ಮೈಸೂರು: ಮಾಧ್ಯಮ ಕ್ಷೇತ್ರ ಮಾತ್ರವಲ್ಲದೆ ಮಹಿಳೆಗೆ ಯಾವುದೇ ಜವಾಬ್ದಾರಿ ನೀಡಿದರೂ ಸಮರ್ಥವಾಗಿ ನಿಭಾಯಿಸಲು ಬಲ್ಲವಳಾಗಿದ್ದಾಳೆ...!
2ನೇ ದಿನವಾದ ಭಾನುವಾರ ‘ಮೈಸೂರು ಸಾಹಿತ್ಯ ಸಂಭ್ರಮ’ ಸಮಾರಂಭದಲ್ಲಿ ‘ಬದಲಾಗುತ್ತಿರುವ ಮಾಧ್ಯಮದಲ್ಲಿ ಮಹಿಳಾ ದೃಷ್ಟಿಕೋನದ ಔಚಿತ್ಯ, ಅನಿವಾರ್ಯತೆ’ ಗೋಷ್ಠಿಯಲ್ಲಿ ವ್ಯಕ್ತವಾದ ಅಭಿಪ್ರಾಯ ಇದು.
ಚೇತನಾ ಬೆಳೆಗೆರೆ, ಎಚ್.ಎನ್.ಆರತಿ, ಶಾಂತಲಾ ಧರ್ಮರಾಜ್ ಅವರೊಂದಿಗೆ ಪ್ರೀತಿ ನಾಗರಾಜ್ ಸಂವಾದ ನಡೆಸಿದರು.
ಕುಟುಂಬವನ್ನು ನಿಭಾಯಿಸಿಕೊಂಡು ತನ್ನ ವೃತ್ತಿಯನ್ನೂ ಮಹಿಳೆ ನಿರ್ವಹಣೆ ಮಾಡುತ್ತಿದ್ದಾಳೆ. ಮೊದಲೆಲ್ಲ ಮಹಿಳೆಯರು ರಾತ್ರಿ 10 ಗಂಟೆ ನಂತರ ಕೆಲಸ ಮಾಡಲು ಹೋದರೆ ಹತ್ತಾರು ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತು.
ಆದರೀಗ ಕಾಲ ಬದಲಾಗಿದೆ. ರಾತ್ರಿ ವೇಳೆಯೂ ಮಹಿಳೆ ಕೆಲಸ ಮಾಡಲು ಸಿದ್ಧಳಿದ್ದಾಳೆ. ಆದರೆ, ಭದ್ರತೆ ನೀಡಬೇಕಷ್ಟೇ ಎಂದು ಚೇತನಾ ಬೆಳೆಗೆರೆ ಹೇಳಿದರು.
ಮಾಧ್ಯಮ ಕ್ಷೇತ್ರದಲ್ಲಿ ಮೊದಲು ಮಹಿಳೆಯರು ಡೆಸ್ಕ್‌ಗೆ ಮಾತ್ರವೇ ಸಿಮೀತವಾಗಿದ್ದರು. ಡಿಜಿಟಲ್ ಮಾಧ್ಯಮ ಬಂದ ಮೇಲೆ ಹೊರಗಡೆಯೂ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಮಹಿಳಾ ಸಂಪಾದಕರಿದ್ದರೆ ಅವರನ್ನು ಹೇಗಾದರೂ ಆ ಸ್ಥಾನದಿಂದ ಕೆಳಗಿಳಿಸುವ ಪ್ರಕ್ರಿಯೆಗಳು ನಡೆಯುತ್ತವೆ ಎಂದು ಎಚ್.ಎನ್.ಆರತಿ ಕಳವಳ ವ್ಯಕ್ತಪಡಿಸಿದರು.
ವಿಶೇಷತೆ ಕೌಶಲತೆ ಇದ್ದರೆ ಅವರು ಬೇರೆ ಹಂತಕ್ಕೂ ಹೊಗಲು ಅವಕಾಶವಿದೆ. ಮೊದಲು ಮಹಿಳೆಯರು ಕ್ರೈಮ್ ಬೀಟ್‌ಗೆ ಹೋದಾಗ ನೋಡುವ ರೀತಿಯೇ ಬೇರೆ. ಮಹಿಳೆಯರು ಆ ಸ್ಥಳಕ್ಕೆ ಬರಲು ಅನರ್ಹರು ಎನ್ನುವಂತೆ ಮಾಡಲಾಗಿತ್ತು.
ಇದೀಗ ಅವರಿಗೆ ನೀಡಿರುವ ಚೌಕಟ್ಟಿನಲ್ಲೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರಿಗೆ ಅವರಿಗೆ ತಮ್ಮದೇ ಕೌಟುಂಬಿಕ ಜವಾಬ್ದಾರಿ ಇದ್ದರೂ ಸಮರ್ಥವಾಗಿ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಶಾಂತಲಾ ಧರ್ಮರಾಜ್ ಹೇಳಿದರು.
ಮಹಿಳೆಯರಿಗೆ ಯಾವುದೇ ಜವಾಬ್ದಾರಿ ನೀಡಿದರೂ ಸರ್ಮಥವಾಗಿ ಕೆಲಸ ಮಾಡುತ್ತಾಳೆ. ಕೆಲಸ ಮಾಡುವ ಸ್ಥಳದಲ್ಲಿ ಎಷ್ಟು ಭದ್ರತೆ ನೀಡುತ್ತಿದ್ದಾರೆಂಬುದು ಮುಖ್ಯವಾಗಲಿದೆ ಎಂದು ತಿಳಿಸಿದರು.