ಸಾಂಪ್ರದಾಯಿಕ ಆಹಾರ ಪದಾರ್ಥ ಬಳಸಿ: ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

ನಂಜರಾಜ ಬಹದ್ದೂರ್ ಛತ್ರದಲ್ಲಿ ಆರಂಭವಾದ ಮೂರು ದಿನಗಳ ದೇಸಿ ಎಣ್ಣೆ ಮೇಳಕ್ಕೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್  ಚಾಲನೆ ನೀಡಿದರು
ನಂಜರಾಜ ಬಹದ್ದೂರ್ ಛತ್ರದಲ್ಲಿ ಆರಂಭವಾದ ಮೂರು ದಿನಗಳ ದೇಸಿ ಎಣ್ಣೆ ಮೇಳಕ್ಕೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು
Published on

ಪ್ರಮುಖ ಮುಖ್ಯಾಂಶಗಳು

  • ಇವತ್ತಿನ ಜೀವನ ಶೈಲಿಯಲ್ಲಿ ಆಹಾರ ಎಲ್ಲರಿಗೂ ಸಿಗುತ್ತಿದೆ. ಆದರೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ
  • ಹಣ ಸಂಪಾದನೆ ಮಾಡಬೇಕು, ಉಳಿಸಬೇಕು ಎನ್ನುವ ಧಾವಂತದಲ್ಲಿ ನಮ್ಮ ಆರೋಗ್ಯ ಕಾಪಾಡುವುದನ್ನೇ ಮರೆಯುತ್ತಿದ್ದೇವೆ
ಮೈಸೂರು: ಎಲ್ಲರೂ ಆರ್ಥಿಕತೆ ಸಾಧಿಸುವ ಭರದಲ್ಲಿ ಆರೋಗ್ಯ ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಸಾಂಪ್ರದಾಯಿಕ ಆಹಾರಗಳನ್ನು ಬಳಸುವ ಮೂಲಕ ಆರೋಗ್ಯವನ್ನು ಗಳಿಸಿಕೊಳ್ಳಬೇಕಾಗಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಸಹಜ ಸಮೃದ್ಧ ಮತ್ತು ದೇಸಿರಿ ನ್ಯಾಚುರಲ್ಸ್ ಆಶ್ರಯದಲ್ಲಿ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಆರಂಭವಾದ ಮೂರು ದಿನಗಳ ದೇಸಿ ಎಣ್ಣೆ ಮೇಳವನ್ನು ಎತ್ತಿನ ಗಾಣಕ್ಕೆ ಚಾಲನೆ ನೀಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇವತ್ತಿನ ಜೀವನ ಶೈಲಿಯಲ್ಲಿ ಆಹಾರ ಎಲ್ಲರಿಗೂ ಸಿಗುತ್ತಿದೆ. ಆದರೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಜತೆಗೆ ಕಲಬೆರಕೆ ಉತ್ಪನ್ನಗಳು ಹೆಚ್ಚಾಗುತ್ತಿದ್ದು, ಈ ಕುರಿತು ಜಾಗೃತಿ ಮೂಡಿಸಬೇಕಿದೆ. ಹಣ ಸಂಪಾದನೆ ಮಾಡಬೇಕು, ಉಳಿಸಬೇಕು ಎನ್ನುವ ಧಾವಂತದಲ್ಲಿ ನಮ್ಮ ಆರೋಗ್ಯ ಕಾಪಾಡುವುದನ್ನೇ ಮರೆಯುತ್ತಿದ್ದೇವೆ ಎಂದು ಹೇಳಿದರು.
ನಮ್ಮ ಹಿರಿಯರು ಸಾಂಪ್ರದಾಯಿಕ ಹೆಸರಿನಲ್ಲಿ ವೈಜ್ಞಾನಿಕ ಆಹಾರ ಪದ್ಧತಿ ಹಾಗೂ ಆರೋಗ್ಯ ಉಳಿಸಿಕೊಂಡು ಬಂದಿದ್ದರು. ಆದರೆ ಈಗ ನಾನಾ ವೈವಿಧ್ಯಮಯ ಆಹಾರ ಪದ್ಧತಿಗಳು ಬಂದು ಆಧುನಿಕ ದಿನಗಳಲ್ಲಿ ಆರೋಗ್ಯ ಕಡೆಗಣಿಸಿದ್ದೇವೆ. ಆದ್ದರಿಂದ ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿಗೆ ಮರಳುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಗಾಣದ ಎಣ್ಣೆ ಬಳಕೆ ಮೊದಲ ಹೆಜ್ಜೆಯಾಗಬೇಕು ಎಂದು ಹೇಳಿದರು.
