ಜಿಲ್ಲೆಯಲ್ಲಿ ಬಾಲಕಾರ್ಮಿಕ ಕಲ್ಯಾಣ ನಿಧಿ ಬಳಕೆ ಕುಂಠಿತ

ಬಾಲ ಕಾರ್ಮಿಕರು
ಬಾಲ ಕಾರ್ಮಿಕರು
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಬ್ಯಾಂಕ್ ಖಾತೆಯಲ್ಲೇ ಉಳಿದ 2.80 ಲಕ್ಷ ರೂ.
  • ಸರಿಯಾದ ಮಾರ್ಗಸೂಚಿಯ ಕೊರತೆ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಕೆಲಸ ಸ್ಥಳದಿಂದ ರಕ್ಷಿಸಲ್ಪಟ್ಟ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಪುನರ್ವಸತಿಗಾಗಿ ಮೀಸಲಿರುವ ‘ಬಾಲಕಾರ್ಮಿಕ ಪುನರ್ವಸತಿ ಮತ್ತು ಕಲ್ಯಾಣ ನಿಧಿ’ ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬಳಕೆಯೇ ಆಗುತ್ತಿಲ್ಲ...! 
ಜಿಲ್ಲೆಯಲ್ಲಿ ಈವರೆಗೆ ಕೇವಲ 9 ಬಾಲಕರು ಈ ಸೌಲಭ್ಯ ಲಾಭ ಪಡೆದುಕೊಂಡಿದ್ದಾರೆ. ಇದೇ ರೀತಿ ಉಳಿದ ಬಾಲಕಾರ್ಮಿಕ ಪದ್ಧತಿಯಿಂದ ಹೊರಬಂದಿರುವ ಮಕ್ಕಳಿಗೂ ದೊರೆಯಬೇಕಾಗಿದೆ. ಜತೆಗೆ, ಜಿಲ್ಲಾಧಿಕಾರಿ ಬ್ಯಾಂಕ್ ಖಾತೆಯಲ್ಲಿ ನಿಧಿಯ 2.80 ಲಕ್ಷ ರೂ. ಈಗಲೂ ಬಳಕೆಯಾಗದೆ ಉಳಿದಿದೆ. ಅದು ಸಹ ವಿನಿಯೋಗವಾಗಬೇಕಿದೆ.

ಮಕ್ಕಳ ಕಲ್ಯಾಣಕ್ಕಾಗಿ ಈ ನಿಧಿ ಬಳಕೆ: 

ಅಪಾಯಕಾರಿ ಕ್ಷೇತ್ರದಲ್ಲಿ ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿ ಅವರಿಗೆ ಪುನರ್ವಸತಿ ಕಲ್ಪಿಸಿಕೊಡಬೇಕಾಗುತ್ತದೆ. ಶಿಕ್ಷಣ ಮುಂದುವರಿಕೆಗೆ, ಆರೋಗ್ಯ ಸೇರಿದಂತೆ ಇತರ ಸೌಲಭ್ಯ ಕಲ್ಪಿಸಿ ಸಂತ್ರಸ್ತ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಮರಳಿ ತರಲು ಪ್ರಯತ್ನಿಸಲಾಗುತ್ತದೆ. 
ಅದಕ್ಕಾಗಿ ರಕ್ಷಣೆ ಮಾಡಿದ ಮಕ್ಕಳ ಕಲ್ಯಾಣಕ್ಕಾಗಿ ಈ ನಿಧಿ ಬಳಕೆಯಾಗುತ್ತದೆ. ಮಕ್ಕಳು ಮತ್ತು ಜಿಲ್ಲಾಧಿಕಾರಿ ಹೆಸರಿನಲ್ಲಿ ಬ್ಯಾಂಕ್‌ನ ಜಂಟಿ ಖಾತೆಯಲ್ಲಿ 35 ಸಾವಿರ ರೂ. ಹಣವನ್ನು ನಿಶ್ಚಿತ ಠೇವಣಿ(ಎಫ್‌ಡಿ) ಇಡಲಾಗುತ್ತದೆ. ಬಾಲ ಕಾರ್ಮಿಕನನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಉದ್ಯೋಗದಾತನಿಂದ ದಂಡ ರೂಪದಲ್ಲಿ 20 ಸಾವಿರ ರೂ. ಮತ್ತು ರಾಜ್ಯ ಸರ್ಕಾರದಿಂದ 15 ಸಾವಿರ ರೂ. ಇದರಲ್ಲಿ ಸೇರಿರುತ್ತದೆ. 
ಕಾರ್ಮಿಕ ಇಲಾಖೆಯ ಬಳಿ ಇದಕ್ಕೆ ಸಂಬಂಧಿಸಿದ ಎಫ್‌ಡಿ ಬಾಂಡ್ ಇರುತ್ತದೆ. ಸಂತ್ರಸ್ತ ಮಕ್ಕಳಿಗೆ ಇದರ ಪ್ರತಿ ಕೊಡಲಾಗುತ್ತದೆ. 18 ವರ್ಷ ತುಂಬಿದ ಬಳಿಕ ಈ ಬಾಂಡ್ ಅನ್ನು ಮಕ್ಕಳಿಗೆ ಹಸ್ತಾಂತರ ಮಾಡಲಾಗುತ್ತದೆ. ಅಸಲು 35 ಸಾವಿರ ರೂಪಾಯಿಯೊಂದಿಗೆ ಬಡ್ಡಿ ಹಣವನ್ನು ಸಂತ್ರಸ್ತರು ಮುಂದಿನ ಭವಿಷ್ಯಕ್ಕೆ ಬಳಕೆ ಮಾಡಿಕೊಳ್ಳಬಹುದಾಗಿದೆ.

