ಯಥಾವತ್ತಾಗಿ ಒಳಮೀಸಲಾತಿ ವರದಿ ಜಾರಿಗೆ ಒತ್ತಾಯಿಸಿ ವಿವಿಧ ಸಂಘಟನೆಗಳ ಪ್ರತಿಭಟನೆ

ಯಥಾವತ್ತಾಗಿ ಒಳಮೀಸಲಾತಿ ವರದಿ ಜಾರಿ ಮಾಡುವಂತೆ ಒತ್ತಾಯಿಸಿ ಮಾದಿಗ ವಿವಿಧ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು. ರಾಜಣ್ಣ, ಸ್ವಾಮಿ, ವೆಂಕಟರಾಮು, ಮಹದೇವ, ಹನುಮಂತಯ್ಯ ಇತರರು ಇದ್ದರು.
ಯಥಾವತ್ತಾಗಿ ಒಳಮೀಸಲಾತಿ ವರದಿ ಜಾರಿ ಮಾಡುವಂತೆ ಒತ್ತಾಯಿಸಿ ಮಾದಿಗ ವಿವಿಧ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು. ರಾಜಣ್ಣ, ಸ್ವಾಮಿ, ವೆಂಕಟರಾಮು, ಮಹದೇವ, ಹನುಮಂತಯ್ಯ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆಂಧ್ರ, ತೆಲಂಗಾಣದಲ್ಲಿ ಇಲ್ಲದ ತೊಡಕು ನಮ್ಮ ರಾಜ್ಯದಲ್ಲೇಕೆ ಎನ್ನುವ ಪ್ರಶ್ನೆ ಕಾಡುತ್ತಿದೆ
  • ಶಾಶ್ವತ ಆಯೋಗ ನೇಮಕ ಹಾಗೂ ಮೀಸಲಾತಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು
ಮೈಸೂರು: ಯಥಾವತ್ತಾಗಿ ಒಳಮೀಸಲಾತಿ ವರದಿ ಜಾರಿ ಮಾಡುವಂತೆ ಒತ್ತಾಯಿಸಿ ಮಾದಿಗ ವಿವಿಧ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಬಳಿಪ್ರತಿಭಟನೆ ನಡೆಸಲಾಯಿತು.
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಸಂಬಂಧ ರಾಜ್ಯ ಸರ್ಕಾರ ನೊಂದ ಸಮುದಾಯಗಳ ಧ್ವನಿಯಾಗಲು ಮುಂದಾಗಿದೆ. ಅದರಲ್ಲೂ ಸಂವಿಧಾನ ಪರ, ಸಾಮಾಜಿಕ ನ್ಯಾಯದ ಪರ, ಸಮಾಜವಾದಿ ಸಿದ್ಧಾಂತದ ಹಿನ್ನೆಲೆಯ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಳಮೀಸಲಾತಿ ವಿಚಾರದಲ್ಲಿ ಅಸ್ಪಷ್ಟ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ವರದಿ ಸಂಪೂರ್ಣ ಜಾರಿ ಮಾಡದೆ ನಿರಾಶೆ ಮಾಡಿದ್ದಾರೆ ಎಂದು ದೂರಿದರು.