ಸಾಂಪ್ರದಾಯಿಕವಾಗಿ ಉತ್ಪಾದನೆಯಾಗುತ್ತಿದ್ದ ದೇಸಿ ಗಾಣದ ಎಣ್ಣೆಗಳು ನಮ್ಮ ಹಿರಿಯರ ಆರೋಗ್ಯವನ್ನು ಕಾಪಾಡಿದ್ದವು. ಗ್ರಾಹಕರಿಗೆ ಇದರ ಮಹತ್ವ ತಿಳಿಸಲು ಗಾಣದ ಎಣ್ಣೆಯಲ್ಲಿರುವ ಪೋಷಕಾಂಶಗಳ ಬಗ್ಗೆ ಅಧ್ಯಯನ ಮಾಡಿ, ಅದರ ಪ್ರಯೋಜನಗಳನ್ನು ಗ್ರಾಹಕರಿಗೆ ತಿಳಿಸುವಂತೆ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯವನ್ನು ಕೋರಿದರು.
ಶ್ರೀ ಮಂಟೇಸ್ವಾಮಿ ಮಠ ಮತ್ತು ಶ್ರೀ ಕಪ್ಪಡಿ ಕ್ಷೇತ್ರದ ಮಠಾಧಿಪತಿ ಶ್ರೀಕಂಠ ಸಿದ್ಧಲಿಂಗ ರಾಜೇ ಅರಸ್ ಮಾತನಾಡಿ, ಗಾಣದ ಎಣ್ಣೆಗಳು ಸ್ಥಳೀಯ ಆಹಾರ ಸಂಸ್ಕೃತಿಗೆ ಪೂರಕವಾಗಿವೆ. ಇವುಗಳ ಬಳಕೆಯಿಂದ ರೈತರ ಜೀವನ ಮಟ್ಟ ಸುಧಾರಿಸುತ್ತದೆ. ಸ್ಥಳೀಯರಿಗೆ ಉದ್ಯೋಗ ಲಭಿಸುತ್ತದೆ. ದೇಸಿರಿ ನ್ಯಾಚುರಲ್ಸ್ ಗಾಣದ ಗುಣಮಟ್ಟದ ಎಣ್ಣೆಗಳನ್ನು ಉತ್ಪಾದಿಸಿ, ಗ್ರಾಹರಿಗೆ ಕೊಡುವ ಕೆಲಸ ಮಾಡುತ್ತಿರುವುದು ಶ್ಳಾಘನೀಯ ಎಂದರು.
ದೇಸಿರಿ ನ್ಯಾಚುರಲ್ಸ್ ಅಭಿವೃದ್ಧಿಪಡಿಸಿರುವ ಎಣ್ಣೆಯ ಗುಣಮಟ್ಟ ಮತ್ತು ಅದರ ವಿವರಗಳನ್ನು ನೀಡುವ ಕ್ಯೂಆರ್ ಕೋಡ್ ಇರುವ ಎಣ್ಣೆಯ ಬಾಟಲ್ ಬಿಡುಗಡೆ ಮಾಡಿ ಮಾತನಾಡಿದ ಸಿಎಫ್‌ಟಿಆರ್‌ಐ ನಿರ್ದೇಶಕ ಡಾ.ಗಿರಿಧರ್ ಪಾರ್ವತಮಂ, ಇತ್ತೀಚಿನ ದಿನಗಳಲ್ಲಿ ಗಾಣದ ಎಣ್ಣೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದಾಗ್ಯೂ ದೇಶಿಯ ಮಾರುಕಟ್ಟೆ ಬೇಡಿಕೆಯ ಶೇ.45ರಷ್ಟು ಖಾದ್ಯ ತೈಲ ಮಾತ್ರ ಉತ್ಪಾದನೆಯಾಗುತ್ತಿದೆ ಎಂದು ಹೇಳಿದರು.
