ದಿನಗಳ ಹಿಂದೆ ಸಿಂಧನೂರು ಬಳಿ ನಡೆದಿದ್ದ ಭೀಕರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಂತ್ರಾಲಯ ರಾಯರ ಮಠದ ಸಂಸ್ಕೃತ ಪಾಠ ಶಾಲಾ ವಿದ್ಯಾರ್ಥಿ ಇಂದು ಮುಂಜಾನೆ ಹೃದಯಸ್ತಂಭನದಿಂದ ಸಾವಿಗೀಡಾಗಿದ್ದಾನೆ.
ಜಯಸಿಂಹ (23) ಮೃತ ವಿದ್ಯಾರ್ಥಿ. ಕಳೆದ 23 ದಿನಗಳಿಂದ ರಾಯಚೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. 21ರಂದು ಸಿಂಧನೂರಿನಲ್ಲಿ ನಡೆದಿದ್ದ ಅಪಘಾತದಲ್ಲಿ ಜಯಸಿಂಹ ತಲೆ, ಬೆನ್ನು, ಶ್ವಾಸಕೋಶ ಸೇರಿ ದೇಹದ ಹಲವೆಡೆ ಗಂಭೀರವಾದ ಪೆಟ್ಟುಬಿದ್ದಿತ್ತು.
ಮಂತ್ರಾಲಯದಿಂದ ಆನೆಗುಂದಿಗೆ ತೆರಳುತ್ತಿದ್ದ ಕ್ರೂಸರ್ ವಾಹನ ಪಲ್ಟಿಯಾಗಿ ಈ ದುರಂತ ಸಂಭವಿಸಿತ್ತು. ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದರು. 10 ಜನರು ಗಾಂಭೀರವಾಗಿ ಗಾಯಗೊಂಡಿದ್ದರು. ಇದೀಗ ಗಾಯಾಳು ಜಯಸಿಂಹ ಹೃದಯಸ್ತಂಭನದಿಂದ ವಿಧಿವಶನಾಗಿದ್ದಾನೆ.
ಈ ಸಂಬಂಧ ಸಿಂಧನೂರು ಸಂಚಾರಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ಅಪಘಾತದಲ್ಲಿ ಬಳ್ಳಾರಿಯ ಹಯವದನ (18), ಮಂತ್ರಾಲಯದವರಾದ ಸುಜಯೇಂದ್ರ(22) ಹಾಗೂ ಕೊಪ್ಪಳದ ಅಭಿಲಾಷ್ (20) ಹಾಗೂ ಚಾಲಕ ಶಿವ (20) ಸ್ಥಳದಲ್ಲೇ ಮೃತಪಟ್ಟಿದ್ದರು. ಹಂಪಿಯಲ್ಲಿ ನಡೆದ ಶ್ರೀ ನರಹರಿ ತೀರ್ಥರ ಆರಾಧನೆ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮಂತ್ರಾಲಯದಿಂದ ಹಂಪಿಗೆ ಪ್ರಯಾಣಿಸುತ್ತಿದ್ದ ವೇಳೆ ಸಿಂಧನೂರು ಬಳಿ ಈ ದುರ್ಘಟನೆ ಸಂಭವಿಸಿತು.