ಮೈಸೂರಿನಲ್ಲಿ ದೇಸಿ ಅಕ್ಕಿ ಮೇಳದಲ್ಲಿ ಗಮನ ಸೆಳೆಯುತ್ತಿರುವ ವೈವಿಧ್ಯಮಯ ತಳಿಗಳು
ಮೈಸೂರು ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಶನಿವಾರ ‘ದೇಸಿ ಅಕ್ಕಿ ಮೇಳ’ಕ್ಕೆ ಚಾಲನೆ ದೊರೆಯಿತು. ಕೃಷ್ಣಪ್ರಸಾದ್, ಶ್ರೀಕಾಂತ್ ಪಿ.ಕಣವಿ, ಎ.ಜೆ. ಕೃಷ್ಣಮೂರ್ತಿ, ಸೈಯ್ಯದ್ ಘನಿಖಾನ್, ದೇವೇಂದ್ರಪ್ಪ, ಬಾಲಕೃಷ್ಣ, ರವಿಶಂಕರ್, ರವಿ ಹಾಗೂ ಇತರರು ಇದ್ದರು.
Published on:
Copied
Follow Us
ಮೈಸೂರು:ಗ್ರಾಹಕರಿಗೆ ದೇಸಿ ಅಕ್ಕಿಯ ಮಹತ್ವದ ಬಗ್ಗೆ ಅರಿವು ಮೂಡಿಸಲು 2 ದಿನಗಳ ಕಾಲ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಹಜ ಸಮೃದ್ಧ, ಸಹಜ ಸೀಡ್ಸ್ ಮತ್ತು ಭತ್ತ ಉಳಿಸಿ ಆಂದೋಲನ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಆಯೊಜಿಸಿರುವ ‘ದೇಸಿ ಅಕ್ಕಿ ಮೇಳ’ಕ್ಕೆ ಶನಿವಾರ ಚಾಲನೆ ದೊರೆಯಿತು.
ಮೇಳದಲ್ಲಿ ಮೇಲುಕೋಟೆಯ ಪುಟ್ಟಭತ್ತ, ಯಳಂದೂರಿನ ರತ್ನಚೂಡಿ, ಪಿರಿಯಾಪಟ್ಟಣದ ರಾಜಭೋಗ, ಹೊಳೆನರಸೀಪುರದ ರಾಜಮುಡಿ, ನಂಜನಗೂಡಿನ ಆನೆಕೊಂಬಿನ ಭತ್ತ, ಕನಕಪುರದ ಮುಂಡುಗ, ನಾಗರಹೊಳೆ ಕಾಡಿನ ಹಾಲುದೊಡ್ಡಿ , ತುಮಕೂರಿನ ಹಾಲುಬ್ಬಲು, ಮಲೆನಾಡಿನ ಗಂಧಸಾಲೆ, ಜೀರಿಗೆ ಸಣ್ಣ ಅಕ್ಕಿಗಳು ಗಮನ ಸೆಳೆಯುತ್ತಿವೆ.
ಇವುಗಳ ಜತೆಗೆ ಸಿದ್ದಸಣ್ಣ, ಎಚ್‌ಎಂಟಿ, ಅಂದನೂರು ಸಣ್ಣ, ಸಿಂಧೂರ ಮಧುಸಾಲೆ, ಗೌರಿ ಸಣ್ಣ, ಸೋನಾಮಸೂರಿ, ದೊಡ್ಡಭೈರನೆಲ್ಲು, ಮಾಪಿಳ್ಳೆ ಸಾಂಬಾ, ಕೆಂಪಕ್ಕಿ, ನವರ, ಆರ್‌ಎನ್‌ಆರ್, ಡಯಾಬಿಟಿಸ್ ಅಕ್ಕಿ, ಪೊನ್ನಿ ಅಕ್ಕಿ, ನವರಾ, ಬರ್ಮಾ ಬ್ಲಾಕ್ ಸೇರಿದಂತೆ ವಿವಿಧ ಅಕ್ಕಿಗಳು ಜನರನ್ನು ಆಕರ್ಷಿಸುತ್ತಿದೆ.
