ಬಲಿಷ್ಠ ರಾಷ್ಟ್ರ ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರದ್ದು: ಬಿಎಐ ಅಧ್ಯಕ್ಷ ಎನ್.ಸುಬ್ರಹ್ಮಣ್ಯ
ಮೈಸೂರಿನಲ್ಲಿ ಆಯೋಜಿಸಿದ್ದ ಮೈ ಬಿಲ್ಡ್ ಸಮಾರೋಪದಲ್ಲಿ ಎನ್.ಸುಬ್ರಹ್ಮಣ್ಯ, ವಿಕ್ರಂ ಮುತ್ತಣ್ಣ, ವಿ.ಶ್ರೀನಾಥ್, ಸಿ.ಡಿ.ಕೃಷ್ಣ, ಆರ್.ರಮೇಶ್‌ರಾವ್, ಎನ್.ಲೋಕೇಶ್‌ಗೌಡ, ಸಮಿತಿ ಸದಸ್ಯರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬಲಿಷ್ಠ ರಾಷ್ಟ್ರವಾಗಿ ನಿರ್ಮಿಸುವ ಜವಾಬ್ದಾರಿ ನಮ್ಮದು
ವಿಶ್ವದ ಇತರ ರಾಷ್ಟ್ರಗಳು ನಮ್ಮತ್ತ ತಿರುಗಿ ನೋಡುವಂತೆ ಮಾಡಬೇಕು
ಮೈಸೂರು: ಭಾರತವನ್ನು 2047ರ ವೇಳೆಗೆ ಮತ್ತಷ್ಟು ಬಲಿಷ್ಠ ರಾಷ್ಟ್ರವಾಗಿ ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಕರ್ನಾಟಕ ಘಟಕದ ಅಧ್ಯಕ್ಷ ಎನ್.ಸುಬ್ರಹ್ಮಣ್ಯ ಹೇಳಿದರು.
ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಮೈಸೂರು ಶಾಖೆಯಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಾಲ್ಕುದಿನಗಳ ಕಾಲ ಆಯೋಜಿಸಿದ್ದ ‘ಮೈಬಿಲ್ಡ್’ ವಸ್ತು ಪ್ರದರ್ಶನ ಸಮಾರೋಪದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ‘ವಿಕಸಿತ ಭಾರತ’ಘೋಷಣೆ ಅಡಿ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವ ಗುರಿ ಹೊಂದಿದೆ. ಹಾಗಾಗಿ ಇದಕ್ಕೆ ಕಟ್ಟಡ ನಿರ್ಮಾಣ ಕ್ಷೇತ್ರವೂ ಕೈ ಜೋಡಿಸಬೇಕಾಗಿದ್ದು, ವಿಶ್ವದ ಇತರ ರಾಷ್ಟ್ರಗಳು ನಮ್ಮತ್ತ ತಿರುಗಿ ನೋಡುವಂತೆ ಮಾಡಬೇಕು. ಅದಕ್ಕಾಗಿ ಬಲಿಷ್ಠ ಭಾರತ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು.
ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ಮೈಬಿಲ್ಡ್ ಇಂದು ಸುಸಜ್ಜಿತವಾಗಿ ಆಯೋಜನೆಗೊಂಡು ನಿರ್ಮಾಣ ಕ್ಷೇತ್ರದ ಎಲ್ಲರಿಗೂ ಉತ್ತಮ ವೇದಿಕೆಯಾಗಿದೆ. ಇತ್ತೀಚಿನ ತಂತ್ರಜ್ಞಾನ ಹಾಗೂ ನಿರ್ಮಾಣ ಸಾಮಗ್ರಿಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮೈ ಬಿಲ್ಡ್ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಕರ್ತ ವಿಕ್ರಂ ಮುತ್ತಣ್ಣ ಮಾತನಾಡಿ, ಮೈಬಿಲ್ಡ್ ವಸ್ತು ಪ್ರದರ್ಶನ ನಿರ್ಮಾಣ ಕ್ಷೇತ್ರದ ಎಲ್ಲ ಸಾಮಗ್ರಿಗಳ ಬೃಹತ್ ಪ್ರದರ್ಶನವಾಗಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. 25 ವರ್ಷಗಳ ಕಾಲ 25 ಆವೃತ್ತಿಯ ಪ್ರದರ್ಶನವನ್ನು ಯಶಸ್ವಿಯಾಗಿ ಆಯೋಜಿಸಿರುವುದಕ್ಕೆ ಬಿಎಐ ಮೈಸೂರು ಘಟಕಕ್ಕೆ ಅಭಿನಂದಿಸುತ್ತೇನೆ ಎಂದರು.
ಬಿಎಐ ಮೈಸೂರು ಘಟಕ ಅಧ್ಯಕ್ಷ ವಿ.ಶ್ರೀನಾಥ್, ಕಾರ್ಯದರ್ಶಿ ಸಿ.ಡಿ.ಕೃಷ್ಣ, ಮೈ ಬಿಲ್ಡ್ ಸಮಿತಿ ಅಧ್ಯಕ್ಷ ಆರ್.ರಮೇಶ್‌ರಾವ್, ಕಾರ್ಯದರ್ಶಿ ಎನ್.ಲೋಕೇಶ್‌ಗೌಡ ಇತರರು ಇದ್ದರು.