16.5 ಮಿಲಿಯ ಟನ್ ಖಾದ್ಯ ತೈಲ ಹೊರದೇಶಗಳಿಂದ ಆಮದಾಗುತ್ತಿದೆ. ರೈತ ಗುಂಪುಗಳು, ಮಹಿಳಾ ಸಂಘಗಳು ಈ ಅವಕಾಶವನ್ನು ಬಳಸಿಕೊಂಡು ಸ್ಥಳೀಯವಾಗಿ ಎಣ್ಣೆ ಉತ್ಪಾದನೆ ಮಾಡಿ ಲಾಭ ಗಳಿಸಬಹುದು ಎಂದು ಸಲಹೆ ನೀಡಿದರು.
ಪ್ರಿಸಿಷನ್ ಮೆಡಿಸಿನ್ ವಿಜ್ಞಾನಿ ಡಾ.ಮಮತಾ ಶೇಖರ್ ಮಾತನಾಡಿ, ಗೃಹ ಕೈಗಾರಿಕೆ ಉತ್ಪನ್ನಗಳಿಗೆ ಅಮೆರಿಕ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಇದೆ. ಆದರೆ ಅವನ್ನು ರಫ್ತು ಮಾಡಲು ಇರುವ ಮಾನದಂಡಗಳು ಕಠಿಣವಾಗಿವೆ. ಇದರಿಂದ ಸಣ್ಣ ಉದ್ದಿಮೆದಾರರು ರಫ್ತುದಾರರಾಗುವ ಅವಕಾಶ ಇಲ್ಲದಂತಾಗಿದೆ. ಆದ್ದರಿಂದ ಈ ಮಾನದಂಡಗಳನ್ನು ಸರಳಗೊಳಿಸಲು ಸರ್ಕಾರ ಸಹಕರಿಸಬೇಕು ಎಂದು ಮನವಿ ಮಾಡಿದರು.
ರೋಟರಿ ಕ್ಲಬ್ ಮೈಸೂರಿನ ಸದಸ್ಯ ಡಿ.ರವಿಶಂಕರ್ ಮಾತನಾಡಿ, ನಗರದ ಗ್ರಾಹರಿಗೆ ಅರಿವು ಮೂಡಿಸುವ ಇಂಥ ಮೇಳಗಳು ಹೆಚ್ಚು ನಡೆಯಬೇಕು. ಅದಕ್ಕೆ ರೋಟರಿ ಕ್ಲಬ್ ಅಗತ್ಯ ಸಹಕಾರ ನೀಡುತ್ತದೆ ಎಂದರು.
ಮೈಸೂರು ಕಲ್ಯಾಣ ಮಂಟಪ ಸಂಘದ ಅಧ್ಯಕ್ಷ ಎಸ್.ಮೂರ್ತಿ ಮಾತನಾಡಿ, ಮೇಳಗಳು ಮತ್ತು ಸಾರ್ವಜನಿಕ ಸಮಾರಂಭಗಳು ಪ್ಲಾಸ್ಟಿಕ್ ರಹಿತವಾಗಿರಬೇಕು. ಅದಕ್ಕೆ ಅಗತ್ಯವಿರುವ ಸ್ಟೀಲ್ ತಟ್ಟೆ, ಲೋಟ, ತಾವು ಒದಗಿಸುವುದಾಗಿ ಹೇಳಿದರು.
