ಅವಧೂತ ದತ್ತ ಪೀಠದ ಕಿರಿಯ ಪೀಠಾಧಿಪತಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಹೇಳಿಕೆ
ಮೈಸೂರು: ಯೋಗದ ಮೊದಲನೇ ಲಕ್ಷಣವೇ ನಿಶ್ಶಬ್ದ ಮತ್ತು ಮೌನ. ಯಾವುದೇ ಕೆಲಸವನ್ನು ಆಯಾ ಕಾರ್ಯಕ್ಕೆ ತಕ್ಕಂತೆ ಶ್ರದ್ಧೆಯಿಂದ ಮಾಡುವುದೇ ನಿಜವಾದ ಯೋಗ ಎಂದು ಅವಧೂತ ದತ್ತ ಪೀಠದ ಕಿರಿಯ ಪೀಠಾಧಿಪತಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಹೇಳಿದರು.
ವಿಶ್ವ ಯೋಗ ದಿನಾಚರಣೆ ಹಾಗೂ ವಿಶ್ವ ಸಂಗೀತ ದಿನಾಚರಣೆಯ ಅಂಗವಾಗಿ ನಗರದ ಅವಧೂತ ದತ್ತ ಪೀಠದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ವಿಶೇಷ ಯೋಗಾಭ್ಯಾಸ ಹಾಗೂ ಪ್ರದರ್ಶನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಆಶೀರ್ವಾದ ಹಾಗೂ ಆದೇಶದಂತೆ ಆಶ್ರಮದಲ್ಲಿ ಕಳೆದ 50 ವರ್ಷಗಳಿಂದ ‘ದತ್ತ ಕ್ರಿಯಾ ಯೋಗ’ ಕಲಿಸಿಕೊಡಲಾಗುತ್ತಿದ್ದು, ಸಾಧಕ ಬೋಧಕರು ಇದರ ಯಶಸ್ವಿ ಪ್ರಚಾರ ಮಾಡುತ್ತಿದ್ದಾರೆ ಎಂದು ಸ್ಮರಿಸಿದರು.
ಈ ವರ್ಷದ ಯೋಗ ದಿನಾಚರಣೆಯು ಆರೋಗ್ಯಕರ ವಯಸ್ಸಾಗುವಿಕೆಗಾಗಿ ಯೋಗ ಎಂಬ ಧ್ಯೇಯದೊಂದಿಗೆ ನಡೆಯುತ್ತಿರುವುದು ಮುಖ್ಯವಾಗಿದೆ. ಯಾರೂ ಕಾಲವನ್ನು ತಡೆಯಲು ಸಾಧ್ಯವಿಲ್ಲ, ಆದರೆ, ಕಾಲದಿಂದ ನಮ್ಮಲ್ಲಿ ಆಗುವ ಬದಲಾವಣೆ ಯೋಗದ ಮೂಲಕ ಧನಾತ್ಮಕವಾಗಿ ರೂಪಿಸಿಕೊಳ್ಳಬಹುದು. ಕಾಲದ ಪ್ರಭಾವವು ನಮ್ಮ ಮೇಲೆ ಸರಿಯಾದ ರೀತಿಯಲ್ಲಿ ಬೀರುವಂತೆ ಮಾಡಲು ಯೋಗ ಸಹಕಾರಿಯಾಗಿದೆ ಎಂದು ಹೇಳಿದರು.
ಇತ್ತೀಚೆಗೆ ನಡೆದ ‘ಮಹಾ ಸಂಕಲ್ಪ ದಿವಸ’ದಂದು ನಗರದಲ್ಲಿ 1,200 ಯೋಗ ಉಪಾಧ್ಯಾಯರು, 1,20,000ಕ್ಕೂ ಹೆಚ್ಚು ಜನ ಸಾಮಾನ್ಯರು ಒಟ್ಟಾಗಿ ಯೋಗಾಭ್ಯಾಸ ಮಾಡಲು ನಿರ್ಧರಿಸಿರುವುದು ಶ್ಲಾಘನೀಯ. ಈ ಯೋಗದ ಪ್ರಚಾರ ಹೀಗೆಯೇ ಮುಂದುವರಿಯಬೇಕು.
ಮುಂದಿನ ವರ್ಷ ಕರ್ನಾಟಕದಲ್ಲಿ ಕನಿಷ್ಠ 2 ಕೋಟಿ ಜನರು ಯೋಗಾಭ್ಯಾಸ ಮಾಡುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಇಂದಿನಿಂದಲೇ ಪ್ರಯತ್ನವನ್ನು ಪ್ರಾರಂಭಿಸಬೇಕು. ತಮ್ಮ ಬಂಧು-ಮಿತ್ರರಿಗೆ ಯೋಗದ ಮಹತ್ವ ತಿಳಿಸಿಕೊಡಬೇಕು ಎಂದು ಕರೆ ನೀಡಿದರು.
ದತ್ತ ಕ್ರಿಯಾ ಯೋಗದ ವ್ಯಾಪ್ತಿಯು ಜಾಗತಿಕ ಮಟ್ಟದಲ್ಲಿದ್ದು, ದಿನದ ಮೊದಲ ಸೂರ್ಯನ ಕಿರಣಗಳು ಬೀಳುವ ನ್ಯೂಜಿಲ್ಯಾಂಡ್‌ನಿಂದ ಹಿಡಿದು ಪಶ್ಚಿಮದ ಅಮೆರಿಕದ ಕ್ಯಾಲಿಫೋರ್ನಿಯಾವರೆಗಿನ ಆಶ್ರಮದ ಎಲ್ಲ ಶಾಖೆಗಳಲ್ಲೂ ಯೋಗಾಭ್ಯಾಸ ನಡೆಯುತ್ತಿದೆ. ಸತತ 24 ಗಂಟೆಗಳ ಕಾಲ ದತ್ತ ಕ್ರಿಯಾ ಯೋಗದ ನೇರಪ್ರಸಾರ (ಲೈವ್) ನಡೆಯುವ ಸಂಕಲ್ಪ ಯಶಸ್ವಿಯಾಗಿ ನೆರವೇರುತ್ತಿದೆ ಎಂದು ಶ್ರೀಗಳು ಹೆಮ್ಮೆಯಿಂದ ತಿಳಿಸಿದರು.
ಆಶ್ರಮದ ವೈದ್ಯರೂ ಹಾಗೂ ಕ್ರಿಯಾ ಯೋಗ ಶಿಕ್ಷಕರೂ ಆದ ಫಣಿಶ್ರೀ ಅವರ ಮಾರ್ಗದರ್ಶನದಲ್ಲಿ ಮಕ್ಕಳು ಸಿದ್ಧಪಡಿಸಿದ್ದ ಸಂಗೀತ ಹಾಗೂ ಯೋಗ ಪ್ರದರ್ಶನ ಕಾರ್ಯಕ್ರಮವು ಎಲ್ಲರ ಗಮನ ಸೆಳೆಯಿತು.