ನುಗು ಜಲಾಶಯದ ನೀರಿನಮಟ್ಟ ಏರಿಕೆ

ನುಗು ಜಲಾಶಯ
ನುಗು ಜಲಾಶಯ
Published on

ಸರಗೂರು:

ಕೇರಳ ಕರ್ನಾಟಕ ಗಡಿಭಾಗದ ಮೂಲೆಹೊಳೆ, ಮುತ್ತಿಗೆಹುಂಡಿ ಅರಣ್ಯ ಪ್ರದೇಶದಲ್ಲಿ ಸುರಿದ ಭಾರಿ ಮಳೆ ಪರಿಣಾಮ ಸರಗೂರು ತಾಲೂಕಿನ ನುಗು ಜಲಾಶಯದ ನೀರಿನಮಟ್ಟದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಆಗಸ್ಟ್ ತಿಂಗಳ ಆರಂಭದಲ್ಲೇ ಜಲಾಶಯದ ನೀರಿನಮಟ್ಟ 98 ಅಡಿಗೆ ತಲುಪಿದ್ದು, ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.

110 ಅಡಿ ಗರಿಷ್ಠ ಸಾಮರ್ಥ್ಯ ಹೊಂದಿರುವ ನುಗು ಜಲಾಶಯದಲ್ಲಿ ಸುಮಾರು 5.44 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದೆ. ಈ ಜಲಾಶಯದಿಂದ ಸುಮಾರು 18,110 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯುತ್ತದೆ. ಇದರಲ್ಲಿ ಸರಗೂರು ತಾಲೂಕಿನ ಸುಮಾರು 1,500 ಎಕರೆ ಪ್ರದೇಶಕ್ಕೆ ನೀರು ಪೂರೈಕೆಯಾಗಲಿದ್ದು, ಉಳಿದ ಭಾಗ ನಂಜನಗೂಡು ತಾಲೂಕಿನ ರೈತರಿಗೆ ಪ್ರಯೋಜನವಾಗಲಿದೆ.
ಜಲಾಶಯದ ಮೇಲ್ದಂಡೆ ನಾಲೆಯು ಸುಮಾರು 87 ಕಿ.ಮೀ.ಉದ್ದವಿದ್ದು, ನಂಜನಗೂಡು ತಾಲೂಕಿನ ನರಸಾಂಬುದಿ ಕೆರೆವರೆಗೆ ವಿಸ್ತರಿಸಿದೆ. ನಾಲೆಯ ಮೂಲಕ ಸುಮಾರು 660 ಕ್ಯುಸೆಕ್ ನೀರುಹರಿಸುವ ಸಾಮರ್ಥ್ಯವಿದೆ.
ಕಳೆದ ತಿಂಗಳು ಜಲಾಶಯದ ನೀರಿನ ಮಟ್ಟ 90.50 ಅಡಿ ಇದ್ದರೆ, ಸೋಮವಾರದ ವೇಳೆಗೆ ಅದು 98 ಅಡಿಗೆ ಏರಿಕೆಯಾಗಿದೆ. ಸದ್ಯ ಜಲಾಶಯಕ್ಕೆ ಸುಮಾರು 9,200 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.
ಈ ಬಾರಿ ಪೂರ್ವ ಮುಂಗಾರು ಹಾಗೂ ಮುಂಗಾರು ಆರಂಭದಲ್ಲಿ ಮಳೆ ಕೊರತೆಯಾಗಿದ್ದರಿಂದ ಜೂನ್ ಮತ್ತು ಜುಲೈ ತಿಂಗಳಲ್ಲಿ ಜಲಾಶಯದ ನೀರಿನ ಪ್ರಮಾಣ ಕುಸಿದು ರೈತರಲ್ಲಿ ಆತಂಕ ಉಂಟಾಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಕೇರಳ ಗಡಿಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯದ ಒಳಹರಿವು ಹೆಚ್ಚಿದ್ದು, ನೀರಿನ ಮಟ್ಟವೂ ಏರಿಕೆಯಾಗುತ್ತಿದೆ.
