: ರೈತರ ನಿರಂತರ ಒತ್ತಾಯ ಹಾಗೂ ಪ್ರತಿಭಟನೆಯ ಬಳಿಕ ಕೊನೆಗೂ ಕಬಿನಿ ಜಲಾಶಯದಿಂದ ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ ನೀರು ಹರಿಸಲು ಆರಂಭಿಸಲಾಗಿದೆ. ಹಲವು ದಿನಗಳಿಂದ ನಾಲೆಗಳಿಗೆ ನೀರು ಬಿಡುವಂತೆ ಆಗ್ರಹಿಸುತ್ತಿದ್ದ ರೈತರಿಗೆ ಇದೀಗ ಕೊಂಚ ನೆಮ್ಮದಿ ಸಿಕ್ಕಿದೆ.
ಕಬಿನಿ ಜಲಾಶಯದ ಗರಿಷ್ಠ ಮಟ್ಟ 2,284 ಅಡಿಯಾಗಿದ್ದು, ಪ್ರಸ್ತುತ ನೀರಿನ ಮಟ್ಟ 2,278.92 ಅಡಿಯಷ್ಟಿದೆ. ಜಲಾಶಯದಲ್ಲಿ 16.43 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 19.30 ಟಿಎಂಸಿ ನೀರು ಇತ್ತು.
ಜಲಾಶಯಕ್ಕೆ 6,457 ಕ್ಯೂಸೆಕ್ ಒಳಹರಿವು ಇದ್ದು, ನದಿಗೆ 11,940 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಇದರ ಜತೆಗೆ ನಾಲೆಗಳಿಗೆ ಒಟ್ಟು 1,660 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಎಡದಂಡೆ ನಾಲೆಗೆ 60 ಕ್ಯೂಸೆಕ್ ಹಾಗೂ ಬಲದಂಡೆ ನಾಲೆಗೆ 1,600 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಜಲಾಶಯದಿಂದ ಒಟ್ಟು 13,600 ಕ್ಯೂಸೆಕ್ ಹೊರಹರಿವು ಇದೆ.
ನಾಲೆಗಳಿಗೆ ನೀರು ಹರಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ರೈತರು, ನೀರು ಬಿಡುಗಡೆ ಮಾಡುವಂತೆ ಹಲವು ದಿನಗಳಿಂದ ಅಧಿಕಾರಿಗಳು ಹಾಗೂ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಇದೀಗ ನಾಲೆಗಳಿಗೆ ನೀರು ಹರಿಸಲು ಕ್ರಮ ಕೈಗೊಂಡಿರುವುದು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂಬ ನಿರೀಕ್ಷೆ ಮೂಡಿಸಿದೆ.