ಎನ್‌ಆರ್'ನಲ್ಲಿ ಎಸ್‌ಐಆರ್ ಮಾರ್ಗಸೂಚಿ ಉಲ್ಲಂಘನೆ: ಯದುವೀರ್ ಆರೋಪ

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
Published on

ಪ್ರಮುಖ ಮುಖ್ಯಾಂಶಗಳು

  • ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆರೋಪ
  • ಬಾಂಗ್ಲಾ ವಲಸಿಗರನ್ನು ಸೇರಿಸುವ ಹುನ್ನಾರ
  • ಸರ್ಕಾರಿ ವ್ಯವಸ್ಥೆಯೇ ದುರ್ಬಳಕೆ
 ಮೈಸೂರು: ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿ ಉಲ್ಲಂಘನೆಯಾಗುತ್ತಿದೆ. ಅಕ್ರಮವೂ ನಡೆಯುತ್ತಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆರೋಪಿಸಿದರು.
ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿಲ್ಲ. ಅಕ್ರಮವಾಗಿ ಬಾಂಗ್ಲಾ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸುವ ಹುನ್ನಾರ ನಡೆದಿದೆ. ರಾಮನಗರದಲ್ಲೂ ಅಕ್ರಮ ನಡೆದಿರುವ ಬಗ್ಗೆ ವಿಡಿಯೋ ಬಿಡುಗಡೆ ಮಾಡಲಾಗಿದೆ. ಮೈಸೂರಿನ ಎನ್‌ಆರ್ ಕ್ಷೇತ್ರದಲ್ಲೂ ಅಕ್ರಮ ನಡೆಯುತ್ತಿದೆ. ಸರ್ಕಾರಿ ವ್ಯವಸ್ಥೆಯೇ ದುರ್ಬಳಕೆ ಆಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಅಕ್ರಮ ವಲಸಿಗರು ಸಮಸ್ಯೆ ಆಗುತ್ತಿದ್ದಾರೆ. ಇದು ಜಾಗತಿಕ ಸಮಸ್ಯೆ ಆಗಿದೆ. ಹೀಗಾಗಿ, ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸುವ ಕೆಲಸ ಆಗಬೇಕು. ಮಸೀದಿ, ಚೌಲ್ಟ್ರಿಯಲ್ಲಿ ಕುಳಿತು ಎಸ್‌ಐಆರ್ ಪ್ರಕ್ರಿಯೆ ಏಕೆ ಮಾಡುತ್ತಿದ್ದಾರೆ? ಮನೆ ಮನೆಗೆ ಹೋಗಿ ಏಕೆ ಪರಿಶೀಲನೆ ಮಾಡುತ್ತಿಲ್ಲ? ಎಂದು ಪ್ರಶ್ನಿಸಿದರು.
ಎನ್‌ಆರ್ ಕ್ಷೇತ್ರದ ಇತಿಹಾಸ ಎಲ್ಲರಿಗೂ ತಿಳಿದೆ ಇದೆ. ಬಿಜೆಪಿಯವರು ಅಲ್ಲಿ ಬೂತ್ ಏಜೆಂಟರನ್ನು ನೇಮಕ ಮಾಡಲಾಗದ ಪರಿಸ್ಥಿತಿ ಇದೆ. 
ಎನ್‌ಆರ್ ಕ್ಷೇತ್ರದಲ್ಲಿ ಸುಮಾರು 150 ಬೂತ್‌ಗಳಿಗೆ ನಮ್ಮ ಏಜೆಂಟರು ಹೋಗಲು ಆಗುತ್ತಿಲ್ಲ. ಕೆಲ ಬೂತ್‌ಗಳಿಗೆ ನಮ್ಮ ಏಜೆಂಟರು ಬರದಂತೆ ಬೆದರಿಕೆ ಹಾಕಲಾಗುತ್ತಿದೆ. ಅರ್ಹ ಮತದಾರರನ್ನು ಮಾತ್ರ ಮತದಾರರ ಪಟ್ಟಿಗೆ ಸೇರಿಸಿದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿಲ್ಲ. ಹೀಗಾಗಿಯೇ ಅದು ಅಧಿಕಾರಕ್ಕಾಗಿ ಅಡ್ಡದಾರಿ ಹಿಡಿದೆ ಎಂದೂ ಆರೋಪಿಸಿದರು.
ಎನ್‌ಆರ್ ಕ್ಷೇತ್ರ ಒಂದರಲ್ಲೇ ಸುಮಾರು ಒಂದು ಲಕ್ಷದಷ್ಟು ಅನರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಿರುವ ಗುಮಾನಿ ಇದೆ. ಆದ್ದರಿಂದ ಈ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸುವ ಅನಿವಾರ್ಯತೆ ಇದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮಾಡಿದ್ದ ಕೆಲಸವನ್ನೇ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಈ ಕ್ಷೇತ್ರದಲ್ಲಿ ಎಸ್‌ಐಆರ್ ಪ್ರಕ್ರಿಯೆ ಸುಸೂತ್ರವಾಗಿ ನಡೆಯಲು ಪೊಲೀಸ್ ಭದ್ರತೆ ಕಲ್ಪಿಸಬೇಕು. ಅಗತ್ಯವಿದ್ದರೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್) ನಿಯೋಜಿಸಬೇಕು ಎಂದು ಆಗ್ರಹಿಸಿದರು. 
ಎಸ್‌ಐಆರ್ ಮಾರ್ಗಸೂಚನೆ ಉಲ್ಲಂಘನೆ ಕುರಿತು ಶೀಘ್ರದಲ್ಲೇ ಪಕ್ಷದ ವತಿಯಿಂದ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net