ಕುತೂಹಲದ ಹಣಾಹಣಿಗೆ ಸಾಕ್ಷಿಯಾದ ಕುಸ್ತಿ

ನಗರದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ನಾಡಕುಸ್ತಿ ಪಂದ್ಯಾವಳಿಯಲ್ಲಿ  ಯುವ ಪೈಲ್ವಾನರ ಸೆಣಸಾಟದ ದೃಶ್ಯ.
ನಗರದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ನಾಡಕುಸ್ತಿ ಪಂದ್ಯಾವಳಿಯಲ್ಲಿ ಯುವ ಪೈಲ್ವಾನರ ಸೆಣಸಾಟದ ದೃಶ್ಯ.
Published on

ಪ್ರಮುಖ ಮುಖ್ಯಾಂಶಗಳು

  • ಕುಸ್ತಿ ಪ್ರಿಯರ ಉತ್ಸಾಹ ಇಮ್ಮಡಿಗೊಳಿಸಿದ ಪಂದ್ಯ
  • ಗೆಲುವಿಗಾಗಿ ಸೆಣಸಾಡಿದ ಪೈಲ್ವಾನರು
ಮೈಸೂರು: ನಗರದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ನಾಡಕುಸ್ತಿ ರಂಗೇರಿತ್ತು. ಕುತೂಹಲದ ಹಣಾಹಣಿಯಿಂದ ಕೂಡಿದ್ದ ಜಟ್ಟಿಗಳ ಸೆಣಸಾಟವು ಕುಸ್ತಿಯ ಪ್ರಿಯರಲ್ಲಿ ಉತ್ಸಾಹವನ್ನು ಇಮ್ಮಡಿಗೊಳಿಸಿತು.
ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ ಕುಸ್ತಿ ಪಂದ್ಯಾಳಿ ರೋಚಕತೆಯಿಂದ ಕೂಡಿತ್ತು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಯುವ ಪೈಲ್ವಾನರು ಪಟ್ಟಿಗೆ ಪ್ರತಿಪಟ್ಟು ಹಾಕಿ ಗಮನ ಸೆಳೆದರು. ಇವರ ಉತ್ಸಾಹ ಕಂಡು ಕುಸ್ತಿ ಪ್ರಿಯರು ಶಿಳ್ಳೆ ಚಪ್ಪಾಳೆ ತಟ್ಟೆ ಹುರಿದುಂಬಿಸಿದರು.
ರಮ್ಮನಹಳ್ಳಿ ಪೈಲ್ವಾನ್ ಕೃಷ್ಣಗೋಪಾಲ ವಿರುದ್ಧ ಇಷ್ಕಿಯಾನ್ ಗರಡಿಯ ರಿಯಾನ್ ಕೆಲವೇ ನಿಮಿಷಗಳಲ್ಲಿ ಗೆದ್ದು ಕೇಕೆ ಹಾಕಿದರು. ಮೊದಲಿನಿಂದಲೇ ಆಕ್ರಮಣಕಾರಿಯಾಗಿದ್ದ ರಿಯಾನ್ ಎದುರಾಳಿಗೆ ಪಟ್ಟವನ್ನು ನಿವ್ವಳಿಸಿಕೊಂಡು ಪ್ರತಿಪಟ್ಟು ಹಾಕಿ ಕೆಡವಿ ಚಿತ್ ಮಾಡಿ ಸಂಭ್ರಮಿಸಿದರು.
ರಮ್ಮನಹಳ್ಳಿಯ ಚೇತನ ವಿರುದ್ಧ ಅರಳಕುಪ್ಪೆಯ ಅರ್ಜುನ್ ನಿಮಿಷಗಳಲ್ಲೇ ಜಯ ಗಳಿಸಿದರು. ಮಟ್ಟಿಯ ಮಣ್ಣನ್ನು ಎರಚಿಕೊಂಡು ಅಖಾಡಕ್ಕಿಳಿದ ಅರ್ಜುನ್ ಮೊದಲು ನಿಧಾನವಾಗಿ ಆಡಿದರು. ಚೇತನ್ ಹಾಕಿದ ಪಟ್ಟುಗಳನ್ನು ಮೆಟ್ಟಿ ನಿಂತರು. ಕೆಳಗಿನಿಂದ ಮೇಲೆದ್ದ ಅರ್ಜುನ್ ಬಿಡಿಸಿಕೊಳ್ಳಲಾದ ಪಟ್ಟು ಹಾಕಿ ಚೇತನ್ ಕೆಡವಿ ಚಿತ್ ಮಾಡಿ ಸಂಭ್ರಮಿಸಿದರು. ಬನ್ನೂರಿನ ವರುಣ್ ಮತ್ತು ಶಾಕಿಬ್ ಕುಸ್ತಿ ಪಂದ್ಯ ಸಮಬಲದೊಂದಿಗೆ ಕೊನೆಗೊಂಡಿತು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಮಹಾಪೌರ ಪುರುಷೋತ್ತಮ್, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ನಿಂಗರಾಜ ಮಲ್ಲಾಡಿ, ಪಾಲಿಕೆ ಮಾಜಿ ಸದಸ್ಯ ಪ್ರದೀಪ್, ವಕೀಲ ಉಮೇಶ್, ಅಶೋಕಪುರಂ ಪೈಲ್ವಾನ್ ಕೃಷ್ಣ, ನಂಜನಗೂಡಿನ ಪೈಲ್ವಾನ್ ಸಿದ್ದರಾಜು, ಇನ್ನಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net