ಮೈಸೂರಿನಲ್ಲಿ ಜಾನಕಿ ನೆಲೆವೂರಿದ್ದು ಏಕೆ?

 ಎಸ್.ಜಾನಕಿ
ಎಸ್.ಜಾನಕಿ
Published on

ಪ್ರಮುಖ ಮುಖ್ಯಾಂಶಗಳು

  • ಅಭಿಮಾನಿಗಳಲ್ಲಿ ಚರ್ಚೆ
  • ಪುತ್ರ ಅಗಲಿಕೆಯ ನೋವಿನಲ್ಲಿದ್ದ ಗಾನ ಕೋಗಿಲೆಗೆ ಅಚ್ಚುಮೆಚ್ಚಾಗಿದ್ದ ಸಾಂಸ್ಕೃತಿಕ ನಗರಿ
ಮೈಸೂರು: ‘ದಕ್ಷಿಣ ಭಾರತದ ಹಾಡುಹಕ್ಕಿ’ ಎಂದೇ ಹೆಸರುವಾಸಿಯಾಗಿರುವ ಎಸ್.ಜಾನಕಿ ಅವರು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನೆಲೆವೂರಿದ್ದು ಏಕೆ...? 
ಈಗ ಸಾರ್ವಜನಿಕ ವಲಯದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಪ್ರಶ್ನೆ ಇದು. ಆದರೆ, ಇದಕ್ಕೆ ಸೂಕ್ತ ಮತ್ತು ಸಮರ್ಪಕ ಉತ್ತರವೇ ಯಾರಿಂದಲೂ ದೊರೆಯುತ್ತಿಲ್ಲ. ಹೀಗಾಗಿ, ವಿವಿಧ ಆಯಾಮದಲ್ಲಿ ಆಗುತ್ತಿರುವ ಚರ್ಚೆಗೂ ಕೊನೆಯೇ ಇಲ್ಲದಂತಾಗಿದೆ.
ಶನಿವಾರ ನಿಧನರಾದ ಜಾನಕಿ ಅವರನ್ನು ಭಾನುವಾರ ಸಂಜೆ ಮೈಸೂರು ತಾಲೂಕಿನ ಕಣಿಯನಹುಂಡಿದಲ್ಲಿರುವ ಅಭಿಮಾನಿ ನವೀನ್ ತೋಟದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಸೋಮವಾರ ಅವರ ಅಸ್ಥಿ ವಿಸರ್ಜನೆ ಮಾಡಲಾಗಿದೆ.
ಮೈಸೂರಿನಲ್ಲಿ ಜಾನಕಿ ಅವರು ಬಹಳ ವರ್ಷಗಳಿಂದ ಉಳಿದುಕೊಂಡಿದ್ದರು ಎಂಬುದು ಅವರು ಇಹಲೋಕ ತ್ಯಜಿಸಿದ ಬಳಿಕವೇ ಸಾರ್ವಜನಿಕರಿಗೆ ಗೊತ್ತಾಗಿದೆ. ಅಲ್ಲಿವರೆಗೆ ಬಹುತೇಕ ಈ ವಿಷಯವೇ ತಿಳಿದಿರಲಿಲ್ಲ. ಜತೆಗೆ, ಯಾವುದೇ ಸಾರ್ವಜನಿಕ ಸಭೆ- ಸಮಾರಂಭದಲ್ಲೂ ಕಾಣಿಸಿಕೊಂಡಿರಲಿಲ್ಲ. ಕೊನೆವರೆಗೂ ಜನರು, ಸಮಾಜದಿಂದ ದೂರವಾಗಿ ಉಳಿದು ಬಿಟ್ಟರು. ಅದು ಏಕೆ? ಎಂಬ ಪ್ರಶ್ನೆಯೂ ಮೂಡುತ್ತಿದೆ.
17 ಭಾಷೆಯಲ್ಲಿ 48 ಸಾವಿರ ಗೀತೆಗಳನ್ನು ಹಾಡಿರುವ ಜಾನಕಿಯಮ್ಮ ಏಕೆ ಮೈಸೂರಿಗೆ ಬಂದರು ಎಂಬ ಪ್ರಶ್ನೆ ಜನರಲ್ಲಿ ಗುಂಗಿಹುಳದಂತೆ ಕೊರೆಯುತ್ತಿದೆ.
ಚಿತ್ರರಂಗದಲ್ಲಿ ಉತ್ತುಂಗದಲ್ಲಿ ಇರುವಾಗಲೇ ಅವರು ಚೆನ್ನೈನಲ್ಲಿ ಬಂಗಲೆಯಂತಹ ದೊಡ್ಡ ಮನೆಯನ್ನು ಕಟ್ಟಿದ್ದರು. ಆಂಧ್ರಪ್ರದೇಶದವರಾದರೂ ಇಲ್ಲಿ ನೆಲೆ ನಿಂತಿದ್ದರು. ಬಳಿಕ ಅಲ್ಲಿಂದ ಆಂಧ್ರಪ್ರದೇಶದ ಹೈದರಾಬಾದ್‌ಗೆ ಸ್ಥಳಾಂತರಗೊಂಡರು. ಅಲ್ಲಿ ಸಹ ಮನೆ ಕಟ್ಟಿಕೊಂಡಿದ್ದರು. ಬಳಿಕ ಅದನ್ನು ಮತ್ತು ಉಳಿದ ಆಸ್ತಿಯನ್ನು ದಾನ ಮಾಡಿದ್ದರು. ಅವರ ಸಂಬಂಧಿಕರು ಈಗಲೂ ಹೈದರಾಬಾದ್‌ನಲ್ಲಿದ್ದಾರೆ. ಅವರ ಸಹೋದರಿಯರು ವಿಶಾಖಪಟ್ಟಣಂನಲ್ಲಿ ಇದ್ದಾರೆ.
ಆದರೆ, ಜಾನಕಿ ಅವರ ಏಕೈಕ ಪುತ್ರ ಮುರುಳಿಕೃಷ್ಣ ಮೈಸೂರಿನಲ್ಲಿದ್ದರು. ಇತ್ತೀಚಿನ ವರ್ಷದಲ್ಲಿ ಪುತ್ರ ನಿಧನ ಬಳಿಕ ಮಾನಸಿಕವಾಗಿ ಕುಗ್ಗಿಹೋಗಿದ್ದ ಅವರು, ಸಂಧ್ಯಾಕಾಲವನ್ನು ಸಾಂಸ್ಕೃತಿಕ ನಗರದಲ್ಲಿ ಕಳೆದರು. ಜತೆಗೆ, ಆಧ್ಯಾತ್ಮಿಕ ಕಡೆಗೂ ಒಲವು ಬೆಳೆಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ಹಚ್ಚಹಸಿರಾಗಿದೆ ಸಂಗೀತ ಸಂಜೆ

