30 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ ಕಾನೂನು ಬದ್ಧ ವೇತನ ನೀಡದೆ ವಂಚಿಸಲಾಗುತ್ತಿದೆ
ಜನಪ್ರತಿನಿಧಿಗಳು, ಕಾರ್ಮಿಕ ಇಲಾಖೆ ಅಧಿಕಾರಿಗಳ ಸೂಚನೆಗೂ ಕಾರ್ಖಾನೆ ಮಾಲೀಕರು ಸ್ಪಂದಿಸಿಲ್ಲ
ಮೈಸೂರು:ಕಾನೂನು ಬದ್ಧ ವೇತನ ಕೊಡಿಸುವಂತೆ ಒತ್ತಾಯಿಸಿ ಪಾಲಿಮ್ಯಾಕ್ಸ್ ಪ್ರೈ.ಲಿ. ಕಾರ್ಮಿಕರು, ನಗರದ ಕಾರ್ಮಿಕ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸಿಐಟಿಯು ನೇತೃತ್ವದಲ್ಲಿ ಮೈಸೂರು ರೇಸ್ ಕೋರ್ಸ್ ಬಳಿ ಇರುವ ಕಾರ್ಮಿಕ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಮಿಕರು, ಬೆಳಗೊಳ ಕೈಗಾರಿಕಾ ಪ್ರದೇಶದಲ್ಲಿರುವ ರಿಷಿ ಪಾಲಿಮಾಕ್ಸ್ ನಲ್ಲಿ 30 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ ಕಾನೂನು ಬದ್ಧ ವೇತನ ನೀಡದೆ ವಂಚಿಸಲಾಗುತ್ತಿದೆ ಎಂದು ದೂರಿದರು.
ಈ ಸಂಬಂಧ ಜನಪ್ರತಿನಿಧಿಗಳು, ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿಸಲಾಗಿದೆ. ಆದರೂ ಕಾರ್ಖಾನೆ ಮಾಲೀಕರು ಸ್ಪಂದಿಸಿಲ್ಲ. ಈ ವಿಚಾರವನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಅವರಿಂದಲೂ ಸ್ಪಂದನೆ ಸಿಗುತ್ತಿಲ್ಲ ಎಂದು ಕಾರ್ಮಿಕರು ಬೇಸರ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ಕಚೇರಿ ಎದುರು ಧರಣಿ ನಡೆಸುತ್ತಿದ್ದು, ನಮಗೆ ನ್ಯಾಯಯುತ ವೇತನ ಸಿಗದಿದ್ದರೆ ಮುಂದಿನ ದಿನಗಳಲ್ಲಿ ನಿರಂತರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಮುಖಂಡರಾದ ಜಯರಾಂ, ಶಿವು, ಮಹೇಶ್, ರವಿ ಇತರರಿದ್ದರು.