ಮೇಳದಲ್ಲಿ ಅಕ್ಕಿಗಳ ಜತೆಗೆ ಸಿರಿಧಾನ್ಯಗಳಾದ ರಾಗಿ, ಆರ್ಕ, ಊದಲು, ನವಣೆ, ಸಾಮೆ, ಬರಗು, ಕೊರಲೆಯ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ದಂಟಿನ ಬೀಜಗಳು, ಸಬ್ಬಸಿಗೆ ಸೊಪ್ಪು, ಕೊತ್ತಂಬರಿ ಸೊಪ್ಪು, ಮೆಂತ್ಯ ಸೊಪ್ಪು , ಪಾಲಾಕ್ ಸೊಪ್ಪಿನ ಬೀಜಗಳನ್ನು ಮಾರಾಟ ಮಾಡಲಾಗುತ್ತಿದೆ.
ಸಹಜ ಸಮೃದ್ಧ ಸಂಸ್ಥೆ ನಿರ್ದೇಶಕ ಕೃಷ್ಣಪ್ರಸಾದ್ ಮಾತನಾಡಿ, ದೇಸಿ ಅಕ್ಕಿಗಳ ವೈಭವ ಹಳೆಯ ಗೆಜೆಟಿಯರ್, ದೇವಸ್ಥಾನದ ತಾಮ್ರ ಪತ್ರದಲ್ಲಿ ದಾಖಲಾಗಿವೆ. ಒಡಿಶಾ, ಪಶ್ಚಿಮ ಬಂಗಾಳದ ಗದ್ದೆಯ ಬದಿಗಳಲ್ಲಿ, ಹಳ್ಳಗಳಲ್ಲಿ ಎಲ್ಲೆಂದರಲ್ಲಿ ಕಾಡುಭತ್ತ ಕಾಣಬಹುದು. ಕಳೆದ 10-12 ವರ್ಷಗಳ ಹಿಂದೆ ಹ್ಯಾಂಡ್‌ಪೋಸ್ಟ್-ಎಚ್.ಡಿ. ಕೋಟೆ ಮಾರ್ಗದಲ್ಲಿ ಕಾಡುಭತ್ತ ಇತ್ತು. ಇವು ಸಾಕಷ್ಟು ಔಷಧ ಮೌಲ್ಯ ಹೊಂದಿವೆ ಎಂದರು.
ಪ್ರಸ್ತುತ ರೈತರು ಕೆಲವೇ ಕೆಲವು ಭತ್ತದ ತಳಿಗಳನ್ನು ಮಾತ್ರ ಬೆಳೆಯುತ್ತಿದ್ದಾರೆ. ಗಂಗಾವತಿ, ಹಂಪಿ, ಕೊಪ್ಪಳ ಮುಂತಾದ ಕಡೆಗಳಲ್ಲಿ ಸಾಕಷ್ಟು ಭತ್ತದ ತಳಿಗಳು ಕಣ್ಮರೆಯಾಗಿದೆ. ಪಾಲೀಶ್ ಮಾಡಿದ ಅಕ್ಕಿಯಿಂದ ತಯಾರಿಸುವ ಅನ್ನ ಒಂದು ದಿನಕ್ಕೆ ಹಾಳಾಗುತ್ತದೆ. ಅದರೆ, ರಾಜಮುಡಿ ಅನ್ನ 2 ದಿನ ಇಟ್ಟರೂ ಏನು ಆಗುವುದಿಲ್ಲ. ನಮ್ಮಲ್ಲಿ ಇಡ್ಲಿ, ಅನ್ನ, ಪಲಾವ್, ಚಿತ್ರನ್ನ, ನೈವೇದ್ಯ, ಕಜ್ಜಾಯ ಮಾಡಲು ಪ್ರತ್ಯೇಕ ಭತ್ತದ ತಳಿಗಳು ಇವೆ. ಈ ಪೈಕಿ ಸಾಕಷ್ಟು ತಳಿಗಳು ನಾಶವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಹಳೇ ಮೈಸೂರು ಭಾಗದಲ್ಲಿ ದೇಸಿ ಭತ್ತ ವೈಭವವನ್ನು ತರುವ ಪ್ರಯತ್ನ ನಡೆಯಬೇಕು. ಇದಕೋಸ್ಕರ ಸರ್ಕಾರದ ಬೆಂಬಲವೂ ಅಗತ್ಯ. ಅಂಗನವಾಡಿ, ಶಾಲೆಗಳಲ್ಲಿ ಬಿಸಿಯೂಟಕ್ಕೆ ಛತ್ತೀಸ್‌ಗಢದ ಅಕ್ಕಿ ಬಳಕೆ ಮಾಡುವ ಬದಲು ರಾಜ್ಯದಲ್ಲಿ ಬೆಳೆದ ದೇಸಿ ಅಕ್ಕಿ ಬಳಕೆ ಮಾಡಬೇಕು. ಇದರ ಜತೆಗೆ ಪಡಿತರ ವ್ಯವಸ್ಥೆಯಲ್ಲೂ ದೇಸಿ ಅಕ್ಕಿ ವಿತರಣೆ ಮಾಡಬೇಕು ಎಂದು ಹೇಳಿದರು.
ನಿರ್ಲಕ್ಷಿತ ಬೆಳೆಗಳ ಸಂರಕ್ಷಣೆಗೆ ಒಡಿಶಾ ಸರ್ಕಾರ 400 ಕೋಟಿ ರೂ. ಮೀಸಲಿರಿಸಿದೆ. ಅದೇ ರೀತಿ ಸಿರಿಧಾನ್ಯಗಳಿಗೆ 600 ಕೋಟಿ ರೂ. ಮೀಸಲಿರಿಸಿದೆ. ನಮ್ಮ ರಾಜ್ಯದಲ್ಲಿ ಸರಿಯಾಗಿ 10 ಕೋಟಿ ರೂ. ಸಹ ನೀಡುತ್ತಿಲ್ಲ. ಕರ್ನಾಟಕ ದೇಸಿ ಭತ್ತದ ಕಣಜ, ಸಾವಯವ ಕೃಷಿ ಯೋಜನೆ ಜಾರಿಗೆ ತಂದ ಮೊದಲ ರಾಜ್ಯ ನಮ್ಮದು. ಆದರೆ, ಇದೀಗ ನಾವು ಕೊನೆಯ ರಾಜ್ಯವಾಗಿ ಉಳಿದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ರೋಟರಿ ಕ್ಲಬ್‌ಮೈಸೂರು (ಪಶ್ಚಿಮ) ಅಧ್ಯಕ್ಷ ಶ್ರೀಕಾಂತ್ ಪಿ.ಕಣವಿ ಮೇಳಕ್ಕೆ ಚಾಲನೆ ನೀಡಿದರು. ರೋಟರಿ ಕ್ಲಬ್‌ಮೈಸೂರು (ಪಶ್ಚಿಮ) ಕಾರ್ಯದರ್ಶಿ ಎ.ಜೆ. ಕೃಷ್ಣಮೂರ್ತಿ, ದೇಸಿ ಭತ್ತ ಸಂರಕ್ಷಕರಾದ ಸೈಯ್ಯದ್ ಘನಿಖಾನ್, ದೇವೇಂದ್ರಪ್ಪ, ರೊಟೇರಿಯನ್ ಬಾಲಕೃಷ್ಣ, ರೈತ ರವಿಶಂಕರ್, ಸಹಜ ಸೀಡ್ಸ್ ಸಿಇಒ ರವಿ ಹಾಗೂ ಇತರರು ಇದ್ದರು.