2019ರಲ್ಲಿ ಸುಮಾರು ಹತ್ತು ವರ್ಷಗಳ ಬಳಿಕ ಜುಲೈ ಕೊನೆಯ ವಾರದಲ್ಲೇ ನುಗು ಜಲಾಶಯ ಸಂಪೂರ್ಣ ಭರ್ತಿಯಾಗಿತ್ತು. 2020ರಲ್ಲಿ ಜುಲೈ ಅಂತ್ಯದ ವೇಳೆಯಲ್ಲಿಯೂ ಜಲಾಶಯ ತುಂಬಿರಲಿಲ್ಲ. ನಂತರ 2021ರಿಂದ 2025ರವರೆಗೆ ಉತ್ತಮ ಮಳೆಯ ಪರಿಣಾಮ ಜಲಾಶಯ ಪ್ರತಿ ವರ್ಷ ಭರ್ತಿಯಾಗಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದನ್ನು ರೈತರು ನೆನಪಿಸಿಕೊಳ್ಳುತ್ತಿದ್ದಾರೆ.
ಪ್ರಸ್ತುತ ಈ ಭಾಗದ ಅನೇಕ ಕೆರೆ-ಕಟ್ಟೆಗಳಲ್ಲಿ ನೀರಿನ ಕೊರತೆ ಎದುರಾಗಿದೆ. ಜಲಾಶಯದಿಂದ ಸ್ವಲ್ಪ ಪ್ರಮಾಣದ ನೀರನ್ನು ಹರಿಸಿ ಕೆರೆ-ಕಟ್ಟೆಗಳನ್ನು ತುಂಬಿಸಿದರೆ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ರೈತರು ಮನವಿ ಮಾಡಿದ್ದಾರೆ.
ಕೇರಳ ಗಡಿಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನುಗು ಜಲಾಶಯಕ್ಕೆ ಉತ್ತಮ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಸದ್ಯ ಜಲಾಶಯದಲ್ಲಿ ನೀರಿನ ಮಟ್ಟ 98 ಅಡಿಗೆ ತಲುಪಿದ್ದು, ಒಳಹರಿವು 9,200 ಕ್ಯೂಸೆಕ್ ದಾಖಲಾಗಿದೆ. ನೀರಿನ ಹರಿವಿನ ಪ್ರಮಾಣವನ್ನು ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಜಲಾಶಯದ ಮಟ್ಟ ಮತ್ತಷ್ಟು ಏರಿಕೆಯಾದರೆ ಸರ್ಕಾರದ ಮಾರ್ಗಸೂಚಿಯಂತೆ ನಾಲೆಗಳಿಗೆ ನೀರು ಹರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಸದ್ಯ ಜಲಾಶಯದಿಂದ ನಾಲೆಗಳಿಗೆ ಅಥವಾ ಹೊಳೆಗೆ ಯಾವುದೇ ನೀರನ್ನು ಬಿಡುಗಡೆ ಮಾಡಿಲ್ಲ.
ಈ ಬಾರಿ ಆರಂಭದಲ್ಲಿ ಮಳೆ ಕೊರತೆಯಿಂದ ರೈತರಲ್ಲಿ ಆತಂಕ ಇತ್ತು. ಆದರೆ ಕಳೆದ ಕೆಲವು ದಿನಗಳಿಂದ ಕೇರಳದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ನಿರಂತರ ಒಳಹರಿವು ಬರುತ್ತಿದೆ. ಇದೇ ರೀತಿ ಮಳೆ ಮುಂದುವರಿದರೆ ಜಲಾಶಯದ ನೀರಿನ ಮಟ್ಟ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ನುಗು ಜಲಾಶಯದ ಎಂಜಿನಿಯರ್ ದೀಪಕ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net