ಇಂಡೋ-ಚೀನಾ ಗಡಿಯಾಗಿ ಬದಲಾಗುತ್ತಿರುವುದು ಕಳವಳಕಾರಿ

ಮಹಾಜನ ಕಾಲೇಜಿನಲ್ಲಿ ಆಯೋಜಿಸಿದ್ದ ‘ಭಾರತ ಮತ್ತು ಟಿಬೆಟ್ ನಡುವಿನ ಆರ್ಥಿಕ ಮತ್ತು ಐತಿಹಾಸಿಕ ಸಂಬಂಧಗಳು ಕುರಿತು  ಉಪನ್ಯಾಸ, ಸಂವಾದ ಕಾರ್ಯಕ್ರಮದಲ್ಲಿ ನಿರಂಜನ್, ರವಿ ಜೋಶಿ, ಲಾಮೋ ಕ್ಯಾಬ್, ಡಾ.ಬಿ.ಆರ್.ಜಯಕುಮಾರಿ ಇನ್ನಿತರರಿದ್ದರು.
ಮಹಾಜನ ಕಾಲೇಜಿನಲ್ಲಿ ಆಯೋಜಿಸಿದ್ದ ‘ಭಾರತ ಮತ್ತು ಟಿಬೆಟ್ ನಡುವಿನ ಆರ್ಥಿಕ ಮತ್ತು ಐತಿಹಾಸಿಕ ಸಂಬಂಧಗಳು ಕುರಿತು ಉಪನ್ಯಾಸ, ಸಂವಾದ ಕಾರ್ಯಕ್ರಮದಲ್ಲಿ ನಿರಂಜನ್, ರವಿ ಜೋಶಿ, ಲಾಮೋ ಕ್ಯಾಬ್, ಡಾ.ಬಿ.ಆರ್.ಜಯಕುಮಾರಿ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇಂಡೋ-ಟಿಬೆಟಿಯನ್ ಫ್ರೆಂಡ್‌ಶಿಪ್ ಸೊಸೈಟಿಯ ಕಾರ್ಯಕ್ರಮ ಸಂಯೋಜಕ ನಿರಂಜನ್ ಹೇಳಿಕೆ
ಮೈಸೂರು: ಹಿಂದಿನ ‘ಇಂಡೋ-ಟಿಬೆಟಿಯನ್ ಗಡಿ’ ಇಂದು ಇಂಡೋ-ಚೀನಾ ಗಡಿಯಾಗಿ ಬದಲಾಗುತ್ತಿರುವುದು ಕಳವಳಕಾರಿ ಎಂದು ಇಂಡೋ-ಟಿಬೆಟಿಯನ್ ಫ್ರೆಂಡ್‌ಶಿಪ್ ಸೊಸೈಟಿಯ ಕಾರ್ಯಕ್ರಮ ಸಂಯೋಜಕ ನಿರಂಜನ್ ಹೇಳಿದರು.
 ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಂಸತ್, ಫೋರಂ ಫಾರ್ ಪೀಸ್ ಅಂಡರ್‌ಸ್ಟ್ಯಾಡಿಂಗ್, ಐಕ್ಯೂಎಸಿ ಹಾಗೂ ಇಂಡೋ-ಟಿಬೆಟಿಯನ್ ಫ್ರೆಂಡ್‌ಶಿಪ್ ಸೊಸೈಟಿ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ಭಾರತ ಮತ್ತು ಟಿಬೆಟ್ ನಡುವಿನ ಆರ್ಥಿಕ ಮತ್ತು ಐತಿಹಾಸಿಕ ಸಂಬಂಧಗಳು ಕುರಿತು ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಟಿಬೆಟಿಯನ್ನರಿಗೆ ತಮ್ಮ ಮಾತೃಭಾಷೆಯನ್ನು ಕಲಿಯುವ ಹಕ್ಕಿಲ್ಲದಂತಾಗಿದ್ದು, ಅಲ್ಲಿನ ಸಂಸ್ಕೃತಿ ಮತ್ತು ಭಾಷೆಯನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆತಂಕವ್ಯಕ್ತಪಡಿಸಿದರು.
ಮೌಂಟ್ ಕೈಲಾಸಕ್ಕೆ ತೆರಳುವ ಯಾತ್ರಾರ್ಥಿಗಳಿಗೆ ನಿರ್ಬಂಧ ಮತ್ತು ಹೆಚ್ಚಿನ ಶುಲ್ಕ ವಿಧಿಸಲಾಗುತ್ತಿದೆ. ದಲೈಲಾಮಾ ಅವರ ಕುರಿತು ಬಹಿರಂಗವಾಗಿ ಮಾತನಾಡುವ ಸ್ವಾತಂತ್ರ್ಯ ಅಲ್ಲಿನ ಜನರಿಗಿಲ್ಲ ಎಂದು ವಿಷಾದಿಸಿದರು. 
ಕೇಂದ್ರ ಸಚಿವ ಸಂಪುಟ ಸಚಿವಾಲಯದ ನಿವೃತ್ತ ಜಂಟಿ ಕಾರ್ಯದರ್ಶಿ ರವಿ ಜೋಶಿ ಮಾತನಾಡಿ, ಟಿಬೆಟ್ ಮತ್ತು ಭಾರತದ ನಡುವಿನ ಪುರಾತನ ಸಂಬಂಧ ಇದೆ. ಟಿಬೆಟ್ ಶತಮಾನಗಳ ಕಾಲ ಸ್ವಾತಂತ್ರೃ ರಾಷ್ಟ್ರವಾಗಿತ್ತು. ಆದರೆ, 1949ರ ಚೀನಾ ಕ್ರಾಂತಿಯ ನಂತರ ಟಿಬೆಟ್ ಅನ್ನು ಆಕ್ರಮಿಸಿಕೊಳ್ಳಲಾಯಿತು. ಇದರಿಂದಾಗಿ ಭಾರತದ ನೆರೆಹೊರೆಯವರು ಬದಲಾದರು ಎಂದು ವಿವರಿಸಿದರು.