ವಿಶೇಷ ತಿನಿಸುಗಳ ಆಕರ್ಷಣೆ
ಮೇಳದಲ್ಲಿ ದೇಸಿ ಅಕ್ಕಿಯಿಂದ ತಯಾರಿಸಿದ ವಿಶೇಷ ತಿನಿಸುಗಳ ಮಳಿಗೆಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಕೆಂಪಕ್ಕಿ ಕಜ್ಜಾಯ, ಕಪ್ಪಕ್ಕಿ ಕಜ್ಜಾಯ, ಉರಕ್ಕಿ ತಂಬಿಟ್ಟು ಸೇರಿದಂತೆ ಅಕ್ಕಿ ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು ಹಾಗೂ ಸಂಡಿಗೆಗಳಂತಹ ಸಾಂಪ್ರದಾಯಿಕ ಸಿಹಿ-ಖಾರದ ತಿಂಡಿಗಳು ಮೇಳಕ್ಕೆ ಆಗಮಿಸಿದವರಿಗೆ ಬಾಲ್ಯದ ರುಚಿಯನ್ನು ನೆನಪಿಸುತ್ತಿದ್ದು, ಇವುಗಳಿಗೆ ಉತ್ತಮ ಬೇಡಿಕೆ ವ್ಯಕ್ತವಾಗುತ್ತಿದೆ. ದೇಸಿ ಅಕ್ಕಿಯ ಈ ಮೌಲ್ಯವರ್ಧಿತ ತಿನಿಸುಗಳು, ಮರೆಯಾಗುತ್ತಿರುವ ಸಾಂಪ್ರದಾಯಿಕ ಪಾಕ ಕಲೆಯನ್ನು ಹೊಸ ತಲೆಮಾರಿಗೆ ಪರಿಚಯಿಸುವ ಪ್ರಯತ್ನವೂ ಆಗಿದೆ. ಮೇಳದಲ್ಲಿ ಸಿರಿಧಾನ್ಯಗಳು, ತರಕಾರಿ ಬೀಜಗಳು, ವಿವಿಧ ಗೆಣಸುಗಳು, ಸಾವಯವ ಉತ್ಪನ್ನಗಳು ಹಾಗೂ ಹಣ್ಣಿನ ಸಸಿಗಳ ಮಾರಾಟವೂ ನಡೆಯುತ್ತಿದೆ.
ಇಂದು ಅಕ್ಕಿ ಅಡುಗೆ ಹಾಗೂ ಚಿತ್ರಕಲಾ ಸ್ಪರ್ಧೆಗಳು
ಸಾಂಪ್ರದಾಯಿಕ ಅಡುಗೆಗಳನ್ನು ಉತ್ತೇಜಿಸಲು ದೇಸಿ ಅಕ್ಕಿ ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧಿಗಳು ಮನೆಯಲ್ಲಿ ದೇಸಿ ಅಕ್ಕಿಯಿಂದ ತಯಾರಿಸಿದ ಯಾವುದೇ ಖಾದ್ಯವನ್ನು ಭಾನುವಾರ ಮಧ್ಯಾಹ್ನ 12.30 ಗಂಟೆಯೊಳಗೆ ಮೇಳಕ್ಕೆ ತರಬಹುದು. ಆಯ್ಕೆಯಾದ ಖಾದ್ಯಗಳಿಗೆ ನಗದು ಬಹುಮಾನ ನೀಡಲಾಗುತ್ತದೆ. ಮಕ್ಕಳಲ್ಲಿ ಭತ್ತದ ಕೃಷಿ ಮತ್ತು ಕೃಷಿ ಸಂಸ್ಕೃತಿಯ ಬಗ್ಗೆ ಆಸಕ್ತಿ ಮೂಡಿಸಲು ನನ್ನ ಕಣ್ಣಲ್ಲಿ ಭತ್ತದ ಲೋಕ ಎಂಬ ವಿಷಯದ ಮೇಲೆ 5 ರಿಂದ 15 ವರ್ಷದ ಮಕ್ಕಳಿಗಾಗಿ ಭಾನುವಾರ ಬೆಳಿಗ್ಗೆ 10.30ಕ್ಕೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಅತ್ಯುತ್ತಮ ಚಿತ್ರಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ.