ಸರ್ಕಾರಗಳಿಂದ ಕಾರ್ಮಿಕರ ಹಕ್ಕುಗಳ ದಮನ

ಹುಣಸೂರು ನಗರದಲ್ಲಿ ಸಿಐಟಿಯು ವತಿಯಿಂದ ಕಾರ್ಮಿಕ ದಿನಾಚರಣೆ ಅಂಗವಾಗಿ ಮೆರವಣಿಗೆ ನಡೆಸಲಾಯಿತು. ಜಗದೀಶ್ ಸೂರ್ಯ, ಬಸವರಾಜು ಕಲ್ಕುಣಿಕೆ, ಲೋಕೇಶ್, ಮೀನಾ, ಮಂಜುಳಾ, ಉಲ್ಲಾಸ್, ರವಿಕುಮಾರ್ ಇತರರಿದ್ದರು.
ಹುಣಸೂರು ನಗರದಲ್ಲಿ ಸಿಐಟಿಯು ವತಿಯಿಂದ ಕಾರ್ಮಿಕ ದಿನಾಚರಣೆ ಅಂಗವಾಗಿ ಮೆರವಣಿಗೆ ನಡೆಸಲಾಯಿತು. ಜಗದೀಶ್ ಸೂರ್ಯ, ಬಸವರಾಜು ಕಲ್ಕುಣಿಕೆ, ಲೋಕೇಶ್, ಮೀನಾ, ಮಂಜುಳಾ, ಉಲ್ಲಾಸ್, ರವಿಕುಮಾರ್ ಇತರರಿದ್ದರು.
Published on
ಹುಣಸೂರು: ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಕಾರ್ಮಿಕ ಹಕ್ಕುಗಳನ್ನು ದಮನ ಮಾಡಿ, ದುಡಿವ ಸಮುದಾಯವನ್ನು ಗುಲಾಮಗಿರಿಗೆ ತಳ್ಳುವತ್ತ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೆಜ್ಜೆ ಇಟ್ಟಿವೆ ಎಂದು ಸಿಪಿಐ(ಎಂ)ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಸಿಐಟಿಯು ನೇತೃತ್ವದಲ್ಲಿ ಆಯೋಜಿಸಿದ್ದ ವಿಶ್ವ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿದ ಅವರು, ಹೋರಾಟದಿಂದ ಪಡೆದ ಕಾರ್ಮಿಕರ ಹಕ್ಕುಗಳನ್ನು ಇಂದು ದಮನ ಮಾಡಲು ಸರ್ಕಾರಗಳು ಹೊರಟಿವೆ. ಇಂತಹ ದಮನಕಾರಿ ನೀತಿಗಳ ವಿರುದ್ಧ ಕಾರ್ಮಿಕರ ಸಂಘಟಿತ ಹೋರಾಟವೇ ಇದಕ್ಕೆ ಮದ್ದು. ಇಂದು ಕಾರ್ಮಿಕರ ಶ್ರಮಕ್ಕೆ ತಕ್ಕ ಬೆಲೆ ಸಿಗುತ್ತಿಲ್ಲ. ಕಾರ್ಮಿಕರನ್ನು ಬೇಕಾಬಿಟ್ಟಿ ದುಡಿಸಿಕೊಳ್ಳುವ ಪರಿಪಾಠಕ್ಕೆ ಸರ್ಕಾರಗಳು ನಾಂದಿ ಹಾಡುತ್ತಿವೆ ಎಂದು ಆರೋಪಿಸಿದರು.
ಸಿಐಟಿಯು ತಾಲೂಕು ಸಂಚಾಲಕ ಬಸವರಾಜು ಕಲ್ಕುಣಿಕೆ ಮಾತನಾಡಿ, ಹಿಂದಿನ ದಿನಗಳಲ್ಲಿ ಕಾರ್ಮಿಕರು ಎಂಟು ಗಂಟೆ ಕೆಲಸ, ಎಂಟು ಗಂಟೆ ಮನರಂಜನೆ ಮತ್ತು 8 ಗಂಟೆ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಇಂದು ಕಾರ್ಮಿಕ ನೀತಿಗಳನ್ನು ಬದಲಾಯಿಸಿ 12 ಗಂಟೆ ಕೆಲಸ ಮಾಡುವ ಮೂಲಕ ಕಾರ್ಮಿಕರನ್ನು ಮತ್ತಷ್ಟು ಶೋಷಣೆಗೆ ಒಳಪಡಿಸಿ ಅವರ ಬದುಕನ್ನು ಕಿತ್ತುಕೊಳ್ಳುತ್ತಿವೆ. ಜನಸಾಮಾನ್ಯರ ಪರವಾಗಿ ಕೆಲಸ ಮಾಡಬೇಕಾದ ಸರ್ಕಾರಗಳು ಕಂಪನಿಗಳ ಪರವಾಗಿ ಕಾನೂನುಗಳನ್ನು ಜಾರಿ ಮಾಡಿ ಕಾರ್ಮಿಕರನ್ನು ಶೋಷಣೆ ಮಾಡಲು ಮುಂದಾಗುತ್ತಿರುವುದು ಖಂಡನೀಯ ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚಿಕ್ಕಣ್ಣಗೌಡ, ತಾಲೂಕು ಅಧ್ಯಕ್ಷ ಎಂ.ಸಿ.ಚಂದ್ರಶೇಖರ್, ಗ್ರಾಪಂ ನೌಕರರ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್, ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಮಂಜಳಾ ಮಾತನಾಡಿದರು. ಇದಕ್ಕೂ ಮುನ್ನ ನಗರದ ಸಂವಿಧಾನ ಸರ್ಕಲ್‌ನಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾರ್ಮಿಕರು ಕೆಂಪು ಭಾವುಟ ಹಿಡಿದು, ಕಾರ್ಮಿಕರ ಐಕ್ಯತೆ ಚಿರಾಯುವಾಗಲಿ, ಸಿಐಟಿಯು ಜಿಂದಾಬಾದ್, ಕಾರ್ಮಿಕರ ಕಾಯ್ದೆಗಳ ತಿದ್ದುಪಡಿ ಬೇಡವೇ ಬೇಡ, ಕಾರ್ಮಿಕ ವಿರೋಧಿ ನೀತಿ ಜಾರಿಮಾಡಲು ಹೊರಟಿರುವ ಸರ್ಕಾರಗಳಿಗೆ ಧಿಕ್ಕಾರ ಘೋಷಣೆ ಕೂಗುತ್ತ ಮೆರವಣಿಗೆ ನಡೆಸಿದರು.
ಗ್ರಾಪಂ ನೌಕರರ ಜಿಲ್ಲಾ ಕಾರ್ಯದರ್ಶಿ ದಿನೇಶ್, ತಾಲೂಕು ಕಾರ್ಯದರ್ಶಿ ಜಗದೀಶ್, ಬಿಸಿಯೂಟ ಸಂಘದ ಕಾರ್ಯದರ್ಶಿ ಹೇಮಾ, ಖಜಾಂಚಿ ಶಿವಮ್ಮ, ಮುಖಂಡರಾದ ರಾಜೇಶ್ವರಿ, ಮೀನಾ, ಪ್ರೀತಿ, ರಾಜಮ್ಮ, ಶಾಂತಮ್ಮ, ಜಾನಕಮ್ಮ, ಮುಳ್ಳೂರ್ ಮಹಾದೇವ, ಸಿದ್ದಯ್ಯ, ಉಲ್ಲಾಸ್, ರವಿಕುಮಾರ್, ಮಹಾದೇವ, ಮಧು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net