ಬಂಕವಾಡಿಯಲ್ಲಿ ವೀರಾಂಜನೇಯಸ್ವಾಮಿ ರಥೋತ್ಸವ

ಬಂಕವಾಡಿ ಗ್ರಾಮದಲ್ಲಿ ಭಾನುವಾರ ವೀರಾಂಜನೇಯಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಬಂಕವಾಡಿ ಗ್ರಾಮದಲ್ಲಿ ಭಾನುವಾರ ವೀರಾಂಜನೇಯಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
Published on
ಸರಗೂರು: ತಾಲೂಕಿನ ಬಂಕವಾಡಿ ಗ್ರಾಮದಲ್ಲಿ ಭಾನುವಾರ ವೀರಾಂಜನೇಯಸ್ವಾಮಿ ರಥೋತ್ಸವ, ಸುಬ್ರಹ್ಮಣ್ಯಸ್ವಾಮಿ, ಸಿದ್ದಪ್ಪಾಜಿ, ಗಣಪತಿ, ನವಗ್ರಹ ಸಮೂಹ ದೇಗುಲದ ವಾರ್ಷಿಕ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
 ರಥೋತ್ಸವ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ವಿವಿಧ ಬಣ್ಣಗಳಿಂದ ಸಿಂಗಾರಿಸಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳನ್ನು ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಶುಕ್ರವಾರ ಮಹಾಗಣಪತಿ ಪೂಜೆ, ರಕ್ಷಾಬಂಧನ ನಿವೇದನೆ, ಮಹಾಮಂಗಳಾರತಿ ನಡೆಸಲಾಯಿತು. ಶನಿವಾರ ಬೆಳಗ್ಗೆ ಕಳಶಾರಾಧನೆ, ಹೋಮ-ಹವನ ನಂತರ ಮಹಾಮಂಗಳಾರತಿ ನಡೆಯಿತು. ಭಾನುವಾರ ಹಾಲು ಹರವಿಸೇವೆ, ರಥಾಂಗಹೋಮ, ಶಾಂತಿಹೋಮ, ಮಹಾಪೂರ್ಣಾಹುತಿ, ರಥಾರೋಹಣ, ರಥೋತ್ಸವ ನಿವೇದನೆ, ಮಹಾಮಂಗಳಾರತಿ ವಿಜೃಂಭಣೆಯಿಂದ ನಡೆಯಿತು.
ಗ್ರಾಮದ ಸಮೀಪದಲ್ಲಿರುವ ಕೆರೆಯಲ್ಲಿ ಉತ್ಸವ ಮೂರ್ತಿಯನ್ನು ಇರಿಸಿ ಅಲಂಕರಿಸಿ, ಗಂಗೆ ಪೂಜೆ ಮಾಡಿದ ಬಳಿಕ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಭಕ್ತರು ದೇವರ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಮೊಳೆಯೂರು-ಬಂಕವಾಡಿ ರಸ್ತೆಯಲ್ಲಿ ಸಾಗಿ ದೇವಸ್ಥಾನದ ಬಳಿ ಬಂದು ತಲುಪಿತು. ಬಳಿಕ ಸತ್ತಿಗೆ, ನಂದಿಧ್ವಜ, ಮಂಗಳವಾದ್ಯದೊಂದಿಗೆ ರಥೋತ್ಸವ ನಡೆಯಿತು. ಭಕ್ತರು ದಾರಿಯುದ್ದಕ್ಕೂ ಮಜ್ಜಿಗೆ, ಪಾನಕ ವಿತರಿಸಿದರು.
ಭಕ್ತರು ಸರತಿಯಲ್ಲಿ ಸಾಗಿ ದೇವರ ದರ್ಶನ ಪಡೆದರು. ಶಾಸಕ ಅನಿಲ್ ಚಿಕ್ಕಮಾದು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರಲ್ಲಿ ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಅನಿಲ್ ಚಿಕ್ಕಮಾದು ಬಂಕವಾಡಿ ಗ್ರಾಮಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಸಮುದಾಯ ಭವನದ ನಿವೇಶನ ಗುರುತು ಮಾಡಿದರೆ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಜಿಪಂ ಮಾಜಿ ಸದಸ್ಯ ಪಿ.ರವಿ ಮಾತನಾಡಿದರು. ಗುಡಿಗೌಡ ಚಿಕ್ಕಸ್ವಾಮಿ, ಯಜಮಾನರಾದ ಬಿ.ಎಂ.ಪದ್ಮರಾಜ್, ಎನ್.ಪಿ.ಸುರೇಶ್, ಗ್ರಾಪಂ ಸದಸ್ಯ ಕೃಷ್ಣ ಗ್ರಾಮದ ಮುಖಂಡ ಬಂಕವಾಡಿ ಮಹೇಶ್ ಸೇರಿದಂತೆ ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net