ಜನರ ಸಮಸ್ಯೆ ಇತ್ಯರ್ಥಕ್ಕೆ ವಾರ್ಡ್ ಸಮಿತಿ ರಚನೆ

 ಮೈಸೂರು ಗ್ರಾಹಕರ ಪರಿಷತ್ ಸಭೆಯಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಪ್ರಾದೇಶಿಕ ಆಯುಕ್ತರೂ ಆದ ಮಹಾನಗರ ಪಾಲಿಕೆ ಆಡಳಿತ ಅಧಿಕಾರಿ ನಿತೇಶ್ ಪಾಟೀಲ್ ಮಾತನಾಡಿದರು.ಭಾಮಿ ಶೆಣೈ, ಮಂಜು, ಮಹೇಶ್ ಜಿಗಣಿ, ಎಸ್.ಕೆ.ದಿನೇಶ್, ಡಿ.ವಿ.ದಯಾನಂದ್ ಸಾಗರ್, ರವಿಚಂದ್ರನ್ ಬೇಕಲ್ ಇತರರಿದ್ದರು.
ಮೈಸೂರು ಗ್ರಾಹಕರ ಪರಿಷತ್ ಸಭೆಯಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಪ್ರಾದೇಶಿಕ ಆಯುಕ್ತರೂ ಆದ ಮಹಾನಗರ ಪಾಲಿಕೆ ಆಡಳಿತ ಅಧಿಕಾರಿ ನಿತೇಶ್ ಪಾಟೀಲ್ ಮಾತನಾಡಿದರು.ಭಾಮಿ ಶೆಣೈ, ಮಂಜು, ಮಹೇಶ್ ಜಿಗಣಿ, ಎಸ್.ಕೆ.ದಿನೇಶ್, ಡಿ.ವಿ.ದಯಾನಂದ್ ಸಾಗರ್, ರವಿಚಂದ್ರನ್ ಬೇಕಲ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಾಲಿಕೆ ಆಡಳಿತ ಅಧಿಕಾರಿ ನಿತೇಶ್ ಪಾಟೀಲ್ ಮಾಹಿತಿ
  • ಮೈಸೂರು ಗ್ರಾಹಕರ ಪರಿಷತ್ ಸಭೆ
 ಮೈಸೂರು:  ಮೈಸೂರು ಮಹಾನಗರದಲ್ಲಿ ಪ್ರಾಯೋಗಿಕವಾಗಿ 5 ವಾರ್ಡ್ ಸಮಿತಿ ರಚಿಸಲಾಗುವುದು ಎಂದು ಪ್ರಾದೇಶಿಕ ಆಯುಕ್ತರೂ ಆದ ಮಹಾನಗರ ಪಾಲಿಕೆ ಆಡಳಿತಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದರು.
ಮೈಸೂರು ಗ್ರಾಹಕರ ಪರಿಷತ್ ಸಭೆಯಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಬಡಾವಣೆಗಳ ಅಭಿವೃದ್ಧಿ ಮತ್ತು ನಾಗರಿಕರ ಸಮಸ್ಯೆಗಳ ಇತ್ಯರ್ಥಕ್ಕೆ ಸೇತುವೆಯಾಗಿ ಕೆಲಸ ಮಾಡುವ ವಾರ್ಡ್ ಸಮಿತಿ ರಚಿಸಲು ಮನವಿ ಮಾಡಲಾಯಿತು. ಇದಕ್ಕೆ ನಿತೇಶ್ ಪಾಟೀಲ್ ಅವರು ಸ್ಪಂದಿಸಿದರು.
ವಲಯ ಕಚೇರಿ 4ರ ವ್ಯಾಪ್ತಿಯಲ್ಲಿ ಈಗಾಗಲೇ ವಾರ್ಡ್ ಸಮಿತಿ ಹೆಸರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿವೆ. ಪ್ರಥಮ ಹಂತದಲ್ಲಿ ಐದು ವಾರ್ಡ್ ಸಮಿತಿಗಳನ್ನು ಮೈಗ್ರಾಪ ಸಹಯೋಗದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗುವುದು ಎಂದರು.
