ವಿಶ್ವದ ಮೊದಲ ರೊಬೋಟ್ ನೆರವಿನ ತ್ರಿವಳಿ ಶಸ್ತ್ರಚಿಕಿತ್ಸೆ

ತ್ರಿವಳಿ ಶಸ್ತ್ರಚಿಕಿತ್ಸಕರು
ತ್ರಿವಳಿ ಶಸ್ತ್ರಚಿಕಿತ್ಸಕರು
Published on

ಪ್ರಮುಖ ಮುಖ್ಯಾಂಶಗಳು

  • 81 ವರ್ಷದ ವೃದ್ಧರಿಗೆ ಒಂದೇ ಅರಿವಳಿಕೆಯಲ್ಲಿ ಹೃದಯ ಬೈಪಾಸ್, ಹರ್ನಿಯಾ, ಸುನ್ನತಿ ಶಸ್ತ್ರಚಿಕಿತ್ಸೆ ಯಶಸ್ವಿ
ನಗರದ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆ ವೈದ್ಯಕೀಯ ಕ್ಷೇತ್ರದಲ್ಲಿ ಅಪರೂಪದ ಸಾಧನೆ ದಾಖಲಿಸಿದೆ. 81 ವರ್ಷದ ವೃದ್ಧ ರೋಗಿಗೆ ಒಂದೇ ಅರಿವಳಿಕೆಯಲ್ಲಿ ರೊಬೋಟ್ ನೆರವಿನಿಂದ ಹೃದಯ ಬೈಪಾಸ್, ತೊಡೆಸಂದು (ಗ್ರೋಯಿನ್) ಹರ್ನಿಯಾ ಹಾಗೂ ಸುನ್ನತಿ (ಸರ್ಕಂಸಿಷನ್) ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಿದ್ದು, ವಿಶ್ವದಲ್ಲೇ ಮೊದಲ ಬಾರಿಗೆ ಇಂತಹ ಶಸ್ತ್ರಚಿಕಿತ್ಸೆ ನಡೆದಿರುವುದಾಗಿ ಆಸ್ಪತ್ರೆ ತಿಳಿಸಿದೆ.
ಮೈಸೂರಿನ 81 ವರ್ಷದ ರೋಗಿಯು ಹರ್ನಿಯಾ ಸಮಸ್ಯೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಗೆ ಮುನ್ನ ನಡೆಸಿದ ಪರೀಕ್ಷೆಯಲ್ಲಿ ಹೃದಯದ ಮೂರು ಪ್ರಮುಖ ಅಪಧಮನಿಗಳಲ್ಲಿ ತೀವ್ರ ಅಡಚಣೆ ಇರುವುದರಿಂದ ತುರ್ತು ಕೊರೊನರಿ ಆರ್ಟರಿ ಬೈಪಾಸ್ ಗ್ರಾಫ್ಟ್ (ಸಿಎಬಿಜಿ) ಶಸ್ತ್ರಚಿಕಿತ್ಸೆ ಅಗತ್ಯವಿರುವುದು ಪತ್ತೆಯಾಯಿತು. ಇದೇ ವೇಳೆ ಫೈಮೊಸಿಸ್ ಸಮಸ್ಯೆಯೂ ಇರುವುದನ್ನು ವೈದ್ಯರು ಗುರುತಿಸಿದರು.
ರೋಗಿಯ ವಯಸ್ಸು ಹಾಗೂ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ, ಮೂರು ಪ್ರತ್ಯೇಕ ಶಸ್ತ್ರಚಿಕಿತ್ಸೆಗಳ ಬದಲು ಒಂದೇ ಅರಿವಳಿಕೆಯಲ್ಲಿ ರೊಬೋಟ್ ನೆರವಿನ ಮೂಲಕ ಎಲ್ಲ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ವಿವಿಧ ವಿಭಾಗಗಳ ತಜ್ಞರು ನಿರ್ಧರಿಸಿದರು. ಇದರಿಂದ ರೋಗಿಗೆ ಪುನಃ ಪುನಃ ಅರಿವಳಿಕೆ ನೀಡುವ ಅಗತ್ಯ ತಪ್ಪಿದ್ದು, ಶಸ್ತ್ರಚಿಕಿತ್ಸೆಯ ಅಪಾಯ, ಸೋಂಕಿನ ಸಾಧ್ಯತೆ ಹಾಗೂ ಚೇತರಿಕೆಯ ಅವಧಿ ಕಡಿಮೆಯಾಗಿದೆ.
ಫೋರ್ಟಿಸ್ ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ನಿರ್ದೇಶಕ ಡಾ. ಸುದರ್ಶನ ಜಿ.ಟಿ. ಅವರು ಸುಮಾರು ಎರಡೂವರೆ ಗಂಟೆಗಳಲ್ಲಿ ರೊಬೋಟ್ ನೆರವಿನ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆ ನೆರವೇರಿಸಿದರು. ಬಳಿಕ ಜೀರ್ಣಾಂಗ ಮತ್ತು ಕನಿಷ್ಠ ನೋವಿನ ಶಸ್ತ್ರಚಿಕಿತ್ಸಾ ವಿಭಾಗದ ನಿರ್ದೇಶಕ ಡಾ. ಸೌರಭ್ ಮಿಶ್ರಾ ಅವರು ಹರ್ನಿಯಾ ಶಸ್ತ್ರಚಿಕಿತ್ಸೆ ನಡೆಸಿದರು. ಕೊನೆಗೆ ಮೂತ್ರರೋಗ ತಜ್ಞ ಡಾ. ಮಹೇಂದ್ರ ಜೈನ್ ಅವರು ಸುನ್ನತಿ ಹಾಗೂ ಫ್ರೆನ್ಯುಲೊಪ್ಲಾಸ್ಟಿ ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಿದರು.
ಸುಮಾರು ನಾಲ್ಕು ಗಂಟೆಗಳ ಅವಧಿಯಲ್ಲಿ ಮೂರು ಶಸ್ತ್ರಚಿಕಿತ್ಸೆಗಳನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು, ರೋಗಿಗೆ ರಕ್ತ ವರ್ಗಾವಣೆಯ ಅಗತ್ಯವೂ ಉಂಟಾಗಲಿಲ್ಲ. ಶಸ್ತ್ರಚಿಕಿತ್ಸೆಯ ಬಳಿಕ 12 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು, ಮೂರು ದಿನಗಳಲ್ಲೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಎರಡು ವಾರಗಳೊಳಗೆ ರೋಗಿ ಸಾಮಾನ್ಯ ಜೀವನಕ್ಕೆ ಮರಳಿದ್ದಾರೆ.
ಈ ಕುರಿತು ಮಾತನಾಡಿದ ಡಾ. ಸುದರ್ಶನ ಜಿ.ಟಿ., ಒಂದೇ ಅರಿವಳಿಕೆಯಲ್ಲಿ ಮೂರು ಸಂಕೀರ್ಣ ರೊಬೋಟ್ ನೆರವಿನ ಶಸ್ತ್ರಚಿಕಿತ್ಸೆಗಳನ್ನು ನಡೆಸಿರುವುದು ಬಹು ಆರೋಗ್ಯ ಸಮಸ್ಯೆಗಳಿರುವ ರೋಗಿಗಳಿಗೆ ಸುರಕ್ಷಿತ ಹಾಗೂ ಪರಿಣಾಮಕಾರಿ ಚಿಕಿತ್ಸೆಯ ಹೊಸ ಸಾಧ್ಯತೆಯನ್ನು ತೆರೆದಿದೆ ಎಂದು ಹೇಳಿದರು.
ಆಸ್ಪತ್ರೆಯ ಸೌಲಭ್ಯಗಳ ನಿರ್ದೇಶಕ ಗೌತಮ್ ಸಿ.ಬಿ. ಅವರು, ವೈದ್ಯಕೀಯ ಶ್ರೇಷ್ಠತೆ, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ರೋಗಿ ಕೇಂದ್ರಿತ ಚಿಕಿತ್ಸೆಯತ್ತ ಆಸ್ಪತ್ರೆಯ ಬದ್ಧತೆಯ ಪ್ರತೀಕವಾಗಿ ಈ ಸಾಧನೆ ದಾಖಲಾಗಿದೆ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net