ರೈತರ ಬೆಳೆಗಳಿಗೆ ಮೌಲ್ಯವರ್ಧನೆ ಅವಶ್ಯ: ಉದ್ಯಮಿ ಸುರೇಶ್‌ಕುಮಾರ್ ಜೈನ್ ಅಭಿಮತ
ನಗರದಲ್ಲಿ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿಟಿಪಿಸಿ)ದಿಂದ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಸುರೇಶ್‌ಕುಮಾರ್ ಜೈನ್, ಕೆ. ನಾಗರಾಜು, ಕೆ.ಬಿ ಲಿಂಗರಾಜು, ಎಲ್. ಮೇಘಲಾ, ಸಿ.ಎಸ್.ಬಾಬು ನಾಗೇಶ್, ಸೋಮಶೇಖರ್ ಇತರರು ಇದ್ದರು.
ಮೌಲ್ಯವರ್ಧನೆ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಕೃಷಿ ಹಾಗೂ ಕೈಗಾರಿಕೆಗಳು ಅಭಿವೃದ್ಧಿ ಹೊಂದಲು ಸಾಧ್ಯ
ಇದರಿಂದ ರೈತರು ಹಾಗೂ ಸಣ್ಣ ಕೈಗಾರಿಕೋದ್ಯಮಿಗಳಿಗೂ ಲಾಭ.
ರೈತರು ಉಪಕಸುಬು ರೂಢಿಸಿಕೊಂಡು ಸಮಗ್ರವಾಗಿ ಲಾಭವನ್ನು ಗಳಿಸಬಹುದು
ಮೈಸೂರು:ರೈತರು ತಾವು ಬೆಳೆದ ಬೆಳೆಗಳನ್ನು ಮೌಲ್ಯವರ್ಧನೆ ಮಾಡಲು ಸಣ್ಣ ಕೈಗಾರಿಕೆಗಳನ್ನು ಅವಲಂಬಿಸಿದರೆ, ಎರಡೂ ಕ್ಷೇತ್ರಗಳು ದೇಶದ ಆರ್ಥಿಕತೆ ವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸಬಹುದು ಎಂದು ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್‌ಕುಮಾರ್ ಜೈನ್ ಹೇಳಿದರು.
ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿಟಿಪಿಸಿ)ದಿಂದ ರಫ್ತು ನಿರ್ವಹಣಾ ತರಬೇತಿ ಹಾಗೂ ರಾಜ್ಯ ಸರ್ಕಾರದ ರೈತ ಸಮೃದ್ಧಿ ಯೋಜನೆಯಡಿ ನಗರದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರ ಕೃಷಿ ಉತ್ಪನ್ನಗಳನ್ನು ಕೈಗಾರಿಕೆಗಳ ಸಹಯೋಗದೊಂದಿಗೆ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಕೃಷಿ ಹಾಗೂ ಕೈಗಾರಿಕೆಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ರೈತ ದೇಶದ ಬೆನ್ನೆಲುಬಿದ್ದಂತೆ, ಕೈಗಾರಿಕೆಗಳು ಪೆಕ್ಕೆಲುಬಿದ್ದಂತೆ. ಹಾಗಾಗಿ ಕೃಷಿ ಪ್ರಧಾನವಾದ ದೇಶದ ರೈತರು ತಾವು ಬೆಳೆದ ಬೆಳೆಗಳನ್ನು ಮೌಲ್ಯವರ್ಧನೆ ಮಾಡಲು ಸಣ್ಣ ಕೈಗಾರಿಕೆಗಳನ್ನು ಅವಲಂಬಿಸಬೇಕು. ಇದರಿಂದ ರೈತರು ಹಾಗೂ ಸಣ್ಣ ಕೈಗಾರಿಕೋದ್ಯಮಿಗಳಿಗೂ ಲಾಭ. ಇದು ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿರುತ್ತದೆ ಎಂದು ಹೇಳಿದರು.