ದಂಡದ ಮೊತ್ತ ನಿಧಿಗೆ ವರ್ಗಾವಣೆ:

ಬಾಲ ಕಾರ್ಮಿಕರನ್ನು (14 ವರ್ಷದೊಳಗಿನವರು) ಮತ್ತು ಕಿಶೋರ ಕಾರ್ಮಿಕರನ್ನು (14-18 ವರ್ಷದೊಳಗಿನವರು) ಅಪಾಯಕಾರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಗಂಭೀರ ಅಪರಾಧ. ಉದ್ಯೋಗದಾತರಿಗೆ ಜೈಲು ಶಿಕ್ಷೆ ಹಾಗೂ ಕನಿಷ್ಠ 20 ಸಾವಿರದಿಂದ 50 ಸಾವಿರ ರೂ.ವರೆಗೆ ದಂಡ ವಿಧಿಸಲು ಅವಕಾಶ ಇದೆ. ಈ ದಂಡದ ಪೂರ್ಣ ಮೊತ್ತವನ್ನು ಪುನರ್ವಸತಿ ನಿಧಿಗೆ ವರ್ಗಾಯಿಸಲಾಗುತ್ತದೆ.
1996ರಲ್ಲಿ ಎಂ.ಸಿ.ಮೆಹ್ತಾ ವರ್ಸಸ್ ತಮಿಳುನಾಡು ಸರ್ಕಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಅನ್ವಯ ಪ್ರತಿ ಜಿಲ್ಲೆಯಲ್ಲಿ ಈ ನಿಧಿ ಸ್ಥಾಪನೆಯಾಗಿದ್ದು, ಬಾಲಕಾರ್ಮಿಕರ ಕಲ್ಯಾಣಕ್ಕಾಗಿ ಜಿಲ್ಲಾಧಿಕಾರಿ ಹೆಸರಿನಲ್ಲಿ ಖಾತೆಯಲ್ಲಿ ಇದು ಇರುತ್ತದೆ. ಹಣ ಬಿಡುಗಡೆಗೆ ಎರಡು ಷರತ್ತುಗಳು ಮಾತ್ರ ಇವೆ. ಫಲಾನುಭವಿಗಳಾದ ಮಕ್ಕಳು ಅಪಾಯಕಾರಿ ಕ್ಷೇತ್ರದಿಂದ ರಕ್ಷಿಸಲ್ಪಟ್ಟವರಾಗಿರಬೇಕು. ಇನ್ನೊಂದು, ಅವರು ಶಾಲೆಗೆ ಹೋಗುತ್ತಿರಬೇಕು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಸಂತ್ರಸ್ತರಿಗೆ ಈ ಸೌಲಭ್ಯ ದೊರೆಯುತ್ತಿಲ್ಲ.

