ನಂಜನಗೂಡು ರಸಬಾಳೆಯಲ್ಲಿ ವೈಜ್ಞಾನಿಕ ಬೇಸಾಯ ಕುರಿತ ಕಾರ್ಯಾಗಾರ

ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಯು. ಧರ್ಮರಾವ್, ಸಿ. ಚಂದ್ರು, ಮಧುಮತಿ ಆಂಡ್ರೂಸ್, ಡಾ.ಬಿ.ಕೆ.ಪೂಜಾ, ಡಾ. ಜಿ.ಎಂ.ವಿನಯ್. ಡಾ.ವೈ.ಪಿ.ಪ್ರಸಾದ್, ಡಾ.ದೀಪಕ್  ಇತರರು ಇದ್ದರು.
ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಯು. ಧರ್ಮರಾವ್, ಸಿ. ಚಂದ್ರು, ಮಧುಮತಿ ಆಂಡ್ರೂಸ್, ಡಾ.ಬಿ.ಕೆ.ಪೂಜಾ, ಡಾ. ಜಿ.ಎಂ.ವಿನಯ್. ಡಾ.ವೈ.ಪಿ.ಪ್ರಸಾದ್, ಡಾ.ದೀಪಕ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಂಪ್ರದಾಯಿಕ ಬೆಳೆಗಳ ಕೃಷಿ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಕಲ್ಪಿಸುವುದು ಎಪಿಇಡಿಎ ಮೂಲ ಉದ್ದೇಶ
  • ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆ, ಈರನಗೆರೆಬದನೆ ಹಾಗೂ ಮೈಸೂರು ಮಲ್ಲಿಗೆ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ ಧನ
ಮೈಸೂರು: ಭೌಗೋಳಿಕ ಹಿನ್ನೆಲೆಯುಳ್ಳ ಸಾಂಪ್ರದಾಯಿಕ ಬೆಳೆಗಳ ವೈಜ್ಞಾನಿಕ ಬೇಸಾಯ ಕ್ರಮಗಳು ಮಾರುಕಟ್ಟೆ ಸೌಲಭ್ಯ ಹಾಗೂ ರಫ್ತು ಅವಕಾಶಗಳ ಕುರಿತ ಒಂದು ದಿನದ ಕಾರ್ಯಾಗಾರವನ್ನು ಸುತ್ತೂರಿನ ಐಸಿಎಅರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಆಯೋಜಿಸಲಾಗಿತ್ತು.
ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರಿನ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ(ಎಪಿಇಡಿಎ) ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಂಜನಗೂಡು ರಸಬಾಳೆಯಲ್ಲಿ ವೈಜ್ಞಾನಿಕ ಬೇಸಾಯ ಕ್ರಮಗಳು ಹಾಗೂ ಮಾರುಕಟ್ಟೆ ಸೌಲಭ್ಯ ಹಾಗೂ ರಫ್ತು ಅವಕಾಶಗಗಳ ಕುರಿತು ತಿಳಿಸಿಕೊಡಲಾಯಿತು.
ಎಪಿಇಡಿಎ ಪ್ರಾದೇಶಿಕ ಸಹಾಯಕ ಪ್ರಧಾನ ವ್ಯವಸ್ಥಾಪಕ ಯು.ಧರ್ಮರಾವ್ ಮಾತನಾಡಿ, ಭೌಗೋಳಿಕ ಹಿನ್ನೆಲೆಯುಳ್ಳ ಸಾಂಪ್ರದಾಯಿಕ ಬೆಳೆಗಳ ಕೃಷಿ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಕಲ್ಪಿಸುವುದು ಎಪಿಇಡಿಎ ಮೂಲ ಉದ್ದೇಶವಾಗಿದೆ ಎಂದರು.
ರೈತರು ತಮ್ಮ ಸಾಂಪ್ರದಾಯಿಕ ಬೆಳೆಗಳ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಎಪಿಇಡಿಎ ಅನ್ನು ಸಂಪರ್ಕಿಸಿದರೆ ಸೂಕ್ತ ಮಾರ್ಗದರ್ಶವನ್ನು ನೀಡಲಾಗುವುದು ಎಂದು ತಿಳಿಸಿದರು.
ನಂಜನಗೂಡು ತಾಲೂಕು ತೋಟಗಾರಿಕೆ ಇಲಾಖೆಯ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಸಿ.ಚಂದ್ರು ಮಾತನಾಡಿ, ನಂಜನಗೂಡು ರಸಬಾಳೆಯನ್ನು ರೈತರು ಬೆಳೆಯುವುದು ಕಡಿಮೆಯಾಗಿದೆ. ಆದರೆ ನಂಜನಗೂಡು ರಸಬಾಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವುದರಿಂದ ರೈತರು ಹೆಚ್ಚು ಬೆಳೆಯಬೇಕು ಎಂದು ತಿಳಿಸಿದರು.