ವಾರ್ಡ್ ಸಮಿತಿಯಲ್ಲಿ ಸೇರುವವರು ರಾಜಕೀಯ ಹಿನ್ನೆಲೆ ಇರಬಾರದು. ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇಂಗಿತ ಇರಬಾರದು. ಮಹಿಳೆಯರು, ಪರಿಶಿಷ್ಟ ಜಾತಿ, ಪಂಗಡಗಳ ಸದಸ್ಯರಿರಬೇಕು. ವಾರ್ಡ್ ಸಮಿತಿ ರಚನೆ ಸಂಬಂಧ ಪತ್ರಿಕಾ ಪ್ರಕಟಣೆ ಕೊಡಲಾಗುವುದು. ಈ ಸಂಬಂಧ ಅಂತಿಮ ಸಭೆ ನಡೆಸಿ ತೀರ್ಮಾನ ಮಾಡುವುದು ಎಂದು ತಿಳಿಸಿದರು 
ಮೈಗ್ರಾಪ ಸಂಸ್ಥಾಪಕ ಭಾಮಿ ಶೆಣೈ ಮಾತನಾಡಿ, ಗ್ರೇಟರ್ ಮೈಸೂರು ರಚನೆಗೂ ಮುನ್ನ ಮೈಸೂರು ಅಜೆಂಡಾ ಜಾರಿ ಕುರಿತು ಕಾರ್ಯಪಡೆ ರಚಿಸಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನಿತೇಶ್ ಪಾಟೀಲ್, ಗ್ರೇಟರ್ ಮೈಸೂರು ಅಂತಿಮ ಅಧಿಸೂಚನೆ ಆಗುವ ತನಕ ಯಾವುದೇ ಸಮಿತಿ ರಚಿಸಲು ಸಾಧ್ಯವಿಲ್ಲ. ಆದರೆ, ನೂತನ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮೈಗ್ರಾಪ ಸದಸ್ಯರು ಕಾರ್ಯಪಡೆ ರಚನೆಗೆ ಮನವಿ ಮಾಡಬಹುದು ಎಂದು ಸಲಹೆ ನೀಡಿದರು.
ಸಿಎ ನಿವೇಶನಗಳ ದುರ್ಬಳಕೆ ತಡೆಗೆ ಸಂಬಂಧಪಟ್ಟಂತೆ ಪರಿಶೀಲನೆ ಮಾಡುವ ಭರವಸೆ ನೀಡಿದರು.   
ಸಾರ್ವಜನಿಕರು ಉದ್ಯಾನಗಳ ನಿರ್ವಹಣೆಗೆ ದತ್ತು ಪಡೆಯಲು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಮೈಸೂರು ನಗರದಲ್ಲಿ 35 ಪಾರ್ಕ್‌ಗಳನ್ನು ನಿರ್ವಹಣೆಗೆ ಸ್ವಯಂ ಸೇವಕರ ಅಗತ್ಯವಿದೆ. ಸಾರ್ವಜನಿಕರು ಸಹಕರಿಸಿದರೆ ಗ್ರಂಥಾಲಯಗಳ ಸಂಖ್ಯೆ ಹೆಚ್ಚಿಸಲಾಗುವುದು. ಮೂಲಸೌಕರ್ಯದೊಂದಿಗೆ ಹೆಚ್ಚು ಪುಸ್ತಕಗಳನ್ನು ನೀಡಲಾಗುವುದು ಎಂದು ಪಾಲಿಕೆ ಆಡಳಿತಾಧಿಕಾರಿ ತಿಳಿಸಿದರು.
ಪಾಲಿಕೆ ಅಧಿಕ್ಷಕ ಇಂಜಿನಿಯರ್ ಮಂಜು, ವಲಯ ಕಚೇರಿ 4ರ ಆಯುಕ್ತ ಮಹೇಶ್ ಜಿಗಣಿ, ಮೈಗ್ರಾಪ ಕಾರ್ಯಾಧ್ಯಕ್ಷ ಎಸ್.ಕೆ.ದಿನೇಶ್, ಸಂಚಾಲಕ ಡಿ.ವಿ.ದಯಾನಂದ್ ಸಾಗರ್, ರವಿಚಂದ್ರನ್ ಬೇಕಲ್, ಮಾಳವಿಕ ಗುಬ್ಬಿವಾಣಿ, ಶಂಕರ್, ಅಶೋಕ್, ರಾಕೇಶ್, ಶ್ವೇತಾ ಮಡಪ್ಪಾಡಿ ಮುಂತಾದವರಿದ್ದರು.