3 ವರ್ಷದಲ್ಲಿ 116 ಕೇಸ್‌ಗಳು ಪತ್ತೆ:

ಕಳೆದ ಮೂರು ವರ್ಷದಲ್ಲಿ 116 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಮಾಲೀಕರಿಂದ 3.87 ಲಕ್ಷ ರೂ. ದಂಡ ರೂಪದಲ್ಲಿ ವಸೂಲಾತಿ ಮಾಡಲಾಗಿದೆ. 2023-24ನೇ ಸಾಲಿನಲ್ಲಿ 1,571 ತಪಾಸಣಾ ಕಾರ್ಯಾಚರಣೆ ನಡೆಸಿ 3 ಬಾಲ ಕಾರ್ಮಿಕರು, 28 ಕಿಶೋರರನ್ನು ರಕ್ಷಣೆ ಮಾಡಲಾಗಿದೆ. ಇಬ್ಬರ ಮಾಲೀಕರ ವಿರುದ್ಧ ಎಫ್‌ಐಆರ್ ಹಾಕಿದ್ದು, 28 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. 
ಈ ಪೈಕಿ 4 ಕನಿಷ್ಠ ವೇತನ ನಿಯಮ ಉಲ್ಲಂಘನೆಯ ಪ್ರಕರಣಗಳೂ ಇವೆ. 2024-25ನೇ ಸಾಲಿನಲ್ಲಿ 1,297 ಕಡೆ ತಪಾಸಣಾ ಕಾರ್ಯ ನಡೆಸಿ 3 ಬಾಲ ಕಾರ್ಮಿಕರು, 45 ಕಿಶೋರರನ್ನು ರಕ್ಷಣೆ ಮಾಡಲಾಗಿದೆ. 5 ಮಾಲೀಕರ ವಿರುದ್ಧ ಎಫ್‌ಐಆರ್ ಹಾಕಿದ್ದು, ಉಳಿದ 38 ಪ್ರಕರಣಗಳು ಕೋರ್ಟ್‌ನಲ್ಲಿ ವಿಚಾರಣೆ ಪ್ರಗತಿಯಲ್ಲಿವೆ. ಇನ್ನೂ 2025-26ರಲ್ಲಿ 4 ಬಾಲ ಕಾರ್ಮಿಕರು, 33 ಕಿಶೋರರನ್ನು ರಕ್ಷಣೆ ಮಾಡಲಾಗಿದೆ. ಮಾಲೀಕರ ವಿರುದ್ಧ 27 ಪ್ರಕರಣದಲ್ಲಿ ಎಫ್‌ಐಆರ್ ಹಾಕಲಾಗಿದೆ. ಉಳಿದ ಪ್ರಕರಣಗಳ ಕುರಿತು ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.

ಅರಿವೂ ಇಲ್ಲ, ಮಾಹಿತಿಯೂ ಇಲ್ಲ: 

ಈ ನಿಧಿ ಕುರಿತು ಸರಿಯಾದ ಮಾರ್ಗಸೂಚಿ ಅಥವಾ ಉಸ್ತುವಾರಿ ಇಲ್ಲದೆ ಇರುವುದರಿಂದ ನಿರೀಕ್ಷಿತಮಟ್ಟದಲ್ಲಿ ಬಳಕೆಯೂ ಆಗುತ್ತಿಲ್ಲ. ಕೆಲಸದ ಸ್ಥಳದಿಂದ ರಕ್ಷಿಸಲ್ಪಡುವ ಮಕ್ಕಳನ್ನು ಸ್ವಯಂ ಸೇವಾ ಸಂಸ್ಥೆಗಳು ನಡೆಸುವ ಬಾಲಕಾರ್ಮಿಕರ ಸೇತುಬಂಧನ ಶಾಲೆಗಳಲ್ಲಿ ಒಂದು ವರ್ಷ ಕಾಲ ಪುನರ್ವಸತಿಗೊಳಿಸಲಾಗುತ್ತದೆ. 
ನಂತರ, ಅವರನ್ನು ವಯಸ್ಸಿಗೆ ತಕ್ಕಂತೆ ಶಾಲಾ ತರಗತಿಗೆ ಸೇರಿಸಲಾಗುತ್ತದೆ. ಈ ನಿಧಿಯ ಹಣ ಸೇತುಬಂಧನ ಶಾಲೆಯಿಂದ ಹೊರಹೋದ ಮಕ್ಕಳಿಗೆ ಬಳಸಬೇಕು. ಆದರೆ, ಈ ಸೌಲಭ್ಯ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬೇಕೆಂದು ಹೇಳಲಾಗುತ್ತಿದೆ. ಆದರೆ, ಇದಕ್ಕೆ ಅರ್ಜಿ ಕಾಯುವ ಅವಶ್ಯಕತೆ ಇಲ್ಲ. ಬಾಲ ಕಾರ್ಮಿಕ ಪದ್ಧತಿಯಿಂದ ಹೊರಬಂದ ಸಂತ್ರಸ್ತರಿಗೂ ಈ ಕುರಿತು ಅರಿವು ಮತ್ತು ಮಾಹಿತಿ ಇಲ್ಲ. ಹೀಗಾಗಿ, ಅರ್ಹರಿಗೆ ಈ ಸೌಲಭ್ಯ ದೊರೆಯುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಬಾಲಕಾರ್ಮಿಕ ಪದ್ಧತಿಗೆ ಕಡಿವಾಣ ಬೀಳಲಿ: 