ಮೈಸೂರು ಜಿಲ್ಲೆಯ ಭೌಗೋಳಿಕ ಹಿನ್ನೆಲೆಯುಳ್ಳ ಸಾಂಪ್ರದಾಯಿಕ ಬೆಳೆಗಳಾದ ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆ, ಈರನಗೆರೆಬದನೆ ಹಾಗೂ ಮೈಸೂರು ಮಲ್ಲಿಗೆ ಬೆಳೆಗಳನ್ನು ಬೆಳೆಯಲು ಪ್ರತ್ಯೇಕವಾಗಿ ಪ್ರೋತ್ಸಾಹಧನ ನೀಡಲಾಗುವುದು ಎಂದು ತಿಳಿಸಿದರು.
ಎಪಿಇಡಿಎ ವ್ಯವಸ್ಥಾಪಕಿ ಮಧುಮತಿ ಆಂಡ್ರೂಸ್ ಮಾತನಾಡಿ, ರೈತರು ತೋಟಗಾರಿಕೆ ಇಲಾಖೆಯ ಮುಖಾಂತರ ಎಪಿಇಡಿಎಯೊಂದಿಗೆ ನೋಂದಣಿ ಮಾಡಿಕೊಂಡು ಭೌಗೋಳಿಕ ಹಿನ್ನೆಲೆಯುಳ್ಳ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆದರೆ, ಎಪಿಇಡಿಎ ವತಿಯಿಂದ 5 ಲಕ್ಷ ರೂ. ವರೆಗೆ ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.
ಎಪಿಇಡಿಎ ಸಹಾಯಕ ವ್ಯವಸ್ಥಾಪಕಿ ಡಾ.ಬಿ.ಕೆ. ಪೂಜಾ ಮಾತನಾಡಿ, ಕೃಷಿ ಉತ್ಪನ್ನಗಳನ್ನು ನಿಗದಿತ ಹಾಗೂ ನಿಗದಿತವಲ್ಲದ ಕೃಷಿ ಉತ್ಪನ್ನಗಳು ಎಂದು ವಿಂಗಡಣೆ ಮಾಡಿಕೊಂಡು ಎಪಿಇಡಿಎ ಸಂಸ್ಥೆಯೊಂದಿಗೆ ನೋಂದಣಿ ಮಾಡಿಕೊಂಡು ಗುಣಮಟ್ಟದ ಕೃಷಿ ಉತ್ಪನ್ನ ಮಾರಾಟ ಮಾಡಬಹುದಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಡಾ. ಬಿ.ಎನ್. ಜ್ಞಾನೇಶ್ ಮಾತನಾಡಿ, ರೈತರು ಪ್ರತಿ ಹಂಗಾಮಿನಲ್ಲೂ ಒಂದು ಬೆಳೆಯನ್ನು ಬೆಳೆಯದೆ ಪ್ರತಿ ಹಂಗಾಮಿಗೆ ವಿವಿಧ ಬೆಳೆಗಳನ್ನು ಬೆಳೆದು ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು. ನೈಸರ್ಗಿಕ ಕೃಷಿ, ಸಾವಯವ ಕೃಷಿ ನಡುವಿನ ವ್ಯತ್ಯಾಸ ಹಾಗೂ ಅದರ ಸಾಧಕ-ಬಾಧಕಗಳ ಕುರಿತು ಚರ್ಚಿಸಿದರು.
ಮೈಸೂರಿನ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯಲು ಕೆವಿಕೆ ವತಿಯಿಂದ ಮಾರ್ಗದರ್ಶನ ಮಾಡಲಾಗುವುದು. ಎಪಿಇಡಿಎಯಿಂದ ಸದ್ಯದಲ್ಲೇ ನಂಜನಗೂಡು ರಸಬಾಳೆ ಹಾಗೂ ಮೈಸೂರು ವೀಳ್ಯದೆಲೆ ಬೆಳೆಗಳನ್ನು ರಫ್ತು ಮಾಡಲು ಸೂಕ್ತ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ವಿಷಯ ತಜ್ಞರಾದ ಡಾ. ಜಿ.ಎಂ.ವಿನಯ್, ಡಾ. ವೈ.ಪಿ.ಪ್ರಸಾದ್, ಡಾ.ದೀಪಕ್ ಮಾಹಿತಿ ನೀಡಿದರು. ಇದೇ ವೇಳೆ ಕೇಂದ್ರ ಸರ್ಕಾರದ ಯೋಜನೆಯಾದ ವಿಕಸಿತ್ ಭಾರತ್ ಜಿ ರಾಮ್ ಜಿ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net