ಮಾಧ್ಯಮದಲ್ಲಿ ನಾಗಮಣಿ ರಾವ್​ ಅಗ್ರಗಣ್ಯ ಸಾಧನೆ: ಹಿರಿಯ ಸಂಶೋಧಕ ಹಂಪನಾ ಅಭಿಮತ

book
Published on

ಬೆಂಗಳೂರು: ಪುರುಷರು ಮಾತ್ರ ಪತ್ರಿಕೋದ್ಯಮ ಓದುತ್ತಿದ್ದ ಕಾಲದಲ್ಲಿ ನಾಗಮಣಿ ಎಸ್​.ರಾವ್​ ಮಾಧ್ಯಮದಲ್ಲಿ ಅಗ್ರಗಣ್ಯ ಸಾಧನೆ ಮಾಡಿದ್ದಾರೆ ಎಂದು ಹಿರಿಯ ಸಂಶೋಧಕ ಡಾ. ಹಂಪ ನಾಗರಾಜಯ್ಯ (ಹಂಪನಾ) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಚಿಂತನ ವೇದಿಕೆಯು ಎನ್​.ಆರ್​. ಕಾಲನಿಯ ಬಿಎಂಶ್ರೀ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಕಾಶವಾಣಿಯ ನಿವೃತ್ತ ಸುದ್ದಿ ಸಂಪಾದಕಿ ನಾಗಮಣಿ ಎಸ್​.ರಾವ್​ ಅವರ ಆತ್ಮಕಥನ "ಸುದ್ದಿಸಂಗಾತಿಯ ಸ್ವಗತ' ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಕರ್ನಾಟಕ ಮೆಚ್ಚುವಂತ ವಾರ್ತಾವಾಚಕಿಯಾಗಿದ್ದ ನಾಗಮಣಿ ಆತ್ಮಕಥನ ಉತ್ಪ್ರೇಕ್ಷೆಯ ಸೋಂಕಿಲ್ಲದೆ ಸರಳವಾಗಿ ಮೂಡಿಬಂದಿದೆ. ನಿರಂಜನ ಎಂಬುವರು ಇವರ ಸುದ್ದಿ ಓದುವ ಶೈಲಿಗೆ ಮರುಳಾಗಿ, ನಾನು ಸತ್ತ ನಂತರ ಮರಣದ ಸುದ್ದಿಯನ್ನು ನೀವು ಓದಬೇಕು ಎಂದು ನಾಗಮಣಿ ಬಳಿ ಕೇಳಿದ್ದರು.ನಿರಂಜನ ಮರಣ ಹೊಂದುವ ವೇಳೆಗೆ ನಾಗಮಣಿ ಸುದ್ದಿವಾಚಕ ಕೆಲಸದಿಂದ ನಿವೃತ್ತರಾಗಿದ್ದರೂ, ಇವರ ಮರಣ ಸುದ್ದಿ ಓದಿದ್ದರು. ಇಂತಹ ಅನೇಕ ರೋಚಕ ಸಂಗತಿಗಳು ಪುಸ್ತಕದಲ್ಲಿವೆ ಎಂದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ಮಾತನಾಡಿ, ದಕ್ಷಿಣ ಭಾರತದಲ್ಲಿ ನಾಗಮಣಿ ಮೊದಲ ಮಹಿಳಾ ಪತ್ರಕರ್ತೆ. ಇವರ ಕುರಿತು ಯುವಪೀಳಿಗೆ ತಿಳಿಯಬೇಕೆಂಬ ಉದ್ದೇಶದಿಂದ ಕೃತಿ ಖರೀದಿಸಿ ಮಾಧ್ಯಮ ಅಕಾಡೆಮಿಯಲ್ಲಿ ಇಡಲಾಗುವುದು. ಈ ಆತ್ಮಕಥನವನ್ನು ಇಂಗ್ಲಿಷ್​ಗೆ ಅನುವಾದಿಸಲು ಸಹಕಾರ ನೀಡಲಾಗುವುದು ಎಂದು ಹೇಳಿದರು. ಸುದ್ದಿಸಂಗಾತಿಯ ಸ್ವಗತ ಕೃತಿ ಸಂಯೋಜಕಿ ಮಾಲತಿ ಭಟ್​, ಪತ್ರಕರ್ತೆಯರಾದ ಕೆ.ಎಚ್​. ಸಾವಿತ್ರಿ, ಆರ್​.ಪೂರ್ಣಿಮಾ, ಪದ್ಮಾ ಶಿವಮೊಗ್ಗ ಮತ್ತಿತರಿದ್ದರು.

ಪತ್ರಿಕೋದ್ಯಮ ಕ್ಷೇತ್ರ ಮಾತ್ರವಲ್ಲದೆ ಲೇಖಕಿಯರ ಸಂಘದಲ್ಲೂ ನಾಗಮಣಿ ಸಾಧನೆ ಮಾಡುವ ಮೂಲಕ ನಾವಿನ್ಯತೆಗೆ ಸಾಯಾಗಿದ್ದಾರೆ.

| ಎಚ್​.ಎಲ್​.ಪುಷ್ಪ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ

ಆತ್ಮಕಥನ ಬರೆಯುವ ಯೋಚನೆ ಬಂದಿರಲಿಲ್ಲ. ಕೆಲಸ ಮಾಡುವುದರಲ್ಲಿ ತೃಪ್ತಿ ಕಾಣುತ್ತಿದ್ದೆ. ನಮ್ಮ ಕಾಲದಲ್ಲಿ ನಡೆದಿದ್ದ ಬ್ರಿಟಿಷರ ನಡುವಿನ ಸಂರ್ಷ ಮತ್ತು ಹೋರಾಟದ ಅರಿವು ಅಲ್ಪಮಟ್ಟಿಗಾದರೂ ಇಂದಿನ ಮಕ್ಕಳಿಗಿರಬೇಕು. ಇಂದಿನ ಮಕ್ಕಳು ಗಾಂಧಿಯನ್ನೇ ಮರೆಯುತ್ತಿರುವುದು ವಿಷಾದನೀಯ.

| ನಾಗಮಣಿ ಎಸ್​. ರಾವ್​, ನಿವೃತ್ತ ವಾರ್ತಾವಾಚಕಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net