ದೊಡ್ಡ ಪೈಪ್ ಹಾಕಲು ಸಾವಿರ ಕೋಟಿ ರೂ. ಬೇಕು

ನಗರದಲ್ಲಿ 30ರಿಂದ 40 ವರ್ಷಗಳ ಹಿಂದೆ ಒಳಚರಂಡಿಗೆ ಅಳವಡಿಸಿದ್ದ ಪೈಪ್‌ಗಳು ಚಿಕ್ಕದಾಗಿವೆ. ಅವುಗಳನ್ನು ಬದಲಿಸಿ ದೊಡ್ಡ ಪೈಪ್ ಹಾಕಲು ಸಾವಿರ ಕೋಟಿ ರೂ. ಬೇಕಾಗುತ್ತದೆ ಎಂದು ಪಾಲಿಕೆ ಆಡಳಿತಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.
ಮೈಸೂರು ನಗರದ ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ತುರ್ತಾಗಿ ಪರಿಹಾರ ಕಂಡುಹಿಡಿಯದಿದ್ದರೆ ನಾಗರಿಕರು ತೊಂದರೆ ಅನುಭವಿಸುತ್ತಾರೆ ಎಂಬ ಭಾಮಿ ಶೆಣೈ ಅವರ ಪ್ರಶ್ನೆಗೆ ಉತ್ತರಿಸಿದರು.
ತಕ್ಷಣದ ಯುಜಿಟಿ ಕಾಮಗಾರಿಗಳಿಗೆ 50 ಕೋಟಿ ರೂ. ಇಟ್ಟುಕೊಂಡಿದ್ದು, ಹೊಸ ಕಾಮಗಾರಿ ಕೈಗೊಳ್ಳುತ್ತಿಲ್ಲ. 130 ಕಾಮಗಾರಿಗಳು ಪ್ರಗತಿಯಲ್ಲಿವೆ. 10 ಎಸ್‌ಟಿಪಿ ಅಳವಡಿಕೆಗೆ ಡಿಪಿಆರ್ ಸಿದ್ಧಮಾಡಲಾಗಿದೆ ಎಂದು ವಿವರಿಸಿದರು.
ಮೈಸೂರು ನಗರದಲ್ಲಿ ಸುಮಾರು 350 ಎಂಎಲ್‌ಡಿ ನೀರು ಬಳಕೆಯಾಗುತ್ತದೆ. ಇದರಲ್ಲಿ 150 ಎಂಎಲ್‌ಡಿ ನೀರು ಶುದ್ಧೀಕರಣ ಮಾಡಲಾಗುತ್ತಿದೆ. 170 ಎಂಎಲ್‌ಡಿ ನೀರು ಶುದ್ಧೀಕರಣ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. 
"

ಒತ್ತುವರಿಯಾಗಿರುವ ಪಾದಚಾರಿ ಮಾರ್ಗ ತೆರವಿಗೆ ಅಧಿಕಾರಿಗಳಿಗೆ ಸೂಚನೆ ಕೊಟ್ಟು ಸಾಕಾಗಿದೆ. ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರಿಗೆ ಹೇಳಿದರೂ ಕೆಲಸವಾಗುತ್ತಿಲ್ಲ

— ನಿತೇಶ್ ಪಾಟೀಲ್, ಮಹಾನಗರ ಪಾಲಿಕೆ ಆಡಳಿತ ಅಧಿಕಾರಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net