

ಸುಬ್ರಹ್ಮಣ್ಯ: ಗ್ರಾಮೀಣ ಭಾಗಗಳಲ್ಲಿ ನಾಗರಪಂಚಮಿ ಭಕ್ತಿ ಸಂಭ್ರಮದಿಂದ ಆಚರಿಸಿಕೊಳ್ಳಲಾಯಿತು. ಗ್ರಾಮೀಣ ಪ್ರದೇಶಗಳಲ್ಲಿನ ನಾಗಬನ ಮತ್ತು ನಾಗನ ಕಟ್ಟೆಗಳಲ್ಲಿ ವಿಶೇಷ ಪೂಜೆ ನೆರವೇರಿತು. ನಾಗನಕಟ್ಟೆ ಮತ್ತು ನಾಗಬನಗಳಲ್ಲಿ ಪುರೋಹಿತರು ಹಾಲು, ಸೀಯಾಳ ಮೊದಲಾದ ಅಭಿಷೇಕ ನೆರವೇರಿಸಿ ಪೂಜೆ ಸಮರ್ಪಿಸಿ ಪ್ರಸಾದ ನೀಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ನಾಗಬನ ಮತ್ತು ಕಟ್ಟೆಗಳಲ್ಲಿ ವಿಶೇಷ ಪೂಜೆ ನೆರವೇರಿತು. ನಾಯರ್‌ಕೆರೆ, ಬಳ್ಪ, ಏನೆಕಲ್, ಕೊಲ್ಲಮೊಗ್ರ, ಬೆಂಡೋಡಿ, ಮೊಗ್ರ, ಕಮಿಲ, ಸುಬ್ರಹ್ಮಣ್ಯದ ನೂಚಿಲ, ದೇವರಗದ್ದೆ, ಇಂಜಾಡಿ, ಹೊಸೋಳಿಕೆ, ಏನೆಕಲ್, ಬೀದಿಗುಡ್ಡೆ, ಪಲ್ಲೋಡಿ, ಹರಿಹರ, ಬಾಳುಗೋಡು, ಬಿಳಿನೆಲೆ, ನೆಟ್ಟಣ, ಕೈಕಂಬ, ಚೇರು, ಪಳ್ಳಿಗದ್ದೆ, ಕುಲ್ಕುಂದ, ಇಂಜಾಡಿ ಮೊದಲಾದೆಡೆ ನಾಗನಕಟ್ಟೆಗಳಿಗೆ ತನು ಸಮರ್ಪಿಸುವುದರ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಅಲ್ಲದೆ ನಾಗರಾಜನಿಗೆ ಸೀಯಾಳ, ಹೊದುಲು, ತೆಂಗಿನ ಕಾಯಿ, ಹೂ ಹಣ್ಣು ಸಮರ್ಪಿಸಲಾಯಿತು.
ಪಂಜ ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನದ ನಾಗನಕಟ್ಟೆಗೆ ಭಕ್ತರು ಹಾಲು ಮತ್ತು ಸೀಯಾಳ ಸಮರ್ಪಿಸಿದರು. ಇಲ್ಲಿ ನಾಗತಂಬಿಲ, ಕ್ಷೀರಾಭಿಷೇಕ, ತುಪ್ಪದ ಅಭಿಷೇಕ, ಎಳನೀರು ಅಭಿಷೇಕ ನಡೆಯಿತು. ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹಾಲಾಭಿಷೇಕ, ಸಿಯಾಳ ಅಭಿಷೇಕ, ನಾಗ ತಂಬಿಲ ನಡೆಯಿತು. ಮಧ್ಯಾಹ್ನ ಸಾಮೂಹಿಕ ಅಶ್ಲೇಷ ಬಲಿಪೂಜೆ ನೆರವೇರಿತು. ಶಂಖಪಾಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಏನೆಕಲ್, ನಿಡ್ವಾಳ ಮಹಾವಿಷ್ಣು ದೇವಸ್ಥಾನ, ಕೊಚ್ಚಿಲ ಮಯೂರ ವಾಹನ ಸುಬ್ರಹ್ಮಣ್ಯ ದೇವಸ್ಥಾನ ಕಟ್ಟ ಕೊಲ್ಲಮೊಗ್ರ, ಹರಿಹರೇಶ್ವರ ದೇವಸ್ಥಾನ ಹರಿಹರ, ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಕೇರ್ಪಡ ಮಹಿಷ ಮರ್ದಿನಿ ದೇವಳ, ದೇವರಕಾನ ಲಕ್ಷ್ಮೀ ನರಸಿಂಹ ದೇವಸ್ಥಾನ ಮೊದಲಾದ ದೇವಾಲಯಗಳಲ್ಲಿನ ನಾಗನ ಕಟ್ಟೆಗಳಲ್ಲಿ ಭಕ್ತರು ನಾಗನಿಗೆ ಹಾಲಿನ ಮತ್ತು ಸೀಯಾಳದ ಅಭಿಷೇಕ ನೆರವೇರಿಸಿದರು.
ಕುಲ್ಕುಂದ ಬಸವನಮೂಲೆಯ ಶ್ರೀ ಬಸವೇಶ್ವರ ದೇವಸ್ಥಾನ ನಾಗನಕಟ್ಟೆಯಲ್ಲಿ ಶ್ರೀ ದೇವಳ ಪ್ರಧಾನ ಅರ್ಚಕ ಗಣೇಶ್ ದೀಕ್ಷಿತ್ ವೈದಿಕ ವಿದಿ ವಿಧಾನಗಳೊಂದಿಗೆ ನಾಗರಾಜನಿಗೆ ತನು ಸಮರ್ಪಣೆ ಮಾಡಿದರು. ಅಲ್ಲದೆ ತುಪ್ಪದ ಅಭಿಷೇಕ, ಎಳನೀರು ಅಭಿಷೇಕ ನೆರವೇರಿಸಿದರು. ದೇವಳ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸ್ಕಂದ ಉಪಸ್ಥಿತರಿದ್ದರು.
ಪಂಜದ ಗರಡಿಬೈಲಿನಲ್ಲಿರುವ ಮೂಲ ನಾಗನಕಟ್ಟೆಯಲ್ಲಿ ವೈಧಿಕ ವಿದಿ ವಿಧಾನಗಳೊಂದಿಗೆ ನಾಗರಾಜನಿಗೆ ತನು ಸಮರ್ಪಣೆ ನಡೆಯಿತು. ಅಲ್ಲದೆ ತುಪ್ಪದ ಅಭಿಷೇಕ, ಎಳನೀರು ಅಭಿಷೇಕ ನೆರವೇರಿತು.