ಕೃಷಿ ಉತ್ಪನ್ನ ಮಾರಾಟ ಕೇಂದ್ರಗಳು ಅವರ ಕಾರ್ಯಗಳ ಮಧ್ಯದಲ್ಲಿ ಮೌಲ್ಯವರ್ಧನೆಯಲ್ಲೂ ಸಕ್ರಿಯವಾಗಿ ಭಾಗವಹಿಸಿದರೆ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗುತ್ತದೆ. ದೇಶವನ್ನ ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದರು,
ಕೃಷಿ ಇಲಾಖೆಯ ಉಪ ನಿರ್ದೇಶಕ ಕೆ.ನಾಗರಾಜು ಮಾತನಾಡಿ, ಕೃಷಿ ಇಲಾಖೆಯು ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಸಮಗ್ರ ಯೋಜನಾ ಕೃಷಿಯನ್ನು ಉತ್ತೇಜನ ಮಾಡಲು ಕೃಷಿಯೊಂದಿಗೆ ಹೈನುಗಾರಿಕೆ, ರೇಷ್ಮೆ, ಮೀನುಗಾರಿಕೆಗಳಂತಹ ಉಪಕಸುಬು ರೂಢಿಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತಿದೆ. ರೈತರು ಉಪಕಸುಬು ರೂಢಿಸಿಕೊಂಡು ಸಮಗ್ರವಾಗಿ ಲಾಭವನ್ನು ಗಳಿಸಬಹುದು ಎಂದರು.
ವಿಟಿಪಿಸಿ ಜಂಟಿ ನಿರ್ದೇಶಕ ಸಿ.ಎಸ್.ಬಾಬು ನಾಗೇಶ್ ಮಾತನಾಡಿ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರದ ಸಂಸ್ಥೆಯು ರಾಜ್ಯ ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಾಗಿದ್ದು, ರಫ್ತಿಗಾಗಿ ಮೀಸಲಾಗಿರುವ ಸಂಸ್ಥೆಯಾಗಿದೆ. ಆದರೆ ಈ ಸಂಸ್ಥೆಯ ಬಗ್ಗೆ ರೈತರಿಗೆ ಹೆಚ್ಚಾಗಿ ಮಾಹಿತಿ ಇಲ್ಲ. ಸರ್ಕಾರವು ವಿವಿಧ ರೀತಿಯ ಸವಲತ್ತುಗಳನ್ನು ನೀಡುತ್ತಾ ಬಂದಿದೆ. ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಳೆದ ವರ್ಷದಲ್ಲಿ 2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ರಫ್ತು ಶೇ.25ರಷ್ಟು ಹೆಚ್ಚಾಗಿದೆ. ಸರಕು ರಫ್ತು ಮಾಡುವುದರಲ್ಲಿ ಕರ್ನಾಟಕ ರಾಜ್ಯವು ದೇಶದ 4ನೇ ಸ್ಥಾನದಲ್ಲಿದೆ ಎಂದು ಹೇಳಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಸೋಮಶೇಖರ್ ಮಾತನಾಡಿ, ರೈತರು ಬೆಳೆದಂತಹ ಬೆಳೆಗಳು ಎಲ್ಲಿ ಬೇಡಿಕೆ ಇದೆ ಎಂಬುದನ್ನು ಸಂಘ, ಸಂಸ್ಥೆಗಳು ಸರ್ಕಾರ ಸಂಸ್ಥೆಗಳ ಮೂಲಕ ಮಾಹಿತಿ ನೀಡಬೇಕು. ಮಾಹಿತಿಯನ್ನು ಡಿಜಿಟಲೀಕರಣ ಮಾಡಿ ಬೇರೆ ದೇಶಗಳಿಗೆ ನಿಮ್ಮದೇ ಬ್ರಾೃಂಡ್ ಮೂಲಕ ರಫ್ತು ಮಾಡಿದರೆ ರೈತರಿಗೆ ಲಾಭವಾಗುತ್ತದೆ ಎಂದು ತಿಳಿಸಿದರು.
ರೈತರು ಬೆಳೆದ ಬೆಳೆಗಳಿಗೆ ಯಾವ ಕಾರಣಕ್ಕಾಗಿ ಬೆಲೆ ಸಿಗುತ್ತಿಲ್ಲ ಎಂಬುದರ ಬಗ್ಗೆ ಸಂಶೋಧನೆಗಳು ಆಗುತ್ತಿಲ್ಲ. ಅದರಿಂದ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುವ ಬಗ್ಗೆ ಸಂಶೋಧನೆ ಮಾಡಿದರೆ ಎಲ್ಲ ವಸ್ತುಗಳಿಗೆ ಸೂಕ್ತ ಬೆಲೆ ಸಿಗುತ್ತದೆ ಎಂದು ಹೇಳಿದರು.
ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ ಲಿಂಗರಾಜು, ವಿಟಿಪಿಸಿ ರಫ್ತು ಸೌಲಭ್ಯ ಕೇಂದ್ರದ ಉಪ ನಿರ್ದೇಶಕಿ ಎಲ್.ಮೇಘಲಾ, ಕಾರ್ಯಕ್ರಮ ಪ್ರಾಯೋಜಕ ಅರವಿಂದ ಭಟ್, ಶಿಬಿರಾರ್ಥಿಗಳು ಇದ್ದರು.