ಮೈಸೂರು-ಚಾಮರಾಜನಗರ ಬೈಪಾಸ್ ರಸ್ತೆಯ ನಗರದ ಕಪಿಲಾ ಮತ್ತು ಕೌಂಡಿನ್ಯ ನದಿಗಳ ಸಂಗಮದ ಸಮೀಪ ಶ್ರೀ ಪರಶುರಾಮ ಕ್ಷೇತ್ರ ನೆಲೆಗೊಂಡಿದೆ. ದೇಗುಲದಲ್ಲಿ ಅತ್ಯಾಕರ್ಷಕ ಶ್ರೀ ಪರಶುರಾಮರ ಮೂರ್ತಿ ಇದ್ದು, ಪ್ರತಿನಿತ್ಯ ಬೆಳಗ್ಗೆ 8 ರಿಂದ ಮಧ್ಯಾಹ್ನ 12, ಸಂಜೆ 4 ರಿಂದ 6ರವರೆಗೆ ಪೂಜೆ ಪುನಸ್ಕಾರಗಳು ನಡೆಯಲಿವೆ. ವಾರದ ಶನಿವಾರ ಮತ್ತು ಭಾನುವಾರ ಹಾಗೂ ರಜಾ ದಿನಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ನಿರಂತರವಾಗಿ ಭಕ್ತರ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ. ವಾರದ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಭೇಟಿ ಕೊಡುತ್ತಾರೆ. ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯಕ್ಕೆ ಬರುವ ಬಹುತೇಕ ಭಕ್ತಾದಿಗಳು ಇಲ್ಲಿಗೆ ಬಂದು ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ. ಚಾಮರಾಜನಗರ, ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಭಕ್ತಾದಿಗಳು ಆಗಮಿಸಿ, ಪಾಪ ಕರ್ಮಗಳನ್ನು ಕಳೆಯುವುದು ನಿರಂತರವಾಗಿ ನಡೆದುಕೊಂಡು ಬಂದಿದೆ.