ಆದರೆ, ಮೀಸಲಾತಿ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಲು ಮುಂದಾಗದಿರುವುದರಿಂದ ಅವಕಾಶ ವಂಚಿತ ಸಮುದಾಯಗಳು ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಮುಂದಾಗಲು ಆಡಳಿತರೂಢ ಸರ್ಕಾರವೇ ಅವಕಾಶ ಕಲ್ಪಿಸಿದಂತಾಗಿದೆ. ಆಂಧ್ರ, ತೆಲಂಗಾಣದಲ್ಲಿ ಇಲ್ಲದ ತೊಡಕು ನಮ್ಮ ರಾಜ್ಯದಲ್ಲೇಕೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಒಳಮೀಸಲಾತಿಗಾಗಿ ನಾವುಗಳು ನಿರಂತರವಾಗಿ ಹೋರಾಡುತ್ತಲೇ ಇರಬೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಂಧ್ರ ಹಾಗೂ ತೆಲಂಗಾಣಗಳಲ್ಲಿ ಕೇವಲ 3 ತಿಂಗಳಾಗುವುದರಲ್ಲಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನಿಖರ ದತ್ತಾಂಶಗಳ ಸಮೀಕ್ಷೆಯ ನಂತರ ಆಡಳಿತರೂಢ ಹಾಗೂ ಪ್ರತಿಪಕ್ಷಗಳು ಬೇಷರತ್ತಾಗಿ ಒಳಮೀಸಲಾತಿ ಜಾರಿಗೊಳಿಸಿವೆ. ಆದರೆ ಕರ್ನಾಟಕದಲ್ಲಿ ಮಾತ್ರ ನ್ಯಾಯಾಲಯದ ಯಾವೊಂದು ಮಾರ್ಗಸೂಚಿಗಳನ್ನು ಪಾಲಿಸದೆ, ನಿಖರ ದತ್ತಾಂಶಗಳನ್ನು ಗಂಭೀರವಾಗಿ ಪರಿಗಣಿಸದೆ ಕಾನೂನಿನ ಇಕ್ಕಟ್ಟಿಗೆ ಸಿಲುಕಿಸಿ, ನೇಮಕಾತಿ ಆಗಬಹುದಾದ ಲಕ್ಷಾಂತರ ನಿರುದ್ಯೋಗಿ ಯುವಜನತೆಯ ಆಕ್ರೋಶಕ್ಕೆ ಗುರಿಯಾಗಿದೆ ಎಂದು ದೂರಿದರು.
ನೇರ ನೇಮಕಾತಿ ಜತೆಗೆ ಪದೋನ್ನತಿ, ಬ್ಯಾಕ್‌ಲಾಗ್ ಹಾಗೂ ಸರ್ಕಾರಿ ಗುತ್ತಿಗೆ ಸೇರಿದಂತೆ ಎಲ್ಲ ವಲಯಗಳಲ್ಲಿ ಒಳಮೀಸಲಾತಿ ಜಾರಿ ಮಾಡಬೇಕು. ಎಸ್‌ಸಿಪಿ, ಟಿಎಸ್‌ಪಿ ಅನುದಾನದಲ್ಲೂ ಸಹ 6:6:5ರ ಅನುಪಾತದಲ್ಲಿ ಹಂಚಿಕೆಯಾಗಬೇಕು. ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಶೇ.1 ಮೀಸಲಾತಿಯೊಂದಿಗೆ ಪ್ರತ್ಯೇಕ ನಿಗಮ ಹಾಗೂ ಪ್ರತ್ಯೇಕ ಪ್ಯಾಕೇಜ್ ಘೋಷಿಸಬೇಕು, ಶಾಶ್ವತ ಆಯೋಗ ನೇಮಕ ಹಾಗೂ ಮೀಸಲಾತಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಒಳಮೀಸಲಾತಿ ಹೋರಾಟಗಾರರ ಮೇಲಿನ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು, ಆದಿಜಾಂಬವ ಅಭಿವೃದ್ಧಿ ನಿಗಮ, ಚರ್ಮ ಕೈಗಾರಿಕಾ ಅಭಿವೃದ್ಧಿ ಮಂಡಳಿ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಗಳಿಗೆ ತಲಾ 2 ಸಾವಿರ ಕೋಟಿ ರೂ. ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದರು.
ಒಕ್ಕೂಟ ಜಿಲ್ಲಾ ಗೌರವಾಧ್ಯಕ್ಷ ರಾಜಣ್ಣ, ಸಂಚಾಲಕ ಸ್ವಾಮಿ, ಮುಖಂಡರಾದ ವೆಂಕಟರಾಮು, ಮಹದೇವ, ಹನುಮಂತಯ್ಯ ಇತರರಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net