ನಗರದ ಕಲಾಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಕೆ.ಹರೀಶ್ ಗೌಡ, ಮೃತ್ಯುಂಜಯ, ಶ್ರೀ ಡಾ.ಕುಮಾರಸ್ವಾಮಿ ಸ್ವಾಮೀಜಿ, ಡಾ.ಎಂ.ಡಿ. ಸುದರ್ಶನ್, ರಮಣಿ, ಕೆಂಡಗಣ್ಣೇಸ್ವಾಮಿ, ಹುಚ್ಚಪ್ಪ, ಅರಕೇಶ್, ಶಂಕರ್ ಹಾಗೂ ಜಯಕುಮಾರ್ ಇದ್ದರು.
Published on:
Copied
Follow Us
ವಿಶ್ವಕರ್ಮ ದೇವಶಿಲ್ಪಿ ಮಾತ್ರವಲ್ಲ. ಅವರು ಶ್ರಮ, ಸಂಸ್ಕೃತಿ ಹಾಗೂ ಕಾಯಕ ತತ್ವದ ಸಂಕೇತ ಎಂದು ಶಾಸಕ ಕೆ. ಹರೀಶ್ ಗೌಡ ಹೇಳಿದರು.
ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರ ಪಾಲಿಕೆ ಹಾಗೂ ವಿಶ್ವಕರ್ಮ ಜಯಂತ್ಯುತ್ಸವ ಸಮಿತಿಯ ಸಂಯುಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಋಗ್ವೇದ ಹಾಗೂ ಪುರಾಣಗಳ ಪ್ರಕಾರ ಬ್ರಹ್ಮಾಂಡದ ಪ್ರತಿಯೊಂದು ಸೃಷ್ಟಿಯ ಹಿಂದಿರುವ ದೈವಿಕ ಶಕ್ತಿಯೇ ವಿಶ್ವಕರ್ಮ. ಸ್ವರ್ಗಲೋಕ, ಸತ್ಯಯುಗದ ಇಂದ್ರಪುರಿ, ತ್ರೇತಾಯುಗದ ಲಂಕಾನಗರಿ, ದ್ವಾಪರಯುಗದ ದ್ವಾರಕಾನಗರ ಹಾಗೂ ಹಸ್ತಿನಾಪುರಗಳನ್ನು ನಿರ್ಮಿಸಿದ ಮಹಾನ್ ವಾಸ್ತುಶಿಲ್ಪಿ ವಿಶ್ವಕರ್ಮ ಎಂದು ಬಣ್ಣಿಸಿದರು.
ದೇವರ ದಿವ್ಯ ಆಯುಧಗಳಾದ ಶ್ರೀ ವಿಷ್ಣುವಿನ ಸುದರ್ಶನ ಚಕ್ರ, ಶಿವನ ತ್ರಿಶೂಲ ಹಾಗೂ ಕರ್ಣನ ಕುಂಡಲಗಳನ್ನು ರೂಪಿಸಿದ ಶಕ್ತಿಯೂ ವಿಶ್ವಕರ್ಮರಿಗೆ ಸೇರಿದೆ. ಮರಗೆಲಸ, ಕಬ್ಬಿಣದ ಕೆಲಸ, ಕಲ್ಲು ಮತ್ತು ಶಿಲ್ಪಕಲೆ, ಚಿನ್ನ-ಬೆಳ್ಳಿಯ ಆಭರಣ ತಯಾರಿಕೆ, ತಾಮ್ರ-ಕಂಚಿನ ಕೆಲಸ ಸೇರಿದಂತೆ ಪಂಚ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಕುಶಲಕರ್ಮಿಗಳು ಹಾಗೂ ವಿಶ್ವಕರ್ಮ ಸಮುದಾಯದವರು ಸಮಾಜದ ಬೆನ್ನೆಲುಬಾಗಿದ್ದಾರೆ ಎಂದರು.
ಕವಿ ಹಾಗೂ ನಿವೃತ್ತ ಪ್ರಾಧ್ಯಾಪಕ ಮೃತ್ಯುಂಜಯ ಮಾತನಾಡಿ, ವಿಶ್ವಕರ್ಮ ಜಯಂತಿಯಂದು ಕಾರ್ಖಾನೆಗಳು, ಕಚೇರಿಗಳು ಹಾಗೂ ಮನೆಗಳಲ್ಲಿ ಉಪಕರಣಗಳು, ಯಂತ್ರಗಳು ಮತ್ತು ಕಾಯಕದ ಸಾಧನಗಳನ್ನು ಪೂಜಿಸುವ ಸಂಪ್ರದಾಯವಿದೆ. ಕಾಯಕವೇ ಕೈಲಾಸ ಎಂಬ ತತ್ವಕ್ಕೆ ವಿಶ್ವಕರ್ಮ ದಿನಾಚರಣೆಯೇ ಅತ್ಯುತ್ತಮ ಉದಾಹರಣೆಯಾಗಿದೆ. ಪ್ರತಿಯೊಬ್ಬ ಕೌಶಲಾಧಾರಿತ ಕೆಲಸಗಾರ, ಶಿಲ್ಪಿ, ಇಂಜಿನಿಯರ್ ಹಾಗೂ ಶ್ರಮಿಕರಲ್ಲಿ ವಿಶ್ವಕರ್ಮನ ಅಂಶ ಅಡಗಿದೆ ಎಂದರು.
ಮಾಗಡಿ ತಾಲೂಕಿನ ಗೆಜ್ಜೆಗಾರಗುಪ್ಪೆಯ ಶ್ರೀ ಮುರಾರಿ ಸ್ವಾಮಿಗಳ ಪುಣ್ಯಕ್ಷೇತ್ರದ ಮಠಾಧಿಪತಿ ಶ್ರೀ ಡಾ.ಕುಮಾರಸ್ವಾಮಿ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಪ್ರಮುಖರಾದ ರಮಣಿ, ಕೆಂಡಗಣ್ಣೇಸ್ವಾಮಿ, ಹುಚ್ಚಪ್ಪ, ಅರಕೇಶ್, ಶಂಕರ್ ಹಾಗೂ ಜಯಕುಮಾರ್ ಇದ್ದರು.