ಆಟ-ಪಾಠದಲ್ಲಿ ಬಾಲ್ಯವನ್ನು ಸಂಭ್ರಮಿಸಬೇಕಿರುವ ಕೆಲ ಮಕ್ಕಳು ಬಾಲಕಾರ್ಮಿಕರಾಗಿ ದುಡಿದು ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಬಡತನ, ಶಿಕ್ಷಣದ ಕೊರತೆ, ಪಾಲಕರ ನಿರುದ್ಯೋಗ, ಸಾಮಾಜಿಕ ಅಜ್ಞಾನ, ಅಗ್ಗದ ಕಾರ್ಮಿಕರ ಬೇಡಿಕೆ, ಕುಟುಂಬದ ಆರ್ಥಿಕ ಸಂಕಷ್ಟಗಳು...ಹೀಗೆ ವಿವಿಧ ಕಾರಣಕ್ಕೆ ಬಾಲ ಕಾರ್ಮಿಕ ಪದ್ಧತಿಯ ಕದಂಬಬಾಹು ಒಳಗೆ ಸಿಲುಕಿಕೊಳ್ಳುತ್ತಿದ್ದಾರೆ.
 ಇದು ಆಧುನಿಕ ಸಮಾಜಕ್ಕೆ ಮತ್ತು ದೇಶದ ಭವಿಷ್ಯದ ದೃಷ್ಟಿಯಿಂದಲೂ ಮಾರಕ. ಆದ್ದರಿಂದ ಮಕ್ಕಳು ಕೆಲಸ ಸ್ಥಳದಲ್ಲಿ ಕಾರ್ಮಿಕರಾಗಿ ದುಡಿಯುವುದನ್ನು ತಪ್ಪಿಸಿ ಅವರಿಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸೂಕ್ತ ವಾತಾವರಣವನ್ನು ಸೃಷ್ಟಿಸಬೇಕಿದೆ. ಅದಕ್ಕಾಗಿ ಕಡ್ಡಾಯ ಶಿಕ್ಷಣ, ಬಡತನ ನಿವಾರಣೆ, ಕಾನೂನುಗಳ ಕಟ್ಟುನಿಟ್ಟಿನ ಅನುಷ್ಠಾನ, ಜನಜಾಗೃತಿ, ಬಾಲ ಕಾರ್ಮಿಕರ ಪುನರ್ವಸತಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಾಗಿದೆ
"

ಬಾಲ ಕಾರ್ಮಿಕರ ಪದ್ಧತಿಯನ್ನು ತಡೆಯಲು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ನಿರಂತರವಾಗಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ. ರಕ್ಷಣೆ ಮಾಡಿರುವ ಮಕ್ಕಳಿಗೆ ‘ಬಾಲಕಾರ್ಮಿಕ ಪುನರ್ವಸತಿ ಮತ್ತು ಕಲ್ಯಾಣ ನಿಧಿ’ಯ ಸೌಲಭ್ಯವನ್ನು ಸಕಾಲಕ್ಕೆ ಕಲ್ಪಿಸಿಕೊಡಲಾಗುತ್ತಿದೆ.

— ಚೇತನ ಕುಮಾರ್ ಜಿಲ್ಲಾ ಕಾರ್ಮಿಕ ಅಧಿಕಾರಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net