4 ವರ್ಷದ ಹಿಂದೆ ಬ್ಯೂಟಿ ಪಾರ್ಲರ್ ಸೇಲ್ಸ್ ಗರ್ಲ್ ಆಗಿ ಬೆಂಗಳೂರಿಗೆ ಬಂದವಳ ಭಯಾನಕ ಕತೆ ಇದು!

Hackers
Published on

ಬೆಂಗಳೂರು: ನಾಲ್ಕು ವರ್ಷಗಳ ಹಿಂದೆ ಬ್ಯೂಟಿ ಪಾರ್ಲರ್ ಸೇಲ್ಸ್ ಗರ್ಲ್ ಆಗಿ ನಾಗಾಲ್ಯಾಂಡ್​ನಿಂದ ಬೆಂಗಳೂರಿಗೆ ಬಂದವಳು ನಂತರದ ದಿನಗಳಲ್ಲಿ ಪರಿಚಯಸ್ಥರ ಜತೆಗೂಡಿ ಹಣ ಮಾಡುವ ದಂಧೆಗಿಳಿದ ಈಕೆ ಇದೀಗ ತನ್ನ ಆಪ್ತರೊಂದಿಗೆ ತಾನೂ ಸಹ ಜೈಲು ಪಾಲಾಗಿದ್ದಾಳೆ.

ಹೌದು. ಇ-ಮೇಲ್ ಹ್ಯಾಕ್ ಮಾಡುತ್ತಿದ್ದ ನಾಗಾಲ್ಯಾಂಡ್ ಮೂಲದ ಗ್ಯಾಂಗ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಬಂಧಿರನ್ನು ಥಿಯಾ (31), ಸೆರೋಪಾ (27) ಹಾಗೂ ಇಸ್ಟರ್ ಕೊನ್ಯಾಕ್ ಅಲಿಯಾಸ್​ ರುಬಿಕಾ ಎಂದು ಗುರುತಿಸಲಾಗಿದೆ.

ಇವರು ನಿವೃತ್ತ ಡಿಜಿಐಜಿಪಿ ಶಂಕರ್ ಬಿದರಿ ಖಾತೆಯನ್ನು ಹ್ಯಾಕ್ ಮಾಡಿ, ಬಿದರಿ ಸ್ನೇಹಿತರಿಗೆ ಹಣಕ್ಕಾಗಿ ಮೆಸೇಜ್​ ಮಾಡಿದ್ದರು. ಮೆಸೇಜ್ ನೋಡಿದ ಬಿದರಿ ಸ್ನೇಹಿತ 25 ಸಾವಿರ ರೂಪಾಯಿ ಹಣವನ್ನು ಆರೋಪಿಗಳ ಖಾತೆಗೆ ಜಮಾ ಮಾಡಿದ್ದರು.

ಬಳಿಕ ಇಮೇಲ್​ ದುರ್ಬಳಕೆ ಆಗುತ್ತಿದೆ ಎಂದರಿತ ಶಂಕರ್​ ಬಿದರಿ ಅವರು ಈ ಬಗ್ಗೆ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಸುಮಾರು 60 ಬ್ಯಾಂಕ್ ಅಕೌಂಟ್ ಹೊಂದಿದ್ದರು. ಕಳೆದ ವರ್ಷ ನವೆಂಬರ್​ನಿಂದ ಇತ್ತೀಚೆಗೆ 60 ಬ್ಯಾಂಕ್ ಅಕೌಂಟ್ ಒಪನ್ ಆಗಿದೆ. ನಾಗಾಲ್ಯಾಂಡ್​ನ ನಿರುದ್ಯೋಗಿ ಯುವಕರಿಗೆ ಹಣದ ಆಮಿಷವೊಡ್ಡಿ ಆಧಾರ್ ಕಾರ್ಡ್, ಮನೆ ಬಾಡಿಗೆ ಪತ್ರ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

ಪ್ರಕರಣದಲ್ಲಿರುವ‌ ಮಹಿಳಾ ಆರೋಪಿ ರುಬಿಕಾ ಇದರ ಮಾಸ್ಟರ್ ಮೈಂಡ್ ಎಂದು ತಿಳಿದುಬಂದಿದೆ. ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದು ಬ್ಯೂಟಿ ಪಾರ್ಲರ್​ವೊಂದರಲ್ಲಿ ಸೇಲ್ಸ್ ಗರ್ಲ್ ಆಗಿದ್ದಳು. ಫೇಸ್​ಬುಕ್​ನಲ್ಲಿ ಪೀಟರ್ ಹಾಗೂ ಜೇಮ್ಸ್ ಎನ್ನುವವರ ಪರಿಚಯ ಮಾಡಿಕೊಂಡಿದ್ದ ರುಬಿಕಾ, ಜೇಮ್ಸ್ ಹಾಗೂ ಪೀಟರ್ ಮಾರ್ಗದರ್ಶನದಂತೆ ಅಕೌಂಟ್ ಹ್ಯಾಕ್ ಮಾಡಿ ಹಣ ಎಗರಿಸುತ್ತಿದ್ದಳು.

ಸದ್ಯ ಆರೋಪಿಗಳನ್ನ ಬಂಧಿಸಿರುವ ಸೈಬರ್​ ಕ್ರೈಂ ಪೊಲೀಸರು ವಿಚಾರಣೆಯನ್ನು ಮುಂದುವರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net