: ಕಬಿನಿ ಜಲಾಶಯ ಭರ್ತಿಯ ಹಂತ ತಲುಪಿರುವ ಹಿನ್ನೆಲೆಯಲ್ಲಿ, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಹಾಗೂ ಕೆರೆ- ಕಟ್ಟೆಗಳನ್ನು ತುಂಬಿಸುವ ಉದ್ದೇಶದಿಂದ ಮಂಗಳವಾರದಿಂದ ಕಾಲುವೆಗಳ ಮೂಲಕ 2 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.
ತಮಿಳುನಾಡಿಗೆ ನೀರು ಹರಿಸುವ ಬದಲು ರಾಜ್ಯದ ರೈತರ ಕೃಷಿಗೆ ನೀರು ಒದಗಿಸಬೇಕು ಎಂದು ರೈತರು ಮಾಡಿದ್ದ ಒತ್ತಾಯದ ನಡುವೆಯೇ ಈ ಕ್ರಮ ಮಹತ್ವ ಪಡೆದಿದೆ. ವಯನಾಡು ಹಾಗೂ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕಬಿನಿ ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಹೆಚ್ಚಿದ್ದು, ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಒಳಹರಿವಿಗೆ ಅನುಗುಣವಾಗಿ ನೀರನ್ನು ಕಪಿಲಾ ನದಿಗೆ ಬಿಡುಗಡೆ ಮಾಡಲಾಗುತ್ತಿದೆ.
ಸಮುದ್ರ ಮಟ್ಟದಿಂದ 2284 ಅಡಿ ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ 2282.43 ಅಡಿ ನೀರಿನ ಮಟ್ಟ ದಾಖಲಾ ಗಿದೆ. ಕಳೆದ ವರ್ಷದ ಇದೇ ದಿನ ಇದು 2282.91 ಅಡಿ ಇತ್ತು. ಒಟ್ಟು 19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಈಗ 18.50 ಟಿಎಂಸಿ ನೀರು ಸಂಗ್ರಹವಾಗಿದ್ದು, ಕಳೆದ ವರ್ಷ ಇದೇ ದಿನ 18.81 ಟಿಎಂಸಿ ನೀರು ಇತ್ತು.
ಜಲಾಶಯಕ್ಕೆ ಪ್ರಸ್ತುತ 23,368 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಕಳೆದ ವರ್ಷದ ಇದೇ ದಿನ 9,956 ಕ್ಯೂಸೆಕ್ ಒಳಹರಿವು ದಾಖಲಾಗಿತ್ತು. ಇದಕ್ಕೆ ಅನುಗುಣವಾಗಿ 25,000 ಕ್ಯೂಸೆಕ್ ನೀರನ್ನು ಕಪಿಲಾ ನದಿಗೆ ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಕೇವಲ 5,000 ಕ್ಯೂಸೆಕ್ ನೀರು ಮಾತ್ರ ಬಿಡುಗಡೆ ಮಾಡಲಾಗಿತ್ತು. ಜಲಾಶಯ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ 40 ಮಿ.ಮೀ. ಮಳೆಯಾಗಿದೆ.
ಪ್ರವಾಹ ಭೀತಿ: ಕಪಿಲಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಆದ್ದರಿಂದ ಸಾರ್ವಜನಿಕರು ನದಿಗೆ ಇಳಿಯದಂತೆ ಹಾಗೂ ನದಿ ತೀರದಲ್ಲಿ ಅನಗತ್ಯವಾಗಿ ಓಡಾಡದಂತೆ ನೀರಾವರಿ ಇಲಾಖೆ ಎಚ್ಚರಿಕೆ ನೀಡಿದೆ.