ಕಳೆದ 2017ರ ಅಕ್ಟೋಬರ್ 28ರಂದು ನಗರದ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ‘ಸಂಗೀತ ಸಂಜೆ’ ಜಾನಕಿ ಅವರ ಕೊನೇ ಕಾರ್ಯಕ್ರಮವಾಗಿತ್ತು. 
ಆ ಸಂದರ್ಭದಲ್ಲಿ ಭಾವುಕರಾಗಿ ಮಾತನಾಡಿದ್ದ ಅವರು, ಮೈಸೂರಿನೊಂದಿಗೆ ನನಗೆ ಭಾವನಾತ್ಮಕ ನಂಟಿದೆ. ಈ ಊರಿನ ಮೇಲೆ ವಿಶೇಷ ಪ್ರೀತಿ ಇದೆ. ಇಲ್ಲಿಯ ಸಾಹಿತಿಗಳು, ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡುವ ಅವಕಾಶ ದೊರೆತಿತ್ತು. 14 ವರ್ಷ ಬಾಲಕಿಯಾಗಿದ್ದಾಗ ಮೈಸೂರಿನಲ್ಲಿ ಹಾಡಿದ್ದೆ. ಅದು ನನ್ನ ಮೊದಲ ಸಾರ್ವಜನಿಕ ಕಾರ್ಯಕ್ರಮ. ಬಳಿಕ ಆರು ದಶಕಗಳ ಕಾಲ ಸಾವಿರಾರು ಹಾಡುಗಳನ್ನು ಹೇಳಿದ್ದೇನೆ. ಇದು ನನ್ನ ಕೊನೆಯ ಸಂಗೀತ ಕಾರ್ಯಕ್ರಮ’ ಎಂದು ಭಾರವಾದ ಮನಸ್ಸಿನಿಂದ ಹೇಳಿದ್ದರು. ಈ ಮಾತನ್ನು ಅವರ ಅಭಿಮಾನಿಗಳು ಈಗಲೂ ಸ್ಮರಿಸಿಕೊಳ್ಳುತ್ತಾರೆ.

ಗ್ಯಾಂಗ್ರೀನ್ ಆಗಿದ್ದು ಖಚಿತ

ಜಾನಕಿ ಅವರಿಗೆ ಗ್ಯಾಂಗ್ರೀನ್ ಆಗಿತ್ತು ಎಂಬುದು ಈಗ ಖಚಿತವಾಗಿದೆ. ಇತ್ತೀಚೆಗೆ ಮಂಗಳೂರಿಗೆ ಹೋಗಿದ್ದಾಗ ಅವರಿಗೆ ತೀವ್ರವಾಗಿ ಕಾಲು ನೋವು ಕಾಣಿಸಿಕೊಂಡಿತ್ತು. ಇದರ ನಡುವೆ ವ್ಯಕ್ತಿಯೊಬ್ಬರು ಕಾಲು ತುಳಿದಿದ್ದರು.
 ಇದು ನೋವು ಇನ್ನಷ್ಟು ಹೆಚ್ಚಿಸಿತ್ತು. ಶನಿವಾರ (ಜು.11) ಬೆಳಗ್ಗೆ 11.30ಕ್ಕೆ ಅಪೋಲೋ ಆಸ್ಪತ್ರೆಗೆ ಸೇರಿದಾಗ ಅವರ ಸ್ಥಿತಿ ಗಂಭೀರವಾಗಿತ್ತು. ಪರೀಕ್ಷೆಯಿಂದ ಅವರಿಗೆ ಗ್ಯಾಂಗ್ರೀನ್ ಇರುವುದು ಸಹ ಖಚಿತವಾಗಿತ್ತು. ನಿಯಂತ್ರಣ ತಪ್ಪಿದ ಮಧುಮೇಹ ಏಕಾಏಕಿ ಏರಿಕೆಯಾಗಿ, ಕಿಡ್ನಿ ವೈಫಲ್ಯದಿಂದ ಡಯಾಲಿಸಿಸ್ ಮಾಡಲು ವೈದ್ಯರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈ ಹೊತ್ತಿನಲ್ಲಿ ಹೃದಯಸ್ತಂಬನವಾಗಿ ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net