ಸಹಜ ಸಮೃದ್ಧದ ನಿರ್ದೇಶಕ ಜಿ.ಕೃಷ್ಣ ಪ್ರಸಾದ್ ಮಾತನಾಡಿ, ಸಾಂಪ್ರದಾಯಿಕವಾಗಿ ಗ್ರಾಮೀಣ ಭಾಗದ ರೈತರು ಬೆಳೆಸುತ್ತಿದ್ದ ಹುಚ್ಚೆಳ್ಳು, ಎಳ್ಳು, ಕುಸುಬೆ, ಹರಳು, ಅಗಸೆ ಮೊದಲಾದ ಎಣ್ಣೆಕಾಳುಗಳ ತಯಾರಾಗುತ್ತಿದ್ದ ಗಾಣಗಳು ಮಾಯವಾಗಿವೆ. ಇದರಿಂದ ಗ್ರಾಮಗಳ ಆರ್ಥಿಕತೆ ಮತ್ತು ಗ್ರಾಹಕರ ಆರೋಗ್ಯ ಹಾಳಾಗಿದೆ. ಗಾಣದ ಎಣ್ಣೆಯ ಮಹತ್ವದ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸಲು ಸರ್ಕಾರ ದೇಸಿ ಎಣ್ಣೆ ಮೇಳಗಳನ್ನು ಆಯೋಜಿಸಬೇಕು ಮತ್ತು ಪಡಿತರದಲ್ಲಿ ಗಾಣದ ಎಣ್ಣೆ ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ ಪೋಷಕಾಂಶದ ತಜ್ಞ ಡಾ.ಖಾದರ್ ವಲಿ ಅವರು ಅನ್ನ ಆರೋಗ್ಯದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಸಿಕೊಟ್ಟರು.
ದೇಸಿರಿ ನ್ಯಾಚುರಲ್ಸ್ನ ಎನ್.ಯೋಗೀಷ್, ಎಚ್.ಆರ್.ನವೀನ್‌ಕುಮಾರ್, ಎಂ.ಮಹೇಶ, ಕೆ.ಎಸ್.ಮಂಜು ಇತರರು ಇದ್ದರು.
ಮೇಳದಲ್ಲಿ 50 ಬಗೆಯ ಎಣ್ಣೆ ಪ್ರದರ್ಶನ
ಮೂರು ದಿನಗಳ ಕಾಲ ನಡೆಯಲಿರುವ ದೇಸಿ ಎಣ್ಣೆ ಮೇಳದಲ್ಲಿ ಸಾಂಪ್ರದಾಯಿಕವಾಗಿ ಬಳಕೆಯಲ್ಲಿದ್ದ 50 ಬಗೆಯ ಎಣ್ಣೆಗಳ ಪ್ರದರ್ಶನ ಮತ್ತು ಮಾಹಿತಿ ನೀಡಲಾಗುತ್ತಿದೆ.
ಗಾಣದಿಂದ ತೆಗೆದ ಬಗೆ ಬಗೆಯ ಎಣ್ಣೆ ಸಿಗುತ್ತಿದೆ. ಸ್ಥಳದಲ್ಲಿಯೇ ಎತ್ತಿನ ಗಾಣದ ಎಣ್ಣೆಯ ಉತ್ಪಾದನೆಯನ್ನು ಪ್ರಾಯೋಗಿಕವಾಗಿ ನೋಡಬಹುದು. ಮೇಳಕ್ಕಾಗಿ ಎತ್ತಿನ ಗಾಣ ಹಾಕಲಾಗಿದೆ. ಹರಳೆಣ್ಣೆ ಬೇಯಿಸಿ ಎಣ್ಣೆ ತೆಗೆಯುವ ಪ್ರಾತ್ಯಕ್ಷಿಕೆಯನ್ನು ಮೇಳದಲ್ಲಿ ಖುದ್ದಾಗಿ ವೀಕ್ಷಿಸಬಹುದು.
ಸಿಎಫ್‌ಟಿಆರ್‌ಐ ವಿಜ್ಞಾನಿಗಳು ಕಲಬೆರಕೆ ಎಣ್ಣೆಯನ್ನು ಪತ್ತೆ ಹಚ್ಚುವ ಪ್ರಾತ್ಯಕ್ಷಿಕೆಯನ್ನು ತೋರಿಸಿಕೊಡಲಿದ್ದಾರೆ. ಜೆಎಸ್‌ಎಸ್ ಆರ್ಯುವೇದ ಮಹಾವಿದ್ಯಾಲಯದ ವೈದ್ಯರಿಂದ ಉಚಿತ ಸಲಹೆ, ಎಣ್ಣೆ ಬಳಕೆಯ ಮಾರ್ಗದರ್ಶನ ನೀಡಲಾಗುವುದು. ಆಹಾರ ತಜ್ಞರು ವಿವಿಧ ದೇಹ ಪ್ರಕೃತಿಗಳಿಗೆ ಯೋಗ್ಯವಾದ ಎಣ್ಣೆಗಳ ಬಳಕೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net