1959ರಲ್ಲಿ ಟಿಬೆಟ್‌ನಲ್ಲಿ ಉಂಟಾದ ಅಶಾಂತಿಯ ಸಂದರ್ಭದಲ್ಲಿ ದಲೈಲಾಮಾ ಅವರು ಭಾರತಕ್ಕೆ ಬಂದಾಗ ಅವರಿಗೆ ಆಶ್ರಯ ನೀಡಿದ ಪ್ರಸಂಗ, ಧರ್ಮಶಾಲಾದಲ್ಲಿ ಟಿಬೆಟಿಯನ್ ನಾಯಕತ್ವದ ನೆಲೆಯ ಸ್ಥಾಪನೆ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ಬೈಲಕುಪ್ಪೆಯಲ್ಲಿ ನಿರಾಶ್ರಿತರಿಗೆ ಭೂಮಿ ನೀಡಿದ ಇತಿಹಾಸವನ್ನು ಅವರು ಮೆಲುಕು ಹಾಕಿದರು. 
ಮೆಖ್-ಮಹೋನ್ ರೇಖೆಯ ವಿವಾದ, ಭಾರತ-ಚೀನಾ ವ್ಯಾಪಾರ ಸಂಬಂಧಗಳು ಮತ್ತು ಗಡಿ ಸಂಘರ್ಷಗಳ ಕುರಿತು ಮಾಹಿತಿ ನೀಡಿದರು.
ಬೆಂಗಳೂರಿನ ಎಂವಿಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ನ್ಯಾಯವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಲಾಮೋ ಕ್ಯಾಬ್ ಮಾತನಾಡಿ, ನಾನು ಐದನೇ ವಯಸ್ಸಿನಲ್ಲಿ ಭಾರತಕ್ಕೆ ಬಂದೆ. ಕಳೆದ 25 ವರ್ಷಗಳಿಂದ ನನ್ನ ಪಾಲಕರಿಂದ ದೂರವಾಗಿದ್ದು, ನನ್ನ ಜೀವನವು ಸಾವಿರಾರು ಟಿಬೆಟಿಯನ್ ನಿರಾಶ್ರಿತರ ನೋವಿನ ಪ್ರತೀಕ. ಚೀನಾದ ಕಟ್ಟುನಿಟ್ಟಿನ ಕಣ್ಗಾವಲಿನಿಂದಾಗಿ ಟಿಬೆಟ್‌ನಲ್ಲಿರುವ ಕುಟುಂಬದವರೊಂದಿಗೆ ಸಂವಹನ ನಡೆಸುವುದು ಅಸಾಧ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತವನ್ನು ಫಾಕ್ಯುಲ್(ಪವಿತ್ರ ಭೂಮಿ) ಎಂದು ಬಣ್ಣಿಸಿದ ಅವರು, ಬುದ್ಧನ ಜನ್ಮಭೂಮಿಯಾದ ಭಾರತವು ಟಿಬೆಟ್‌ಗೆ ಜ್ಞಾನ ನೀಡಿದ ಗುರು. ನಾಗಾರ್ಜುನ ಮತ್ತು ಪದ್ಮಸಂಭವರಂತಹ ಭಾರತೀಯ ವಿದ್ವಾಂಸರು ಟಿಬೆಟಿಯನ್ ಬೌದ್ಧ ಧರ್ಮಕ್ಕೆ ನೀಡಿದ ಕೊಡುಗೆ ಸ್ಮರಣೀಯ ಎಂದರು.
ಪ್ರಾಂಶುಪಾಲೆ ಡಾ. ಬಿ.ಆರ್.ಜಯಕುಮಾರಿ ಮಾತನಾಡಿ, ಇತಿಹಾಸವನ್ನು ತಿಳಿಯದವರು ಇತಿಹಾಸ ಸೃಷ್ಟಿಸಲಾರರು. ದೇಶದ ರಕ್ಷಣೆಗಾಗಿ ವ್ಯವಸ್ಥಿತ ರಕ್ಷಣಾ ವ್ಯವಸ್ಥೆ ಅತ್ಯಗತ್ಯ. ಭ್ರಷ್ಟಾಚಾರದ ನಡುವೆಯೂ ದಲೈ ಲಾಮಾ ಅವರ ಅನುಯಾಯಿಗಳು ಶಿಸ್ತು ಮತ್ತು ಪ್ರಾಮಾಣಿಕತೆ ಕಾಪಾಡಿಕೊಂಡಿದ್ದಾರೆ ಎಂದರು. 
ಫೋರಂ ಫಾರ್ ಪೀಸ್ ಅಂಡರ್‌ಸ್ಟ್ಯಾಡಿಂಗ್ ಸಂಯೋಜಕ ಡಾ.ಎಚ್.ಶ್ರೀಧರ, ಐಟಿಎಫ್‌ಎಸ್ ಉಪಾಧ್ಯಕ್ಷ ಯದುನಂದನ್, ವಿದ್ಯಾರ್ಥಿ ಸಂಸತ್‌ನ ಸಂಚಾಲಕಿ ಡಾ.ಪಿ.ಜಿ. ಪುಷ್ಪರಾಣಿ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net