ಸಿದ್ದರಾಮಯ್ಯ ಮಗನ ಕುಮ್ಮಕ್ಕಿನಿಂದ ನನ್ನ ವಿರುದ್ಧ ಎಫ್‌ಐಆರ್ : ಎಚ್. ವಿಶ್ವನಾಥ್ ಆರೋಪ

ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್
ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್
Published on
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಕುಮ್ಮಕ್ಕಿನಿಂದ ನನ್ನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್. ವಿಶ್ವನಾಥ್ ಆರೋಪಿಸಿದ್ದಾರೆ.
ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಪ್ರಕರಣ ಸಂಬಂಧ ಪೊಲೀಸರು ನನಗೆ ನೋಟಿಸ್ ಕೊಟ್ಟಿ ದ್ದರು, ನಾನು ಅವರಿಗೆ ಉತ್ತರ ನೀಡಿದ್ದೇನೆ. ಆ ನಂತರವೂ ಕೂಡ ಅವರು ಎಫ್‌ಐಆರ್ ದಾಖಲಿಸಿ ಈ ವಿಚಾರವನ್ನು ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಇದರಲ್ಲಿ ಡಾ.ಯತೀಂದ್ರ ಕುಮ್ಮಕ್ಕು ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ವೈಫಲ್ಯ ಕುರಿತು ಸಾಕಷ್ಟು ಬಾರಿ ಟೀಕೆ ಮಾಡಿದ್ದೇನೆ. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ನನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನಗೆ 55 ಲಕ್ಷ ರೂ. ಸಾಲ ನೀಡಲು ಅಷ್ಟೊಂದು ಹಣ ಕೋಟೆಹುಂಡಿ ಮಹದೇವುಗೆ ಎಲ್ಲಿಂದ ಬಂತು? ಕೋಟೆಹುಂಡಿ ಮಹದೇವು ನನ್ನ ಮನೆ ಮುಂದೆ ಬಂದು ನಿಲ್ಲುತ್ತಿದ್ದ, ಇದೀಗ ನನ್ನ ವಿರುದ್ಧವೇ ದೂರು ದಾಖಲಿಸಿದ್ದಾನೆ. ಆತನ ಬಳಿಯಿಂದ ನಾನು ಹಣ ಪಡೆದಿಲ್ಲ ಎಂದು ಹೇಳಿದರು.
ಹಣ ಪಡೆದಿಲ್ಲವೆಂದು ಪ್ರಮಾಣ ಮಾಡಲಿ
ನಾನು ಸಾಲ ಪಡೆದಿಲ್ಲ ಎಂದು ಅಡಗೂರು ಎಚ್. ವಿಶ್ವನಾಥ್ ಚಾಮುಂಡೇಶ್ವರಿ ತಾಯಿ ಸನ್ನಿಧಿಯಲ್ಲಿ ಆಣೆ ಪ್ರಮಾಣ ಮಾಡಲಿ ಎಂದು ದೂರುದಾರ ಕೋಟೆಹುಂಡಿ ಮಹದೇವು ಸವಾಲು ಹಾಕಿದ್ದಾರೆ.
ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೆ ವಿಶ್ವನಾಥ್ ಅನ್ಯಾಯ ಮಾಡಿದ್ದಾರೆ. ನಾನು 2013ರಲ್ಲಿ ಎಂ.ಟಿ.ಬಿ ನಾಗರಾಜ್ ಬಳಿ 55 ಲಕ್ಷ ರೂ.ಕೊಡಿಸಿದ್ದೆ. ಆ ಸಮಯದಲ್ಲಿ ವಿಶ್ವನಾಥ್ ಮಗ ಕೂಡ ಇದ್ದರು. ಆ ಸಾಲ ತೀರಿಸಲು ನನ್ನ ಆಸ್ತಿಯನ್ನು ಅಡಮಾನ ಇಟ್ಟಿದ್ದೇನೆ, ಇದೀಗ ಬಡ್ಡಿಯೂ ಬೆಳೆದಿದೆ. ಆದರೆ, ವಿಶ್ವನಾಥ್ ಸಾಲ ಪಡೆದು ಹಿಂತಿರುಗಿಸದೆ ಇದೀಗ ಸುಳ್ಳು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಡಾ ಯತೀಂದ್ರ ಅವರಿಗೆ ಯಾವುದೇ ಸಂಬಂಧವಿಲ್ಲ. ಅನಗತ್ಯವಾಗಿ ಅವರ ಹೆಸರನ್ನು ವಿಶ್ವನಾಥ್ ಎಳೆದು ತರುತ್ತಿದ್ದಾರೆ. ಎಂ.ಟಿ.ಬಿ ನಾಗಾರಾಜ್ ಹಣ ನೀಡಿರುವುದಕ್ಕೆ ಅವರ ಬಳಿ ಸಾಕ್ಷಿ ಇದೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net