ಜಲಾಶಯಗಳ ನೀರು ಕುಡಿಯಲು ಮಾತ್ರ: ಬೆಳೆಗಿಲ್ಲ

ಕೆಆರ್ ಎಸ್
ಕೆಆರ್ ಎಸ್
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಮಾಹಿತಿ
  • ಮಳೆ ಆಶ್ರಿತ ಬೆಳೆ ಬೆಳೆಯಲು ರೈತರಿಗೆ ಸೂಚನೆ
ಮೈಸೂರು:  ಜಲಾಶಯಗಳಲ್ಲಿರುವ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಕಾಯ್ದಿರಿಸಲಾಗಿದ್ದು, ರೈತರಿಗೆ ಮಳೆ ಆಶ್ರಿತ ಬೆಳೆ ಬೆಳೆಯಲು ಸೂಚಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಮಟ್ಟ ಕ್ಷೀಣಿಸುತ್ತಿದೆ. ಇದರಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗುತ್ತಿದೆ. 
ಈ ಹಿನ್ನೆಲೆಯಲ್ಲಿ ಜಲನೀತಿ ಅನ್ವಯ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕಾಗಿದೆ. ಪ್ರಸ್ತುತ ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ನೀರಿಗೆ ತೊಂದರೆ ಉಂಟಾಗದಂತೆ ಕಾಯ್ದಿರಿಸಿಕೊಂಡು ಬಳಸಬೇಕಾಗುತ್ತದೆ ಎಂದು ಜಲಾಶಯ ಯೋಜನೆಯ ಕುಡಿಯುವ ನೀರಿನ ಸಮಿತಿ ಅಧ್ಯಕ್ಷ, ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಎಲ್‌ನಿನೊ ಪರಿಣಾಮದಿಂದ ಮಳೆ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.  ಜಲಾಶಯ ನಂಬಿಕೊಂಡು ಯಾವ ರೈತರೂ ಬೆಳೆ ಹಾಕಬೇಡಿ ಎಂದು ಮುಖ್ಯಮಂತ್ರಿ ಅವರೂ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಮೈಸೂರು ವಿಭಾಗದ ಕುಡಿಯುವ ನೀರಿನ ಯೋಜನೆಯ ಸಮಿತಿಯಡಿಯಲ್ಲಿ ಬರುವ ಜಲಾಶಯಗಳಾದ ಕೃಷ್ಣರಾಜಸಾಗರ, ಕಬಿನಿ, ಹಾರಂಗಿ, ಹೇಮಾವತಿ, ಭದ್ರಾ, ನುಗು, ತಾರಕ, ಸುವರ್ಣಾವತಿ, ಚಿಕ್ಲಿಹೊಳೆ, ಗುಂಡಾಲ್, ಉಡುತೊರೆಹಳ್ಳ, ವಾಟೇಹೊಳೆ ಮತ್ತು ಯಗಚಿ ಜಲಾಶಯಗಳಲ್ಲಿ ಪ್ರಸ್ತುತ ಲಭ್ಯವಿರುವ ನೀರನ್ನು ಕುಡಿಯಲು ಮಾತ್ರ ಬಳಸಲಾಗುತ್ತದೆ. ಪರಿಸ್ಥಿತಿಯ ಗಂಭೀರತೆ ಅರಿತು ಕೃಷಿ ಇಲಾಖೆ  ಅಧಿಕಾರಿಗಳು ನೀಡುವ ಸಲಹೆಯಂತೆ ಮಳೆ ಆಶ್ರಿತ ಬೆಳೆಗಳನ್ನು ಬೆಳೆಯಬೇಕು ಎಂದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net