ಮೈಸೂರಿನಲ್ಲಿ ಮಹಿಳೆ ಶಂಕಾಸ್ಪದ ಸಾವು

ಸಂಧ್ಯಾ
ಸಂಧ್ಯಾ
Published on
ಮೈಸೂರು: ಸರಸ್ವತಿಪುರಂನಲ್ಲಿ ಗುರುವಾರ ರಾತ್ರಿ ಗೃಹಿಣಿಯೊಬ್ಬರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕುಟುಂಬ ವರ್ಗ ದವರು ಕೊಲೆಯ ಶಂಕೆ ವ್ಯಕ್ತಪಡಿಸಿದ್ದಾರೆ.
ಸರಸ್ವತಿಪುರಂ ನಿವಾಸಿ ಸಂಧ್ಯಾ (46) ಮೃತ ದುರ್ದೈವಿ. ಪ್ರವಾಸಕ್ಕೆ ತೆರಳಲು ಅನುಮತಿ ನಿರಾಕರಿಸಿದ ಹಿನ್ನೆಲೆ ಬೇಸರಗೊಂಡು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಧ್ಯಾ ಪತಿ ರಂಗನಾಥ್ ಹೇಳಿಕೆ ನೀಡಿದ್ದಾರೆ. ಆದರೆ, ಸಂಧ್ಯಾ ಅವರ ಮಗಳು ಹಾಗೂ ಕುಟುಂಬ ವರ್ಗದವರು ಹತ್ಯೆ ನಡೆದಿದೆ ಎಂಬ ಆರೋಪ ಮಾಡಿದ್ದಾರೆ.
ಮನೆಯ ಕೊಠಡಿಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಸಂಧ್ಯಾ ಮೃತದೇಹ ಪತ್ತೆಯಾಗಿದೆ. ಬೆಂಗಳೂರು ಮೂಲದ ಸಂಧ್ಯಾ 25 ವರ್ಷಗಳ ಹಿಂದೆ ರಂಗನಾಥ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಪುತ್ರಿ ಸೃಷ್ಟಿ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮನೆಯಲ್ಲಿ ಗಂಡ ರಂಗನಾಥ್ ಹಾಗೂ ಮಗ ಕೌಶಿಕ್‌ನೊಂದಿಗೆ ಸಂಧ್ಯಾ ವಾಸವಿದ್ದರು.
‘ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಲು ಸಂಧ್ಯಾ ಅನುಮತಿ ಕೇಳಿದ್ದರು. ಆದರೆ, ನಾನು ಅನುಮತಿ ನೀಡದ ಹಿನ್ನೆಲೆಯಲ್ಲಿ ನಮ್ಮಿಬ್ಬರ ನಡುವೆ ವಾಗ್ವಾದ ನಡೆಯಿತು. ಇದರಿಂದ ಬೇಸರಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾನು ಆಕೆಯನ್ನು ಹತ್ಯೆ ಮಾಡಿಲ್ಲ. ತನಿಖೆಯಿಂದ ಎಲ್ಲ ಸತ್ಯಾಂಶ ಹೊರಗೆ ಬರಲಿದೆ’ ಎಂದು ರಂಗನಾಥ್ ಹೇಳಿಕೆ ನೀಡಿದ್ದಾರೆ.
‘ಮನೆಯಲ್ಲಿ ಈ ಹಿಂದೆಯೂ ಸಾಕಷ್ಟು ಬಾರಿ ಅಪ್ಪ-ಅಮ್ಮನ ನಡುವೆ ಜಗಳ ನಡೆದಿದ್ದು, ಅಮ್ಮ ಎಲ್ಲವನ್ನು ಸಹಿಸಿಕೊಂಡು ಇಷ್ಟು ವರ್ಷ ಜೀವನ ನಡೆಸಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿದ್ದರೆ ಎಂದೋ ಮಾಡಿಕೊಳ್ಳುತ್ತಿದ್ದರು. ಆದರೆ, ಪ್ರವಾಸಕ್ಕೆ ಕಳುಹಿಸಲಿಲ್ಲ ಎಂಬ ಸಣ್ಣ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ. ತಂದೆ ಹಾಗೂ ತಮ್ಮ ಹತ್ಯೆ ಮಾಡಿರುವ ಶಂಕೆ ಇದೆ’ ಎಂದು ಸಂಧ್ಯಾ ಪುತ್ರಿ ಸೃಷ್ಟಿ ಆರೋಪಿಸಿದ್ದಾರೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಸರಸ್ವತಿಪುರಂನ ಸಂಧ್ಯಾ ಅವರ ಸಾವಿನ ಕುರಿತು ದೂರು ದಾಖಲಿಸಿಕೊಂಡಿದ್ದೇವೆ. ಕುಟುಂಬ ವರ್ಗದವರು ನೀಡಿದ ದೂರಿನ ಆಧಾರದ ಮೇಲೆ ಶಂಕಾಸ್ಪದ ಸಾವು ಪ್ರಕರಣ ದಾಖಲಿಸಲಾಗಿದ್ದು, ತನಿಖೆಯ ನಂತರ ಸ್ಪಷ್ಟ ಮಾಹಿತಿ ಬರಲಿದೆ ಎಂದು ತಿಳಿಸಿದರು. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net